Old Age Pension New Rules : ಕಂದಾಯ ಇಲಾಖೆಯಿಂದ ವೃದ್ಧಾಪ್ಯ ವೇತನ (National Old Age Pension Scheme), ಸಂಧ್ಯಾ ಸುರಕ್ಷಾ ಯೋಜನೆಯಡಿ (Sandhya Suraksha Yojana) ಮಾಸಾಶನ ಪಡೆಯುತ್ತಿರುವ ಪಿಂಚಣಿದಾರರಿಗೆ ಹೊಸ ನಿಯಮ (New Rules) ಅನ್ವಯಗೊಳಿಸಿದ್ದು; ಹಿರಿಯ ನಾಗರಿಕರು ಪಿಂಚಣಿಗಾಗಿ ಪರದಾಡುವ ಪಾಡು ನಿರ್ಮಾಣವಾಗಿದೆ.
ಹೌದು, ಸರಕಾರ ಪ್ರತ್ಯೇಕ ವಯೋಮಾನ ದಾಖಲೆ ಒದಗಿಸುವ ಹೊಸ ನಿಯಮ ಜಾರಿಗೊಳಿಸಿದ್ದು; ವಯೋವೃದ್ಧರು ವಯಸ್ಸಿನ ದೃಢಿಕರಣ ಪತ್ರಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರ ಬಳಿ ಅಲೆಯುವಂತಾಗಿದೆ. ವಯೋಮಾನ ದಾಖಲೆ ಒದಗಿಸದೇ ಇದ್ದಲ್ಲಿ ಪಿಂಚಣಿ ಹಣಕ್ಕೆ ಕುತ್ತು ಎದುರಾಗುವ ಭಯ ಹಿರಿಯ ನಾಗರಿಕನ್ನು ಕಾಡತೊಡಗಿದೆ.
ಏನಿದು ವಯೋಮಾನ ದೃಢಿಕರಣ?
‘ಫಲಾನುಭವಿಗಳ ನಿರ್ವಹಣಾ ವ್ಯವಸ್ಥೆ (Beneficiary Management System)’ ತಂತ್ರಾ೦ಶದಲ್ಲಿ ವೃದ್ಧಾಪ್ಯ ವೇತನ ಸೇರಿದಂತೆ ಇತರೆ ಯೋಜನೆಗಳಡಿ ಮಾಸಿಕ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ನಿಖರ ದಾಖಲೀಕರಣ ನಡೆದಿದೆ. ಹೀಗಾಗಿ ವೃದ್ಧಾಪ್ಯ ವೇತನ ಪಡೆಯುವ ನಾಗರಿಕರು ತಮ್ಮ ನಿಖರ ವಯಸ್ಸಿನ ದಾಖಲೆಯನ್ನು ಒದಗಿಸಬೇಕಿದೆ.
ಸಾಮಾನ್ಯವಾಗಿ ಪ್ರತಿಯೊಬ್ಬರ ಆಧಾರ್ ಕಾರ್ಡ್’ನಲ್ಲಿಯೇ ಜನ್ಮ ದಿನಾಂದ ಮಾಹಿತಿ ಇರುತ್ತದೆ. ಆದರೆ 2018ರ ಡಿಸೆಂಬರ್ನಲ್ಲಿ ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹೊರಡಿಸಿರುವ ಅಧಿಕೃತ ಜ್ಞಾಪನಾ ಪತ್ರದ ಪ್ರಕಾರ ಆಧಾರ್ ಕಾರ್ಡ್’ನಲ್ಲಿರುವ ಜನ್ಮ ದಿನಾಂಕದ ಮಾಹಿತಿಯನ್ನು ವಯಸ್ಸಿನ ದಾಖಲೆಯಾಗಿ ಪರಿಗಣಿಸುವಂತಿಲ್ಲ.
ಈ ಕಾರಣಕ್ಕಾಗಿ ಮತದಾರರ ಗುರುತಿನ ಚೀಟಿಯಲ್ಲಿರುವ ಜನ್ಮ ದಿನಾಂಕದೊAದಿಗೆ ವಯಸ್ಸಿನ ನಿಖರತೆಯನ್ನು ಪರಿಶೀಲಿಸಲಾಗುತ್ತಿದೆ. ವಯಸ್ಸಿನ ನಿಖರತೆಯ ಬಗ್ಗೆ ಅನುಮಾನ ಉಂಟಾದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಂದ ದೃಢೀಕರಣ ಪಡೆಯಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಯಾರೆಲ್ಲ ವಯಸ್ಸಿನ ದೃಢೀಕರಣ ಒದಗಿಸಬೇಕು?
ರಾಜ್ಯದಲ್ಲಿ ‘ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ’ಯಡಿ 20.25 ಲಕ್ಷ ಜನ ಹಾಗೂ ‘ಸಂಧ್ಯಾ ಸುರಕ್ಷಾ ಯೋಜನೆ’ಯಡಿ 30.82 ಲಕ್ಷ ಜನ ಮಾಸಿಕ ವೃದ್ಧಾಪ್ಯವೇತನ ಪಡೆಯುತ್ತಿದ್ದಾರೆ. ಈ ಪೈಕಿ 49.46 ಲಕ್ಷ ಹಿರಿಯ ನಾಗರಿಕರು ಮಾಸಿಕ 1,200 ರೂಪಾಯಿ ಪಿಂಚಣಿ ಪಡೆಯುತ್ತಿದ್ದಾರೆ.
ಈ ಎರಡೂ ಯೋಜನೆಗಳ ಅಡಿಯಲ್ಲಿ 60 ವರ್ಷ ಹಾಗೂ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆಧಾರ್ ಆಧಾರಿತ ಪಿಂಚಣಿ ವ್ಯವಸ್ಥೆ ರೂಪಿಸಲಾಗಿದೆ. ಫಲಾನುಭವಿಗಳ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆ ಅಥವಾ ಅಂಚೆ ಖಾತೆಗೆ ಪಿಂಚಣಿ ಪಾವತಿಸುವ ವ್ಯವಸ್ಥೆ ಇದೆ.
ವಯಸ್ಸಿನ ದೃಢೀಕರಣ ಎಲ್ಲಿ ಪಡೆಯಬೇಕು?
ವಯಸ್ಸಿನ ನಿಖರತೆಯ ಬಗ್ಗೆ ಸಂದೇಹ ಉಂಟಾದಲ್ಲಿ ಮಾತ್ರ ವಯಸ್ಸಿನ ದೃಢೀಕರಣ ಒದಗಿಸಬೇಕಾಗುತ್ತದೆ. ಇದಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಂದ ದೃಢೀಕರಣ ಪಡೆಯಬಹುದು. ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳಿಗೆ ಮಾಹಿತಿ ಇಲ್ಲದಿದ್ದಲ್ಲಿ ಜಿಲ್ಲಾ ಚಿಕಿತ್ಸಕರ ಬಳಿ ಪಡೆಯಬಹುದಾಗಿದೆ.
ಈ ಹಿಂದೆ ಹಿರಿಯ ನಾಗರಿಕರು ಸೇರಿದಂತೆ ಮಾಶಾಸನ ಪಡೆಯುವ ಎಲ್ಲಾ ಪಿಂಚಣಿದಾರರು ಕಡ್ಡಾಯವಾಗಿ ಎನ್ಪಿಸಿಐ ಮತ್ತು ಆಧಾರ್ ಜೋಡಣೆ (ಇ-ಕೆವೈಸಿ) ಮಾಡಿಸಬೇಕು ಎಂಬ ನಿಯಮ ಜಾರಿಗೊಳಿಸಲಾಗಿತ್ತು. ಇದೀಗ ವಯಸ್ಸಿನ ದೃಢೀಕರಣದ ಪರದಾಟ ಶುರುವಾಗಿದೆ. ಸರಕಾರ ಹಿರಿಯ ನಾಗರಿಕರ ವಿಚಾರದಲ್ಲಿ ನಿಯಮ ಸರಳಗೊಳಿಸುವ ಅಗತ್ಯವಿದೆ ಎಂಬ ಆಗ್ರಹ ಕೇಳಿ ಬರುತ್ತಿದೆ.