
ಭಾರತೀಯ ರೈಲ್ವೆ ಇಲಾಖೆಯಲ್ಲಿ ಪಿಯುಸಿ ಹಾಗೂ ಪದವೀಧರ ಅಭ್ಯರ್ಥಿಗಳಿಗೆ ಒಟ್ಟು 30,000ಕ್ಕೂ ಹೆಚ್ಚು ಹುದ್ದೆಗಳ ಬೃಹತ್ ನೇಮಕಾತಿ (Railway Job Recruitment) ನಡೆಯಲಿದ್ದು; ಈ ಕುರಿತ ಮಾಹಿತಿ ಇಲ್ಲಿದೆ…
ರೈಲ್ವೆ ಇಲಾಖೆಯಲ್ಲಿ ಈ ಭಾರೀ ಪ್ರಮಾಣದಲ್ಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ನಾನ್ ಟೆಕ್ನಿಕಲ್ ಪ್ಯಾಪುಲರ್ ಕೆಟಗರಿ (Non-Technical Popular Category-NTPC) ಹುದ್ದೆಗಳ ಸಂಖ್ಯೆ ಅತಿ ಹೆಚ್ಚು ಏರಿಕೆಯಾಗಿದ್ದು, ಒಟ್ಟು 30,307 ಹುದ್ದೆಗಳಿಗೆ ಪಿಯುಸಿ ಹಾಗೂ ಪದವೀಧರ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ಈ ಸಂಬಂಧ ಆರ್‌ಆರ್‌ಬಿಯಿಂದ ಕಿರು ಅಧಿಸೂಚನೆಯನ್ನು ಹೊರಡಿಸಲಾಗಿದ್ದು; ಅದರನ್ವಯ ಈ ಹುದ್ದೆಗಳಿಗೆ ಆಗಸ್ಟ್ 30ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಸೆಪ್ಟೆಂಬರ್ 29 ಕೊನೆಯ ದಿನಾಂಕವಾಗಿದೆ ಎಂದು ತಿಳಿಸಲಾಗಿದೆ.
E-Swathu Digital Records- ಇ-ಸ್ವತ್ತು ಯೋಜನೆ: ಗ್ರಾಮೀಣ ಆಸ್ತಿಗೆ ಡಿಜಿಟಲ್ ದಾಖಲೆ ಪಡೆಯಲು ಅರ್ಜಿ ಆಹ್ವಾನ
ಹುದ್ದೆಗಳ ವಿವರ
ಈ ಬಾರಿ 30,307 ಹುದ್ದೆಗಳ ನೇಮಕಾತಿ ಪ್ರಕಟವಾಗಿದ್ದು, ಇದರಲ್ಲಿ ಪ್ರಮುಖ ಹುದ್ದೆಗಳ ವಿವರ ಹೀಗಿವೆ:
- ಚೀಫ್ ಕಮರ್ಷಿಯಲ್ ಕಂ ಟಿಕೆಟ್ ಸೂಪರ್‌ವೈಸರ್ – 6,235 ಹುದ್ದೆಗಳು
- ಸ್ಟೇಷನ್ ಮಾಸ್ಟರ್ – 5,623 ಹುದ್ದೆಗಳು
- ಗೂಡ್ಸ್ ಟ್ರೈನ್ ಮ್ಯಾನೇಜರ್ – 3,562 ಹುದ್ದೆಗಳು
- ಜೂನಿಯರ್ ಅಕೌಂಟೆಂಟ್ ಕಂ ಟೈಪಿಸ್ಟ್ – 7,520 ಹುದ್ದೆಗಳು
- ಸೀನಿಯರ್ ಕ್ಲರ್ಕ್ ಕಂ ಟೈಪಿಸ್ಟ್ – 7,367 ಹುದ್ದೆಗಳು
ಈ ಹುದ್ದೆಗಳು ಕೌಶಲ್ಯ, ಸಾಮಾನ್ಯ ಜ್ಞಾನ ಮತ್ತು ನಿರ್ವಹಣಾ ಸಾಮರ್ಥ್ಯದ ಮೇಲೆ ಆಧಾರಿತವಾಗಿದ್ದು, ರೈಲ್ವೆ ವ್ಯವಸ್ಥೆಯ ದೈನಂದಿನ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಕರ್ನಾಟಕದ ಅಭ್ಯರ್ಥಿಗಳಿಗೆ ಭಾರೀ ಅವಕಾಶ
ದೇಶದ ಎಲ್ಲ 43 ರೈಲ್ವೆ ರಿಕ್ರೂಟ್‌ಮೆಂಟ್ ಬೋರ್ಡ್’ಗಳು (RRB) ಈ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿವೆ. ಕಳೆದ ಬಾರಿ ಬೆಂಗಳೂರು ಆರ್‌ಆರ್‌ಬಿವೊಂದರಲ್ಲೇ 2,400ಕ್ಕೂ ಹೆಚ್ಚು ಹುದ್ದೆಗಳು ಇದ್ದವು. ಈ ಬಾರಿ ಇನ್ನೂ ಹೆಚ್ಚಿನ ಸ್ಥಾನಗಳು ಭರ್ತಿಯಾಗುವ ಸಾಧ್ಯತೆಗಳಿವೆ. ಆ ಮೂಲಕ ರಾಜ್ಯದ ಅಭ್ಯರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶ ಸಿಗಲಿದೆ.
ಮಾಸಿಕ ವೇತನ ಮತ್ತು ಭತ್ಯೆ ವಿವರಗಳು
ಚೀಫ್ ಕಮರ್ಷಿಯಲ್ ಕಂ ಟಿಕೆಟ್ ಸೂಪರ್‌ವೈಸರ್ ಮತ್ತು ಸ್ಟೇಷನ್ ಮಾಸ್ಟರ್ ಹುದ್ದೆಗಳಿಗೆ ಆರನೇ ವೇತನ ಶ್ರೇಣಿ ಅನ್ವಯಿಸಲಾಗಿದ್ದು, ಆರಂಭಿಕ ವೇತನ ₹35,400/- ನಿಗದಿಪಡಿಸಲಾಗಿದೆ.
ಗುಡ್ಸ್ ಟ್ರೈನ್ ಮ್ಯಾನೇಜರ್, ಜೂನಿಯರ್ ಅಕೌಂಟೆಂಟ್, ಸೀನಿಯರ್ ಕ್ಲರ್ಕ್ ಹುದ್ದೆಗಳಿಗೆ ಐದನೇ ವೇತನ ಶ್ರೇಣಿ, ಆರಂಭಿಕ ವೇತನ ₹29,200/- ಇರಲಿದೆ.
ಇನ್ನು ಪಿಯುಸಿ ಅರ್ಹತೆ ಹೊಂದಿರುವ ಹುದ್ದೆಗಳಿಗೆ ₹19,900 ರಿಂದ ₹35,400ರ ವರೆಗೆ ವೇತನ ಶ್ರೇಣಿಯನ್ನು ನಿಗದಿಗೊಳಿಸಲಾಗಿದೆ. ಇದರ ಜೊತೆಗೆ ವಿವಿಧ ಭತ್ಯೆಗಳು ಮತ್ತು ಸರ್ಕಾರಿ ಸೌಲಭ್ಯಗಳು ಅನ್ವಯವಾಗುತ್ತವೆ.
ವಯೋಮಿತಿ ಅರ್ಹತೆ
ಈ ಎಲ್ಲ ಹುದ್ದೆಗಳಿಗೆ 18ರಿಂದ 36 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಕೋವಿಡ್-19 ಕಾರಣದಿಂದಾಗಿ ಒಂದು ಬಾರಿಯ ಕ್ರಮವಾಗಿ ಎಲ್ಲ ಹುದ್ದೆಗಳ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪರೀಕ್ಷೆ ಹೇಗಿರಲಿದೆ?
ಪದವಿ ವಿದ್ಯಾರ್ಹತೆಯ ಹುದ್ದೆಗಳಿಗೆ ಎರಡು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಮೊದಲ ಹಂತದಲ್ಲಿ 100 ಅಂಕಗಳಿಗೆ ಪರೀಕ್ಷೆ ನಡೆದರೆ, ಎರಡನೇ ಹಂತದಲ್ಲಿ 120 ಅಂಕಗಳ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. 90 ನಿಮಿಷಗಳ ಅವಧಿಯನ್ನು ನೀಡಲಾಗಿರುತ್ತದೆ.
ಸಾಮಾನ್ಯ ಜ್ಞಾನ, ಗಣಿತ ಹಾಗೂ ಸಾಮಾನ್ಯ ಬುದ್ಧಿಮತ್ತೆಯ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಉನ್ನತ ಹುದ್ದೆಗಳಿಗಾಗಿ ಎರಡನೇ ಹಂತದ ಪರೀಕ್ಷೆಯಲ್ಲಿ ಅರ್ಹತೆ ಪಡೆಯಬೇಕಿರುತ್ತದೆ. ಪಿಯುಸಿ ವಿದ್ಯಾರ್ಹತೆಗೆ ಒಂದು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ ಇರಲಿದ್ದು, ಎರಡನೇ ಹಂತದಲ್ಲಿ ಟೈಪಿಂಗ್ ಸೇರಿ ಇತರ ಕೌಶಲ ಪರೀಕ್ಷೆ ನಡೆಸಲಾಗುತ್ತದೆ.
ಅರ್ಜಿ ಸಲ್ಲಿಕೆ ಮತ್ತು ಶುಲ್ಕ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ನಡೆಯಲಿದ್ದು; ಅರ್ಹ ಅಭ್ಯರ್ಥಿಗಳು ಒಂದು ಆರ್‌ಆರ್‌ಬಿಗೆ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಬೇಕಿರುತ್ತದೆ. ಅರ್ಜಿ ಶುಲ್ಕವು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹500 ಹಾಗೂ ಇತರೆ ವರ್ಗಗಳ ಅಭ್ಯರ್ಥಿಗಳಿಗೆ ₹250 ನಿಗದಿಪಡಿಸಲಾಗಿದೆ.
ಹುದ್ದೆಗಳ ಪ್ರಾಥಮಿಕ ಆಯ್ಕೆಗಾಗಿ, ಅರ್ಜಿಯಲ್ಲಿ ಅಭ್ಯರ್ಥಿಗಳು ತಮ್ಮ ಆದ್ಯತೆಗಳನ್ನು ಸ್ಪಷ್ಟವಾಗಿ ನಮೂದಿಸಬೇಕು. ಆದ್ಯತೆ ನೀಡದೇ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ: 30 ಆಗಸ್ಟ್ 2025
- ಅರ್ಜಿ ಸಲ್ಲಿಕೆ ಕೊನೆ: 29 ಸೆಪ್ಟೆಂಬರ್ 2025
ಆಗಸ್ಟ್ 30ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು; ಅರ್ಹತೆ ಹೊಂದಿರುವ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ವಿವರಗಳಿಗೆ ಅಧಿಕೃತ ರೈಲ್ವೆ ನೇಮಕಾತಿ ವೆಬ್‌ಸೈಟ್ ಪರಿಶೀಲಿಸಿ.
ವೆಬ್‌ಸೈಟ್ ಲಿಂಕ್: rrbbnc.gov.in