Rain Damage Compensation List : ರಾಜ್ಯಾದ್ಯ೦ತ ಮಳೆಯಬ್ಬರ ಜೋರಾಗಿದೆ. ಮಲೆನಾಡು, ಕರಾವಳಿ ಭಾಗದಲ್ಲಂತೂ ಗುಡ್ಡ ಕುಸಿತ, ಪ್ರವಾಹ ಭೀತಿ ಎದುರಾಗಿದೆ. ಉತ್ತರ ಕರ್ನಾಟಕದ ಭಾಗದಲ್ಲೂ ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆ ಹಲವು ಅನಾಹುತ ಸೃಷ್ಟಿಸಿದೆ. ಬೆಳೆನಷ್ಟ (Crop Loss), ಮನೆ ಹಾನಿಯಾಗಿದ್ದು (House Damage) ಜನಜೀವನ ಅಸ್ತವ್ಯಸ್ತವಾಗಿದೆ.
ಈ ಸರಣಿ ಅನಾಹುತದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ ಮಳೆಯಿಂದಾದ ನಷ್ಟ ಪರಿಹಾರ ನೀಡಲು ಮುಂದಾಗಿದೆ. ಮಳೆಹಾನಿ ಪರಿಹಾರ ಕಾಮಗಾರಿಗಳಿಗೆಂದೇ ಜಿಲ್ಲೆಗಳಿಗೆ 777.54 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಮಳೆಯಿಂದ ಸಂಪೂರ್ಣ ಹಾನಿಗೊಳಗಾದ ಮನೆಗಳನ್ನು ಸರ್ಕಾರದಿಂದಲೇ ಮಂಜೂರು ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.
ಸರ್ಕಾರದ ಅತಿವೃಷ್ಟಿ ಕ್ರಮಗಳೇನು?
ಮುಂಗಾರು ಅಧಿವೇಶನದಲ್ಲಿ ಅತಿವೃಷ್ಟಿ ಕುರಿತು ಚರ್ಚೆಗೆ ಉತ್ತರ ನೀಡಿದ ಕಂದಾಯ ಸಚಿವರು ಮಲೆನಾಡು, ಕರಾವಳಿ ಭಾಗದ ಆರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಬಂದರೆ ನೆರವು ನೀಡಲು ಐದು ಎನ್ಡಿಆರ್ಎಫ್ ತುಕಡಿ ನಿಯೋಜಿಸಲಾಗಿದೆ. ಮುಂಗಾರು ಆರಂಭದಿ೦ದ ಮುಕ್ತಾಯದವರೆಗೆ ಈ ತುಕಡಿ ಅಲ್ಲೇ ಇರಲಿದೆ. 1,247 ಗ್ರಾಪಂ ವ್ಯಾಪ್ತಿಯ 2,225 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದೆ.
ಈ ಗ್ರಾಪಂ ವ್ಯಾಪ್ತಿಯಲ್ಲಿ 2.37 ಲಕ್ಷ ಜನ ಇದ್ದು, ಟಾಸ್ಕ್ಫೋರ್ಸ್ ರಚಿಸಲಾಗಿದೆ. ತಾಲೂಕು ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ, ಟಾಸ್ಕ್ ಫೋರ್ಸ್ಗೂ ಪರಿಹಾರ ಕಾಮಗಾರಿಗಾಗಿ ಅನುದಾನ ಕೊಟ್ಟಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಸರ್ಕಾರದಿಂದಲೇ ಮನೆ ಮಂಜೂರಾತಿ
ಕಳೆದ ಜೂನ್ 1ರಿಂದ ಈವರೆಗೆ ರಾಜ್ಯದಲ್ಲಿ 365 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ 447 ಮಿ.ಮೀ. (ಶೇ.22) ಮಳೆಯಾಗಿದೆ. 29 ಕಡೆ ಆರೈಕೆ ಕೇಂದ್ರ ತೆರೆದಿದ್ದೇವೆ. 2332 ಸಂತ್ರಸ್ತರಿಗೆ ಊಟ, ವಸತಿ, ಉಪಚಾರ ಮಾಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು.
ಈವರೆಗೆ ಒಟ್ಟಾರೆ 2,450 ಮನೆಗಳು ಹಾನಿಯಾಗಿದೆ. ಕೆಲವು ಭಾಗಶಃ ಹಾನಿಗೊಳಗಾಗಿದ್ದು, ಕೆಲವು ಪೂರ್ಣ ನಾಶವಾಗಿವೆ. ಅಂತಹ ಮನೆಗಳಿಗೆ ಪರಿಹಾರದ ಜತೆಗೆ ಸರ್ಕಾರದಿಂದಲೇ ಮನೆ ಮಂಜೂರಾತಿ ನೀಡಲಾಗುತ್ತದೆ ಎಂದು ಕಂದಾಯ ಸಚಿವರು ತಿಳಿಸಿದ್ದಾರೆ.
722 ಹೆಕ್ಟೇರ್ ಬೆಳೆ ನಷ್ಟ
ರಾಜ್ಯದ ಬಹುತೇಕ ನದಿಗಳು ಪ್ರವಾಹ ಸ್ಥಿತಿಯಲ್ಲಿವೆ. ಅನೇಕ ಸೇತುವೆಗಳು ಜಖಂ ಆಗಿವೆ. ಕೆಲವು ಸೇತುವೆಗಳು ಕುಸಿದು ಬಿದ್ದು ಸಂಪರ್ಕ ಸ್ಥಗಿತಗೊಂಡಿದೆ. ರೈತರ ಬೆಳೆ ನಷ್ಟ ಕೂಡ ಹೆಚ್ಚಾಗಿದ್ದು; ಅತಿವೃಷ್ಟಿಯಿಂದ 371 ಹೆಕ್ಟೇರ್ ಕೃಷಿ ಮತ್ತು 351 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿ ಆಗಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಬಹುದು. ಬೆಳೆನಷ್ಟಕ್ಕೆ ತತ್‌ಕ್ಷಣ ಪರಿಹಾರ ಕೊಡಲು ಸೂಚಿಸಿದ್ದು, ಪೋರ್ಟಲ್ ಕೂಡ ತೆರೆಯುತ್ತೇವೆ ಎಂದು ಕೃಷ್ಣಬೈರೇಗೌಡ ಹೇಳಿದರು.
ಮನೆಹಾನಿಗೆ ಪರಿಹಾರವೆಷ್ಟು?
ಈ ಹಿಂದೆ ಮನೆ ಹಾನಿಯಾಗಿರುವ ಪ್ರಮಾಣವನ್ನು ಎ, ಬಿ, ಸಿ ಎಂದು ವರ್ಗೀಕರಿಸಿ ಪೂರ್ಣ ಬಿದ್ದ ಮನೆಗಳಿಗೆ 5 ಲಕ್ಷ, ಭಾಗಶಃ ಬಿದ್ದ ಮನೆಗಳಿಗೆ 3 ಲಕ್ಷ, ಸ್ವಲ್ಪ ಹಾನಿಯಾಗಿರುವ ಮನೆಗಳಿಗೆ 50,000 ರೂಪಾಯಿಗಳನ್ನು ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ನೀಡಲಾಗಿತ್ತು. ಜತೆಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮಳೆಯಿಂದ ಹಾನಿಯಾಗಿರುವ ಮನೆಗಳಿಗೆ ರೂ.10 ಸಾವಿರಗಳನ್ನು ನೀಡಲು ಆದೇಶ ಮಾಡಲಾಗಿತ್ತು.
ಮಳೆಹಾನಿ ಪರಿಹಾರ ನೀಡಲು ಕನಿಷ್ಠ ಶೇ.10 ಹಾನಿ ಸಂಭವಿಸಿರಬೇಕು. ಶೇ.10-25ರ ವರೆಗೆ ಹಾನಿಯಾಗಿದ್ದರೆ 50,000 ರೂಪಾಯಿ ನೀಡಬೇಕೆಂದು ನಿಯಮವಿದೆ. ಪೂರ್ಣ ಹಾನಿಯಾಗಿದ್ದರೆ ಮಾತ್ರ 5 ಲಕ್ಷ ರೂಪಾಯಿ ತನಕ ಪರಿಹಾರ ನೀಡಲಾಗುತ್ತದೆ. ಈ ಬಾರಿ ರಾಜ್ಯ ಸರಕಾರ ಮನೆಹಾನಿ ಮತ್ತು ಬೆಳೆಹಾನಿ ಪರಿಹಾರವನ್ನು ಇನ್ನು ಮೇಲಷ್ಟೇ ನಿಗದಿಪಡಿಸಬೇಕಿದೆ.
ಪರಿಹಾರಕ್ಕೆ ಅರ್ಜಿ ಎಲ್ಲಿ ಸಲ್ಲಿಸಬೇಕು?
- ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯಲ್ಲಿ ಬೆಳೆ ಹಾನಿ ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕು.
- ಜಾನುವಾರಗಳ ಪರಿಹಾರ ಹಣಕ್ಕೆ ಸಂಬಂಧಿಸಿದಂತೆ ಹತ್ತಿರದ ಪಶುಪಾಲನೆ ಇಲಾಖೆಯಲ್ಲಿ ಅರ್ಜಿ ಹಾಕಬೇಕು.
- ಮನೆ, ಆಸ್ತಿ ಇತ್ಯಾದಿ ಪರಿಹಾರಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ, ಪಂಚಾಯತ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಮನೆಹಾನಿ, ಬೆಳೆಹಾನಿ ಕುರಿತ ಸರಕಾರದ ನಿರಂತರ ಅಪ್ಡೇಟ್’ಗಾಗಿ ಮಾಹಿತಿಮನೆ ಫಾಲೋ ಮಾಡಿ…
We want money to build new house