ಮುಂಗಾರು ಮಳೆ ಭರ್ಜರಿ ಎಂಟ್ರಿ ಕೊಟ್ಟಿದೆ. ಅಪ್ಪಟ ಮಳೆಗಾಲ ಶುರುವಾಗಿದ್ದು; ಮಳೆ ನಕ್ಷತ್ರಗಳ (2025 Male Nakshatra) ಪ್ರಕಾರ ಈ ವರ್ಷದ ಮಳೆಗಾಲ ಹೇಗಿದೆ? ವೈಜ್ಞಾನಿಕ ವಿವರಣೆ ಏನು? ಎಂಬ ಮಾಹಿತಿ ಇಲ್ಲಿದೆ…
2025ರ ‘ಮಳೆಗಾಲ’ (Monsoon 2025) ಅಧಿಕೃತವಾಗಿ ಆರಂಭಗೊಂಡಿದೆ. ಈ ವರ್ಷ ಮುಂಗಾರು ಮಳೆ ಸಾಮಾನ್ಯಕ್ಕಿಂತ ಮೊದಲೇ ಭಾರತದ ದಕ್ಷಿಣ ಭಾಗ ಪ್ರವೇಶಿಸಿದೆ. ಮೇ 24ರಂದು ಕೇರಳದ ಮೂಲಕ ಕರ್ನಾಟಕದ ಕರಾವಳಿ ಭಾಗಗಳಲ್ಲಿ ಮೊದಲ ಮಳೆ ಸುರಿದಿದೆ.
2009ರ ನಂತರ ಇದೇ ಮೊದಲ ಬಾರಿಗೆ ಮುಂಗಾರು ಮಳೆ ತನ್ನ ನಿಯಮಿತ ವೇಳೆಗೆ ಮುನ್ನ ಆಗಮಿಸಿದಂತಾಗಿದೆ. ಇದು ಕೃಷಿಕರಿಗೆ ಭರ್ಜರಿ ಬಿತ್ತನೆಗಾಲದ ಶುಭಸಂಕೇತವಾಗಿದೆ. ಹವಾಮಾನ ಇಲಾಖೆ ಪ್ರಕಾರ ಈ ಬಾರಿ ಮುಂಗಾರು ಉತ್ತಮವಾಗಿದ್ದು; ರಾಜ್ಯಾದ್ಯಂತ ಭರ್ಜರಿ ಮಳೆಯ ನಿರೀಕ್ಷೆಯಿದೆ.
ಪಂಚಾಂಗ ಹಾಗೂ ಜ್ಯೋತಿಷ್ಯಶಾಸ್ತ್ರದ ಮಳೆ ಮಾಹಿತಿ
ನಮ್ಮ ಪುರಾತನ ಪಂಚಾಂಗಗಳಲ್ಲಿ ಮಳೆ ನಕ್ಷತ್ರಗಳ ಮಾಹಿತಿ ನೀಡಲಾಗಿದ್ದು, ಅದನ್ನು ಆಧಾರವಾಗಿ ಇಟ್ಟುಕೊಂಡು ಬಿತ್ತನೆ ಕಾರ್ಯಗಳು ನಡೆಯುತ್ತಿದ್ದವು. ಜ್ಯೋತಿಷ್ಯ ಶಾಸ್ತ್ರವು 16 ಪ್ರಮುಖ ಮಳೆ ನಕ್ಷತ್ರಗಳನ್ನು ಗುರುತಿಸಿದೆ. ಈ ನಕ್ಷತ್ರಗಳ ಪ್ರಕಾರ ಮಳೆಯ ಪ್ರಮಾಣ, ಅವಧಿ ಹಾಗೂ ಪ್ರಭಾವವನ್ನು ಊಹಿಸಲಾಗಿದೆ. ನಕ್ಷತ್ರಗಳನ್ನು ಎರಡು ಭಾಗವಾಗಿ ವಿಂಗಡಿಸಲಾಗಿದೆ:
- ಬೇಸಿಗೆ ಮಳೆ ನಕ್ಷತ್ರಗಳು (ಪೂರ್ವ ಮುಂಗಾರು): ಮಿತ ಮಳೆಯ ನಿರೀಕ್ಷೆಯಿರುವ ಅವಧಿ.
- ಅಪ್ಪಟ ಮಳೆ ನಕ್ಷತ್ರಗಳು (ಮಧ್ಯ ಮುಂಗಾರು): ಮುಖ್ಯ ಮಳೆಯ ಅವಧಿ, ಬಿತ್ತನೆ ಹಾಗೂ ಬೆಳೆ ಬೆಳವಣಿಗೆಗೆ ಅತ್ಯಂತ ಸೂಕ್ತ ಕಾಲ.

2025ರ ಮಳೆ ನಕ್ಷತ್ರಗಳು ಹಾಗೂ ಮಳೆಯ ಅವಧಿ
ಪ್ರಾಚೀನ ಕಾಲದಿಂದಲೂ ಪಂಚಾಂಗದ ಆಧಾರದ ಮೇಲೆ ಮಳೆ ನಕ್ಷತ್ರಗಳನ್ನು ಆಧಾರವಾಗಿ ಇಟ್ಟುಕೊಂಡು ಈ ವರ್ಷ ಇದೇ ರೀತಿ ಮಳೆ ಆಗಬಹುದು ಎಂದು ಅಂದಾಜಿಸುತ್ತ ಬಂದಿದ್ದಾರೆ. ಆ ಪ್ರಕಾರ 2025ನೇ ಸಾಲಿನ ಪಂಚಾಂಗ ಆದಾರಿತ ಮಳೆ ನಕ್ಷತ್ರಗಳ ಕಾಲ ಹಾಗೂ ಮಳೆ ಸ್ಥಿತಿ ಹೀಗಿದೆ:
ಬೇಸಿಗೆ ಮಳೆ ನಕ್ಷತ್ರಗಳು (ಏಪ್ರಿಲ್-ಜೂನ್)
- ಅಶ್ವಿನಿ: ಏಪ್ರಿಲ್ 13 ರಿಂದ 26 – ಸಾಮಾನ್ಯ ಮಳೆ
- ಭರಣ: ಏಪ್ರಿಲ್ 27 ರಿಂದ ಮೇ 10 – ಸಾಮಾನ್ಯ ಮಳೆ
- ಕೃತಿಕಾ: ಮೇ 11 ರಿಂದ 23 – ಸಾಮಾನ್ಯ ಮಳೆ
- ರೋಹಿಣಿ: ಮೇ 24 ರಿಂದ ಜೂನ್ 06 – ಉತ್ತಮ ಮಳೆ
- ಮೃಗಶಿರ: ಜೂನ್ 07 ರಿಂದ 20 – ಉತ್ತಮ ಮಳೆ
ಈ ಅವಧಿಯ ಮಳೆಯು ಮುಖ್ಯವಾಗಿ ತಂಪು ತರುವ, ಜಮೀನಿಗೆ ಶಾಖ ಕಡಿಮೆ ಮಾಡುವ, ಬೀಜ ಬಿತ್ತನೆಗೆ ಸಿದ್ಧತೆ ಮಾಡುವ ಹಂತಕ್ಕೆ ಸಹಕಾರಿಯಾಗುತ್ತದೆ.
ಅಪ್ಪಟ ಮಳೆ ನಕ್ಷತ್ರಗಳು (ಜೂನ್-ನವೆಂಬರ್)
- ಆರಿದ್ರಾ: ಜೂನ್ 21 ರಿಂದ ಜುಲೈ 04 – ಉತ್ತಮ ಮಳೆ
- ಪುನರ್ವಸು: ಜುಲೈ 05 ರಿಂದ 19 – ಉತ್ತಮ ಮಳೆ
- ಪುಷ್ಯ: ಜುಲೈ 20 ರಿಂದ ಆಗಸ್ಟ್ 02 – ಉತ್ತಮ ಮಳೆ
- ಆಶ್ಲೇಷ: ಆಗಸ್ಟ್ 03 ರಿಂದ 16 – ಸಾಮಾನ್ಯ ಮಳೆ
- ಮಖ: ಆಗಸ್ಟ್ 17 ರಿಂದ 29 – ಉತ್ತಮ ಮಳೆ
- ಹುಬ್ಬ: ಆಗಸ್ಟ್ 30 ರಿಂದ ಸೆಪ್ಟೆಂಬರ್ 12 – ಉತ್ತಮ ಮಳೆ
- ಉತ್ತರ: ಸೆಪ್ಟೆಂಬರ್ 13 ರಿಂದ 26 – ಉತ್ತಮ ಮಳೆ
- ಹಸ್ತ: ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 09 – ಉತ್ತಮ ಮಳೆ
- ಚಿತ್ತ: ಅಕ್ಟೋಬರ್ 10 ರಿಂದ 24 – ಉತ್ತಮ ಮಳೆ
- ಸ್ವಾತಿ: ಅಕ್ಟೋಬರ್ 25 ರಿಂದ ನವೆಂಬರ್ 06 – ಉತ್ತಮ ಮಳೆ
- ವಿಶಾಖ: ನವೆಂಬರ್ 07 ರಿಂದ 18 – ಉತ್ತಮ ಮಳೆ
ಈ ಅವಧಿಯ ಮಳೆಯು ಹತ್ತಿ, ಜೋಳ, ಕಬ್ಬು, ಭತ್ತ ಮತ್ತು ಇತರ ಹಗುರ ಹಾಗೂ ಭಾರೀ ಬೆಳೆಗಳಿಗೆ ಬಹಳ ಸೂಕ್ತವಾಗಿದೆ. ಮಣ್ಣಿನಲ್ಲಿ ತೇವಾಂಶ ಉಳಿಯಲು ಸಹಾಯ ಮಾಡುತ್ತದೆ. ಮುಂಗಾರು ಉತ್ತಮವಾಗಿ ಬಂದರೆ ನೀರಾವರಿ ಆಧಾರಿತ ಕೃಷಿಗಿಂತ ಮಳೆಯಾಶ್ರಿತ ಕೃಷಿಗೆ ಹೆಚ್ಚು ಅನುಕೂಲವಾಗಲಿದೆ.
ಹವಾಮಾನ ಇಲಾಖೆ ಏನು ಹೇಳುತ್ತದೆ?
ಭಾರತೀಯ ಹವಾಮಾನ ಇಲಾಖೆಯು (IMD) ಈ ಬಾರಿ ಲಘು ಎಲ್-ನಿನೋ ಪ್ರಭಾವ ಕಡಿಮೆಯಾಗಿರುವ ಕಾರಣದಿಂದಾಗಿ, ಪೂರ್ವಭಾವಿಯಾಗಿ ಉತ್ತಮ ಮಳೆಯ ನಿರೀಕ್ಷೆಯನ್ನು ವ್ಯಕ್ತಪಡಿಸಿದೆ. ಇದರ ಜೊತೆಗೆ ಭಾರತದ ತೀರ ಪ್ರದೇಶಗಳಲ್ಲಿ ಸಮುದ್ರ ತಾಪಮಾನ ಸಹಜ ಸ್ಥಿತಿಗೆ ಮರಳಿದಿದ್ದು, ಇದೂ ಸಹ ಮಳೆಯ ತೀವ್ರತೆಗೆ ಸಹಾಯಕವಾಗಿದೆ.
2025ರ ಮಳೆಗಾಲ ಮರುಜೀವನ ನೀಡುವಂತೆ ಭಾಸವಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರ, ಪಂಚಾAಗ ಹಾಗೂ ವೈಜ್ಞಾನಿಕ ಹವಾಮಾನ ಮಾಹಿತಿ ಎಲ್ಲವೂ ಸುಧಾರಿತ ಮಳೆಯ ನಿರೀಕ್ಷೆಯನ್ನು ವ್ಯಕ್ತಪಡಿಸುತ್ತವೆ. ಈ ಮಳೆಯ ಅವಧಿಯಲ್ಲಿ ಕೃಷಿ ಚಟುವಟಿಕೆಗಳು ಸಹಜವಾಗಿ ವೇಗ ಪಡೆಯಲಿದ್ದು, ರೈತರಲ್ಲಿ ಭರವಸೆ ಹಾಗೂ ಸಂತೋಷ ತರುವ ನಿರೀಕ್ಷೆ ಇದೆ.