7th Pay Commission Report in Monsoon Session : ರಾಜ್ಯಾದ್ಯಂತ ಸರಕಾರಿ ನೌಕರರ ಮುಷ್ಕರದ ಕಾವು ಏರುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತೀರ್ಮಾನದಂತೆ ಕಳೆದ ಜುಲೈ 8 ರಿಂದ 14ರ ತನಕ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ 7ನೇ ವೇತನ ಆಯೋಗದ (7th Pay Commission) ವರದಿ ಜಾರಿಗೊಳಿಸಿ ಎಂದು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಕೆ ಮಾಡಲಾಗುತ್ತಿದೆ. ಜುಲೈ ಕೊನೆಗೆ ಅಥವಾ ಆಗಸ್ಟ್ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ಸಂಘ ಹೇಳಿದೆ.
ಇದೀಗ 7ನೇ ವೇತನ ಆಯೋಗದ ವರದಿ ಜಾರಿ ಕುರಿತು ಸರಕಾರದ ಮಟ್ಟದಲ್ಲಿ ಚಿಂತನೆ ನಡೆಯುವ ಭರವಸೆ ವ್ಯಕ್ತವಾಗಿದೆ. ಇದೇ ಜುಲೈ 15ರಿಂದ 26ರ ವರೆಗೆ 16ನೇ ವಿಧಾನ ಸಭೆಯ ನಾಲ್ಕನೇ ಅಧಿವೇಶನ (Assembly Session) ನಡೆಯಲಿದೆ. ಒಟ್ಟು ಒಂಬತ್ತು ದಿನಗಳ ಕಾಲ ನಡೆಯಲಿರುವ ಮುಂಗಾರು ಅಧಿವೇಶನದಲ್ಲಿ (Monsoon session) 7ನೇ ವೇತನ ಆಯೋಗದ ವರದಿ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
ಮುಷ್ಕರಕ್ಕೆ ತಯಾರಿ!
ರಾಜ್ಯ ವಿತ್ತ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳೆದ ಮಾರ್ಚ್ 16, 2024ರಂದು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ವರದಿ ನೀಡಲಾಗಿತ್ತು. ಕಳೆದ ಎರಡು ಸಂಪುಟ ಸಭೆಯಲ್ಲಿ ಸದರಿ ವರದಿ ಕುರಿತು ಯಾವುದೇ ಗಂಭೀರ ಚರ್ಚೆ ಆಗದೇ ಇದ್ದುದರಿಂದ ನೌಕರರ ವಲಯ ಅಸಮಾಧಾನಕ್ಕೆ ಒಳಗಾಗಿದೆ.
ಈಗಾಗಲೇ 7ನೇ ವೇತನ ಆಯೋಗದ ವರದಿ ಜಾರಿಗೊಳಿಸುವಂತೆ ರಾಜ್ಯಾದ್ಯಂತ ಸರಕಾರಿ ನೌಕರರು ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಕೆ ಆಂದೋಲನ ನಡೆಸುತ್ತಿದ್ದಾರೆ. ಬಳಿಕ ಬೆಂಗಳೂರಿನಲ್ಲಿ ರಾಜ್ಯ ಕಾರ್ಯಕಾರಣಿ ಸಭೆ ನಡೆಸಿ, ಸರ್ಕಾರ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರದ ದಿನಾಂಕವನ್ನು ನಿರ್ಧರಿಸಲಿದೆ.
ಹಣಕಾಸು ಇಲಾಖೆಯ ವರದಿ
7ನೇ ವೇತನ ಆಯೋಗದ ವರದಿ ಜಾರಿಗೆ ಹಣಕಾಸು ಹೊಂದಾಣಿಕೆ ಕುರಿತು ವರದಿ ನೀಡಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದರು. ಈಗ ಅಧಿಕಾರಿಗಳು ಸಮಗ್ರ ವರದಿಯನ್ನು ಮುಖ್ಯಮಂತ್ರಿಗಳಿಗೆ ನೀಡಿದ್ದು, ಆಗಸ್ಟ್ನಲ್ಲಿ ವರದಿ ಶಿಫಾರಸು ಜಾರಿ ಕುರಿತು ಸರ್ಕಾರ ತೀರ್ಮಾನ ಮಾಡುವ ನಿರೀಕ್ಷೆ ಇದೆ.
ವೇತನ ಆಯೋಗ ವರದಿ ನೀಡುವಾಗ ಶೇ.27ರಷ್ಟು ವೇತನ ಹೆಚ್ಚಳಕ್ಕೆ ಶಿಫಾರಸು ಮಾಡಿದೆ. ಈ ಮೊದಲಿದ್ದ ಬಿಜೆಪಿ ನೇತೃತ್ವದ ಸರಕಾರ ಶೇ.17ರ ಮಧ್ಯಂತರ ಪರಿಹಾರ ಘೋಷಣೆ ಮಾಡಿತ್ತು. ಹೀಗಾಗಿ ಈಗ ಸರ್ಕಾರ ಶೇ.10.5ರಷ್ಟು ಹೆಚ್ಚಳ ಮಾಡಲು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂಬ ಮಾಹಿತಿ ಇದೆ.
‘ಸಂಬಳ ಏರಿಕೆ’ ಸಿಹಿಸುದ್ದಿ ನಿಶ್ಚಿತ
ರಾಜ್ಯ ಸರಕಾರ ನೌಕರರಿಗೆ ವೇತನ, ಭತ್ಯೆ ಏರಿಕೆಗಾಗಿಯೇ 2024-25ನೇ ಸಾಲಿನ ಬಜೆಟ್‌ನಲ್ಲಿ 14,000 ಕೋಟಿ ರೂಪಾಯಿ ಮೀಸಲಿಟ್ಟಿದೆ. ವರ್ಷಕ್ಕೆ ಸುಮಾರು 17,000 ಕೋಟಿ ರೂಪಾಯಿ ಅಗತ್ಯವಿದ್ದು; ಇದರ ಹೊಂದಾಣಿಕೆ ಕುರಿತು ಆರ್ಥಿಕ ಇಲಾಖೆಯು ಮುಖ್ಯಮಂತ್ರಿಗೆ ವರದಿ ನೀಡಿದೆ.
ಇದೀಗ ಜುಲೈ 15ರಿಂದ 9 ದಿನಗಳ ಕಾಲ ನಡೆಯಲಿರುವ ಮುಂಗಾರು ಅಧಿವೇಶನದಲ್ಲಿ 7ನೇ ವೇತನ ಆಯೋಗದ ವರದಿ ಜಾರಿ ಕುರಿತು ವಿವರವಾದ ಚರ್ಚೆ ನಡೆದು ಅಂತಿಮ ತೀರ್ಮಾನ ಪ್ರಕವಾಗುವ ಭರವಸೆ ಇದೆ. ಬಹುಶಃ ಸರಕಾರದ ಹಂತದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಸರಕಾರಿ ನೌಕರರ ‘ಸಂಬಳ ಏರಿಕೆ’ ಸಿಹಿಸುದ್ದಿ ನಿಶ್ಚಿತ ಎನ್ನಲಾಗುತ್ತಿದೆ.
ಎಷ್ಟು ಜನರಿಗೆ ಅನುಕೂಲವಾಗಲಿದೆ?
ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಟ್ಟು 5.20 ಲಕ್ಷ ಸರಕಾರಿ ನೌಕರರು, 2.50 ಲಕ್ಷ ನಿಗಮ, ಮಂಡಳಿ, ಪ್ರಾಧಿಕಾರಗಳ ನೌಕರರಿದ್ದಾರೆ. ಜೊತೆಗೆ 4.50 ಲಕ್ಷ ನಿವೃತ್ತ ನೌಕರರಿದ್ದು; ಒಟ್ಟಾರೆ 12.20 ಲಕ್ಷ ನೌಕರ ಕುಟುಂಬಗಳು ಸರಕಾರದ ನಿರ್ಧಾರವನ್ನು ಎದುರು ನೋಡುತ್ತಿವೆ.
ನಿರೀಕ್ಷೆಯಂತೆ ರಾಜ್ಯ ಸರಕಾರ ಈ ಮುಂಗಾರು ಅಧಿವೇಶನದಲ್ಲಿ 7ನೇ ವೇತನ ಆಯೋಗದ ವರದಿ ಜಾರಿಗೊಳಿಸಿದರೆ ಇಷ್ಟೂ ಕುಟುಂಬಗಳಿಗೆ ಅನುಕೂಲವಾಗಲಿದೆ. ನೌಕರರ ಪಾಲಿಗೆ ಕಾಂಗ್ರೆಸ್ ಸರಕಾರ ಹೊಸ ಭರವಸೆಯಾಗಿ ಉಳಿಯಲಿದೆ.
3 thoughts on “ಜುಲೈ 15ರಿಂದ ಮುಂಗಾರು ಅಧಿವೇಶನ: ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿದೆ ‘ಸಂಬಳ ಏರಿಕೆ’ ಸಿಹಿಸುದ್ದಿ? 7th Pay Commission Report in Monsoon Session”