ರಾಜ್ಯದ 5,000 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿ (Anganwadi LKG-UKG Classes) ಆರಂಭಿಸಲು ಮುಂದಾಗಿದೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾಹಿತಿ ನೀಡಿದೆ…
ಅಂಗನವಾಡಿಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿ ಆರಂಭಿಸಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ. ಇದೇ ನವೆಂಬರ್‌ನಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಿದ್ದು; ರಾಜ್ಯಾದ್ಯಂತ 5,000 ಅಂಗನವಾಡಿಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿಗಳು ಆರಂಭವಾಗಲಿವೆ.
2026ನೇ ಶೈಕ್ಷಣಿಕ ಸಾಲಿನಲ್ಲಿ 5,000 ಹಾಗೂ 2027ನೇ ಶೈಕ್ಷಣಿಕ ಸಾಲಿನಲ್ಲಿ 15,000 ಅಂಗನವಾಡಿಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿ ಆರಂಭಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ಧರಿಸಿದೆ. ಜೊತೆಗೆ ಇದಕ್ಕಾಗಿ ಪ್ರತೀ ಅಂಗನವಾಡಿಗೆ 2 ಲಕ್ಷ ರೂ. ಅನುದಾನ ಕೂಡ ಒದಗಿಸಲಿದೆ.
ನವೆಂಬರ್ 19ಕ್ಕೆ ಅಧಿಕೃತ ಘೋಷಣೆ
ಈಗ್ಗೆ 50 ವರ್ಷಗಳ ಹಿಂದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಶಿಶು ಅಭಿವೃದ್ಧಿ ಯೋಜನೆಯನ್ನು (ಐಸಿಡಿಎಸ್) ಜಾರಿಗೊಳಿಸಿತ್ತು. ಈ ಮಹತ್ವದ ಯೋಜನೆಯಡಿ ಅಂಗನವಾಡಿ ಕೇಂದ್ರಗಳನ್ನು ಮಾಜಿ ಪ್ರಧಾನಿ ದಿ. ಇಂದಿರಾಗಾAದಿ ಅವರು ಆರಂಭಿಸಿದ್ದರು.
ಇದೀಗ ಐಸಿಡಿಎಸ್ ಯೋಜನೆ 50 ವರ್ಷ ತುಂಬಿದ್ದು; ಇಂದಿರಾಗಾಂಧಿ ಸ್ಮರಣಾರ್ಥ ಅವರ ಹುಟ್ಟುಹಬ್ಬದ ನಿಮಿತ್ತ ಇದೇ ನವೆಂಬರ್ 19ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಅಂಗನವಾಡಿ ಎಲ್‌ಕೆಜಿ-ಯುಕೆಜಿ ತರಗತಿ ಪ್ರಾರಂಭಿಸುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: E-Swathu- ದೀಪಾವಳಿ ನಂತರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ಇ-ಸ್ವತ್ತು ವಿತರಣೆ

ಪ್ರತಿ ಕೇಂದ್ರಕ್ಕೆ 2 ಲಕ್ಷರೂ. ಅನುದಾನ
2024ರ ಜುಲೈ ತಿಂಗಳಿನಲ್ಲಿ ಬೆಂಗಳೂರಿನ ರಾಜಾಜಿನಗರದ ಅಂಗನವಾಡಿ ಕೇಂದ್ರದಲ್ಲಿ ಪ್ರಾಯೋಗಿಕವಾಗಿ ಎಲ್‌ಕೆಜಿ-ಯುಕೆಜಿ ತರಗತಿ ಆರಂಭಿಸಲಾಗಿತ್ತು. ಆಗ ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ 250 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿ ಆರಂಭಿಸುವುದಾಗಿ ತಿಳಿಸಲಾಗಿತ್ತು. ಅನುದಾನದ ಕೊರತೆಯಿಂದ ಈ ಯೋಜನೆ ಮುಂದುವರೆದಿರಲಿಲ್ಲ.
ಎಲ್‌ಕೆಜಿ-ಯುಕೆಜಿ ತರಗತಿಗೆ ಸ್ಮಾರ್ಟ್ ಕ್ಲಾಸ್ ನಡೆಸಲು ಟಿಪಿ, ಆಟದ ಮೈದಾನ ಇರಬೇಕು. ಮಕ್ಕಳಿಗೆ ಎರಡು ಜೊತೆ ಯೂನಿಫಾರಂ, ಬ್ಯಾಗ್-ಪುಸ್ತಕ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ಕೂಡ ನೀಡಬೇಕು. ಇದಕ್ಕಾಗಿ ಪ್ರತಿ ಅಂಗನವಾಡಿ ಕೇಂದ್ರಕ್ಕೆ 5 ಲಕ್ಷ ರೂ. ಅನುದಾನ ನೀಡುವುದಾಗಿ ಈ ಹಿಂದೆ ನಿರ್ಧರಿಸಲಾಗಿತ್ತು. ಅನುದಾನದ ಕೊರತೆಯಿಂದ ಸದ್ಯಕ್ಕೆ ತಲಾ 2 ಲಕ್ಷ ರೂ. ನೀಡಲು ನಿರ್ಧರಿಸಲಾಗಿದೆ.
ಯಾವೆಲ್ಲ ಮಕ್ಕಳಿಗೆ ಅವಕಾಶ?
ಅಂಗನವಾಡಿಗಳಲ್ಲಿ ಆರಂಭವಾಗಲಿರುವ ಪ್ರತಿ ಎಲ್‌ಕೆಜಿ-ಯುಕೆಜಿ ತರಗತಿಗೆ ಒಟ್ಟು 25 ಮಕ್ಕಳಿಗೆ ಪ್ರವೇಶ ನೀಡಲಾಗುತ್ತದೆ. 3 ರಿಂದ 6 ವರ್ಷದೊಳಗಿನ ಮಕ್ಕಳು ಅಂಗನವಾಡಿಗೆ ಬರುತ್ತಾರೆ. ಇವರಲ್ಲಿ 4 ರಿಂದ 5 ವರ್ಷದ ಮಕ್ಕಳಿಗೆ ಎಲ್‌ಕೆಜಿ ಹಾಗೂ 5 ರಿಂದ 6 ವರ್ಷದ ಮಕ್ಕಳಿಗೆ ಯುಕೆಜಿ ಪಾಠ ಮಾಡಲು ಎರಡು ತಂಡವನ್ನು ರಚಿಸಲಾಗುತ್ತದೆ. ಸಂಪೂರ್ಣ ಉಚಿತವಾಗಿ ಎಲ್‌ಕೆಜಿ-ಯುಕೆಜಿ ಶಿಕ್ಷಣ ನೀಡಲಾಗುತ್ತದೆ.
ಇದನ್ನೂ ಓದಿ: PUC Pass Head Constable – ಪಿಯುಸಿ ಪಾಸಾದವರಿಗೆ ಹೆಡ್ ಕಾನ್‌ಸ್ಟೆಬಲ್ ಹುದ್ದೆಗಳು | 509 ಹುದ್ದೆಗಳಿಗೆ ಅರ್ಜಿ ಆಹ್ವಾನ
ಹೊಸ ಟೀಚರ್ ನೇಮಕವಾಗುತ್ತಾ?
ರಾಜ್ಯದಲ್ಲಿ ಒಟ್ಟು 69,000 ಅಂಗನವಾಡಿ ಕೇಂದ್ರಗಳಿವೆ. ಒಂದೊಂದು ಕೇಂದ್ರದಲ್ಲಿ ಒಬ್ಬ ಅಂಗನವಾಡಿ ಕಾರ್ಯಕರ್ತೆ ಹಾಗೂ ಒಬ್ಬ ಸಹಾಯಕಿ ಸೇರಿ ಒಟ್ಟು ಇಬ್ಬರು ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಎಲ್‌ಕೆಜಿ-ಯುಕೆಜಿ ತರಗತಿಗೆ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದಿಲ್ಲ.
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಪಿಯುಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಆದರೆ, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಕರ್ತೆಯರ ಪೈಕಿ ಬರೋಬ್ಬರಿ 17,000ಕ್ಕೂ ಹೆಚ್ಚು ಮಂದಿ ಪದವೀಧರಾಗಿದ್ದಾರೆ. ಇವರನ್ನೇ ಎಲ್‌ಕೆಜಿ-ಯುಕೆಜಿ ತರಗತಿಗೆ ತರಬೇತಿ ನೀಡುವ ಯೋಜನೆ ಇಲಾಖೆಯದ್ದಾಗಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.