Aadhaar Update for Children- ಕೂಡಲೇ ಅಪ್ಡೇಟ್ ಮಾಡಿಸದಿದ್ದರೆ 7 ವರ್ಷ ಮೀರಿದ ಮಕ್ಕಳ ‘ಆಧಾರ್’ ಕಾರ್ಡ್ ರದ್ದು: UIDAI ಎಚ್ಚರಿಕೆ

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು 7 ವರ್ಷ ಮೀರಿದ ಮಕ್ಕಳ ಆಧಾರ್ ಅಪ್ಡೇಟ್ (Aadhaar Update for Children) ಮಾಡದಿದ್ದರೆ ಆಧಾರ್ ರದ್ದಾಗಬಹುದು ಎಂದು ಸೂಚನೆ ನೀಡಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು (Unique Identification Authority of India- UIDAI) 7 ವರ್ಷ ತುಂಬಿದ ಮಕ್ಕಳಿಗೆ ಬಯೋಮೆಟ್ರಿಕ್ ಅಪ್‌ಡೇಟ್ ಮಾಡಿಸದಿದ್ದರೆ ಅವರ ಆಧಾರ್ ಕಾರ್ಡ್ ರದ್ದಾಗಲಿದೆ ಎಂದು ಎಚ್ಚರಿಸಿದೆ. ಈ ಬಗ್ಗೆ ಎಸ್‌ಎಂಎಸ್ ಮೂಲಕ ಪೋಷಕರಿಗೆ ಮಾಹಿತಿ ಕೂಡ ನೀಡಲಾಗುತ್ತಿದೆ.
ಮಕ್ಕಳ ಆಧಾರ್ ಹೇಗೆ ಬದಲಾಗುತ್ತೆ?
ಮಕ್ಕಳಿಗೆ 5 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿಯೇ ಆಧಾರ್ ಮಾಡಿಸಬಹುದು. ಆದರೆ ಆ ಸಮಯದಲ್ಲಿ UIDAI ಮಕ್ಕಳ ಫೋಟೋ, ಹೆಸರು, ಜನ್ಮ ದಿನಾಂಕ, ಲಿಂಗ ಮತ್ತು ವಿಳಾಸ ಪಡೆದು ಪೋಷಕರ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾಗಿರುತ್ತದೆ.
ಮಕ್ಕಳ ದೈಹಿಕ ಲಕ್ಷಣಗಳು ಹಂತಹಂತವಾಗಿ ಬದಲಾಗುತ್ತವೆ. ಇದರಿಂದ ಈ ಹಂತದಲ್ಲಿ ಮಕ್ಕಳ ಬೆರಳಚ್ಚು (fingerprint) ಅಥವಾ ಕಣ್ಣಿನ ಪಾಪೆಯ (iris) ಸ್ಕ್ಯಾನ್ ಸಾಧ್ಯವಿಲ್ಲ. ಹೀಗಾಗಿ ಏಳು ವರ್ಷದ ನಂತರ ಈ ಎರಡು ಪ್ರಕ್ರಿಯೆಗಳನ್ನು ಮಾಡಿಸಬೇಕು.
7ನೇ ವರ್ಷದೊಳಗೆ ಬಯೋಮೆಟ್ರಿಕ್ ಅಪ್‌ಡೇಟ್ ಕಡ್ಡಾಯ
ಮಕ್ಕಳಿಗೆ 5 ರಿಂದ 7 ವರ್ಷದೊಳಗಿನ ವಯಸ್ಸಾದಾಗ UIDAI ಈ ಡೇಟಾವನ್ನು ಸಂಪೂರ್ಣವಾಗಿ ನವೀಕರಿಸುವಂತೆ ಸೂಚಿಸುತ್ತದೆ. ಈ ಹಂತದಲ್ಲಿ ಹೆಚ್ಚುವರಿ ಬಯೋಮೆಟ್ರಿಕ್ ಡೇಟಾ ತೆಗೆದುಕೊಳ್ಳಲಾಗುತ್ತದೆ.
ಪೋಷಕರ ಸಮ್ಮತಿಯೊಂದಿಗೆ ಸ್ಥಳೀಯ ಆಧಾರ್ ಕೇಂದ್ರಗಳಲ್ಲಿ ಬೆರಳಚ್ಚು (Fingerprints) ಐರಿಸ್ ಸ್ಕ್ಯಾನ್ (Iris Scan) ಹಾಗೂ ಇತ್ತೀಚಿನ ಫೋಟೋಗ್ರಾಫ್ ಪಡೆದು ಅಪ್ಡೇಟ್ ಮಾಡಲಾಗುತ್ತದೆ.

ಅಪ್ಡೇಟ್ ಮಾಡದಿದ್ದರೆ ಏನಾಗುತ್ತದೆ?
UIDAI ಸ್ಪಷ್ಟವಾಗಿ ತಿಳಿಸಿದಂತೆ, 7 ವರ್ಷ ಮೀರಿದ ನಂತರ ಮಕ್ಕಳ ಬಯೋಮೆಟ್ರಿಕ್ ಮಾಹಿತಿ ಅಪ್ಡೇಟ್ ಮಾಡದಿದ್ದರೆ, ನಿಮ್ಮ ಮಕ್ಕಳ ಆಧಾರ್ ಕ್ರಮೇಣ ರದ್ದಾಗಬಹುದು.
UIDAIನ ವಿಶೇಷ ವ್ಯವಸ್ಥೆಗಳಿಂದ OTP ಆಧಾರಿತ ಸೇವೆ, KYC, ಬ್ಯಾಂಕ್ ಲಿಂಕ್, ವಿದ್ಯಾರ್ಥಿವೇತನ, ಸಬ್ಸಿಡಿ ಮುಂತಾದ ಎಲ್ಲವೂ ಸೌಲಭ್ಯಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಶಾಲಾ ಪ್ರವೇಶ, ಸಾರ್ವಜನಿಕ ಸೇವೆಗಳ ಲಾಭ ಪಡೆಯುವಲ್ಲಿ ತೊಂದರೆ ಉಂಟಾಗಬಹುದು.
ಮಕ್ಕಳ ಆಧಾರ್ ಅಪ್‌ಡೇಟ್ ಪ್ರಕ್ರಿಯೆ ಹೇಗೆ?
ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಮಗುವಿನೊಂದಿಗೆ ಭೇಟಿ ನೀಡಿ ಮೂಲ ದಾಖಲೆಗಳನ್ನು ಸಲ್ಲಿಸಿ ಅಪ್ಡೇಟ್ ಮಾಡಿಸಬಹುದಾಗಿದೆ. ಸ್ಥಳದಲ್ಲೇ ಹೊಸ ಫೋಟೋ, ಬೆರಳಚ್ಚು ಮತ್ತು ಕಣ್ಣಿನ ಸ್ಕ್ಯಾನ್ ತೆಗೆದುಕೊಳ್ಳಲಾಗುತ್ತದೆ. ಅಪ್‌ಡೇಟ್ ಆದ ನಂತರ ಆಧಾರ್ ಮಾಹಿತಿ ನವೀಕರಿಸಲಾಗುತ್ತದೆ.
ಆಧಾರ್ ಅಪ್ಡೇಟ್’ಗೆ ಶುಲ್ಕ ಎಷ್ಟು?
5 ರಿಂದ 7 ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ಅಪ್‌ಡೇಟ್ ಮಾಡಬಹುದು. 7 ವರ್ಷ ಮೀರಿದ ಮಕ್ಕಳಿಗೆ ₹100 ರೂ. ಶುಲ್ಕ ವಿಧಿಸಲಾಗುತ್ತದೆ. UIDAI ಈ ಕುರಿತು ಸ್ಪಷ್ಟ ಸೂಚನೆ ನೀಡಿದ್ದು, ಈ ವಿಷಯದಲ್ಲಿ ಪೋಷಕರು ವಿಳಂಬವಿಲ್ಲದೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.
ಆಧಾರ್ ಕಾರ್ಡ್ ಇಂದು ಪ್ರತಿಯೊಬ್ಬರಿಗೂ ಅಗತ್ಯವಾಗಿರುವ ದಾಖಲೆಯಾಗಿದೆ. ಮಕ್ಕಳಿಗೆ ಶೀಘ್ರವಾಗಿ ಆಧಾರ್ ಮಾಡಿಸುವುದು ಮಾತ್ರವಲ್ಲದೆ, ಸಮಯಕ್ಕೆ ಸರಿಯಾಗಿ ಬಯೋಮೆಟ್ರಿಕ್ ಅಪ್‌ಡೇಟ್ ಮಾಡುವ ಜವಾಬ್ದಾರಿ ಪೋಷಕರದ್ದು. ಆಧಾರ್ ನಿಷ್ಕ್ರಿಯಗೊಳ್ಳದಂತೆ ಎಚ್ಚರದಿಂದ ನೋಡಿಕೊಳ್ಳಿ.