ಪಿಯುಸಿ, ಐಟಿಐ ಅಥವಾ ಡಿಪ್ಲೋಮಾ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ (Free BCM Hostel) ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು (Backward Classes Welfare Department)ರಾಜ್ಯದ ಬಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಲವು ಶೈಕ್ಷಣಿಕ ನೆರವುಗಳನ್ನು ನೀಡುತ್ತಿದೆ. ಈ ಪೈಕಿ ಉಚಿತ ಹಾಸ್ಟೆಲ್ ಕೂಡ ಒಂದಾಗಿದ್ದು; 2025-26ನೇ ಶೈಕ್ಷಣಿಕ ಸಾಲಿಗೆ ಮೆಟ್ರಿಕ್ ನಂತರದ ಬಿಸಿಎಂ ವಿದ್ಯಾರ್ಥಿ ನಿಲಯಗಳಲ್ಲಿ ಹೊಸ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸರ್ಕಾರವು ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕುಗಳಲ್ಲೂ ಮೆಟ್ರಿಕ್ ನಂತರದ ಬಿಸಿಎಂ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿದೆ. ಉಟೋಪಚಾರ ಸಹಿತ ಉಚಿತ ವಸತಿ ಹಾಗೂ ಓದಿಗೆ ಅನುಕೂಲಕರವಾದ ವಾತಾವರಣ ಒದಗಿಸುತ್ತಿದೆ. ಮೆಟ್ರಿಕ್ ನಂತರದ ವ್ಯಾಸಂಗವನ್ನು ಪೂರೈಸುವ ಹೊತ್ತಿನಲ್ಲಿ ವಸತಿ ಸಮಸ್ಯೆ ಎದುರಿಸುತ್ತಿರುವ ಬಡ ವರ್ಗದ ಅರ್ಹ ವಿದ್ಯಾರ್ಥಿಗಳು ಈ ಉಚಿತ ವಸತಿನಿಲಯ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಪಿಯುಸಿ (PUC), ಐಟಿಐ (ITI) ಅಥವಾ ಡಿಪ್ಲೋಮಾ ವ್ಯಾಸಂಗ ಮಾಡುತ್ತಿರುವ ಕೆಳಕಂಡ ಜಾತಿ/ವರ್ಗಗಳ ವಿದ್ಯಾರ್ಥಿಗಳು ಈ ವಸತಿ ನಿಲಯದ ಪ್ರಯೋಜನ ಪಡೆಯಬಹುದಾಗಿದೆ:
- ಪ್ರವರ್ಗ-1
- ಪ್ರವರ್ಗ-2ಎ, 2ಬಿ, 3ಎ, 3ಬಿ
- ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST)

ಆದಾಯ ಮಿತಿ ಎಷ್ಟಿರಬೇಕು?
- ಪ್ರವರ್ಗ-1, SC/ST ವಿದ್ಯಾರ್ಥಿಗಳು: ವಾರ್ಷಿಕ ಆದಾಯ ₹2.50 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಪ್ರವರ್ಗ-2ಎ, 2ಬಿ, 3ಎ, 3ಬಿ ವಿದ್ಯಾರ್ಥಿಗಳು: ವಾರ್ಷಿಕ ಆದಾಯ ₹1.00 ಲಕ್ಷಕ್ಕಿಂತ ಕಡಿಮೆ ಇರಬೇಕು.
ಅರ್ಜಿ ಸಲ್ಲಿಕೆ ವಿಧಾನ ಮತ್ತು ಬೇಕಾಗುವ ದಾಖಲೆಗಳು
ಅರ್ಜಿ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕ ಸುಗಮಗೊಳಿಸಲಾಗಿದ್ದು; ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ಅಧಿಕೃತ ಪೋರ್ಟಲ್ ಮೂಲಕ ಆಲ್ಲೈನ್ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯ ಲಿಂಕ್ ಲೇಖನದ ಕೊನೆಯಲ್ಲಿ ನೀಡಲಾಗಿದೆ ಗಮನಿಸಿ. ಆನ್ಲೈನ್ ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು ಹೀಗಿವೆ:
- ಆಧಾರ್ ಕಾರ್ಡ್
- ಅರ್ಜಿದಾರರ ಮೊಬೈಲ್ ಸಂಖ್ಯೆ
- SSP ID
- ಆಧಿಕೃತ ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ವಾಸಸ್ಥಳ ದೃಢೀಕರಣ ಪತ್ರ
- ಹಿಂದಿನ ತರಗತಿಯ ಅಂಕಪಟ್ಟಿ (Marks Card)
- ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಪೋಟೋ
ಮೇಲ್ಕಾಣಿಸಿದ ಎಲ್ಲಾ ದಾಖಲೆಗಳನ್ನು ಸಕಾಲಕ್ಕೆ ಸಿದ್ಧಪಡಿಸಿಕೊಂಡು ಸರಿಯಾದ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಿ. ಕೊನೆಯ ದಿನಾಂಕದವರೆಗೂ ಕಾಯದೆ, ಮೊದಲೇ ಅರ್ಜಿ ಸಲ್ಲಿಸಿ ಹಾಗೂ ಅಧಿಕೃತ ವೆಬ್ಸೈಟ್ನಲ್ಲಿರುವ ಸೂಚನೆಗಳನ್ನು ಓದಿ ಅನುಸರಿಸಿ.

ಪ್ರಮುಖ ದಿನಾಂಕಗಳು
- ಅರ್ಜಿ ಆರಂಭ ದಿನಾಂಕ: 19-05-2025
- ಅರ್ಜಿ ಸಲ್ಲಿಕೆ ಕೊನೇ ದಿನಾಂಕ: 20-06-2025
ಹೆಚ್ಚಿನ ಮಾಹಿತಿಗೆ ಸಹಾಯವಾಣಿ
ಅರ್ಜಿ ಸಲ್ಲಿಕೆ ವೇಳೆ ತಾಂತ್ರಿಕ ತೊಂದರೆಗಳು ಎದುರಾದರೆ ಅಥವಾ ಹೆಚ್ಚಿನ ಮಾಹಿತಿಗೆ ಇ-ಮೇಲ್: bcwdsupport@gmail.com, ಸಹಾಯವಾಣಿ ಸಂಖ್ಯೆ: 8050770004 / 8050770005 ಸಂಪರ್ಕಿಸಿ. ಅಥವಾ ತಮ್ಮ ಜಿಲ್ಲೆಯ / ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಸಂಪರ್ಕಿಸಬಹುದಾಗಿದೆ.
ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಮಾತ್ರವಲ್ಲದೆ, ಸುರಕ್ಷಿತ ಮತ್ತು ವ್ಯವಸ್ಥಿತ ವಸತಿ ಸೌಲಭ್ಯ ಕಲ್ಪಿಸುವ ಈ ಯೋಜನೆಯು ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಮುನ್ನಡೆಗೆ ಪ್ರಮುಖ ಹೆಜ್ಜೆಯಾಗಿದೆ. ಆಸಕ್ತ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ.
ಅರ್ಜಿ ಲಿಂಕ್: Apply Now