ಸುರಕ್ಷಿತ ಹೂಡಿಕೆ, ಉತ್ತಮ ಲಾಭ ಹಾಗೂ ಸರ್ಕಾರದ ಭದ್ರತೆ ಹೊಂದಿರುವ ಭಾರತೀಯ ಅಂಚೆ ಇಲಾಖೆಯ ಪ್ರಮುಖ 10 ಯೋಜನೆಗಳ (Post Office Top 10 Saving Schemes) ಮಾಹಿತಿ ಇಲ್ಲಿದೆ…
ಹಣ ಹೂಡಿಕೆಯಲ್ಲಿ ಭದ್ರತೆ, ನಿರಂತರ ಆದಾಯ ಮತ್ತು ಸರ್ಕಾರದ ಅನುಮೋದನೆ ಬೇಕೆಂದು ಭಾವಿಸುವ ಹೂಡಿಕೆದಾರರಿಗಾಗಿ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಅತ್ಯುತ್ತಮ ಆಯ್ಕೆಯಾಗಿವೆ.
ಈ ಯೋಜನೆಗಳು ಹಳ್ಳಿಯಿಂದ ನಗರದ ವರೆಗೆ ಎಲ್ಲ ಅಂಚೆ ಕಚೇರಿಗಳಲ್ಲಿ ಲಭ್ಯವಿದ್ದು, ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದೀಗ ನಾವು ಅತ್ಯುತ್ತಮ ಹಾಗೂ ಹೆಚ್ಚು ಬಡ್ಡಿ ನೀಡುವ ಟಾಪ್ 10 ಪೋಸ್ಟ್ ಆಫೀಸ್ ಯೋಜನೆಗಳು ಬಗ್ಗೆ ತಿಳಿದುಕೊಳ್ಳೋಣ:
1. Senior Citizens Savings Scheme- SCSS)
60 ವರ್ಷ ಮೇಲ್ಪಟ್ಟವರು ಈ ಯೋಜನೆಯಡಿ ₹1,000 ರಿಂದ ₹30 ಲಕ್ಷದ ವರೆಗೆ ಹೂಡಿಕೆ ಮಾಡಬಹುದು. 5 ವರ್ಷ (ವಿಸ್ತರಣೆ ಸಾಧ್ಯ) ಅವಧಿ ಈ ಯೋಜನೆ ಶೇ. 8.2 (2024ರ 2ನೇ ತ್ರೈಮಾಸಿಕಕ್ಕೆ) ಬಡ್ಡಿದರ ಹೊಂದಿದೆ. ಹೂಡಿಕೆಗೆ ತೆರಿಗೆ ವಿನಾಯಿತಿ (ಸೆಕ್ಷನ್ 80C), ರಿಸ್ಕ್ ಫ್ರೀ ಇನ್ವೆಸ್ಟ್ಮೆಂಟ್’ನಂತಹ ಲಾಭಗಳಿವೆ.
2. Public Provident Fund (PPF)
ಧೀರ್ಘ ಕಾಲದ ಅಂದರೆ 15 ವರ್ಷ (ಪುನರ್ನವೀಕರಣ ಸಾಧ್ಯ) ಉಳಿತಾಯಕ್ಕೆ ಇದು ಜನಪ್ರಿಯ ಯೋಜನೆಯಾಗಿದೆ. ವರ್ಷಕ್ಕೆ ₹500 ರಿಂದ ₹1.5 ಲಕ್ಷ ಹೂಡಿಕೆ ಮಾಡಬಹುದು. ಶೇ. 7.1 ಬಡ್ಡಿದರವನ್ನು ಹೊಂದಿದೆ. ಬಡ್ಡಿ ಸಂಪೂರ್ಣ ತೆರಿಗೆ ಮುಕ್ತ, 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದೆ.
3. Sukanya Samriddhi Yojana (SSY)
ಮಕ್ಕಳ ಭವಿಷ್ಯಕ್ಕಾಗಿ ಮೌಲ್ಯಯುತ ಯೋಜನೆ ಇದು. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯ ಹೆಸರಿನಲ್ಲಿ ವರ್ಷಕ್ಕೆ ₹250 ರಿಂದ ₹1.5 ಲಕ್ಷದ ವರೆಗೂ ಹೂಡಿಕೆ ಮಾಡಬಹುದು. ಮಗಳು 21 ವರ್ಷ ಅಥವಾ ವಿವಾಹವಾಗುವ ವರೆಗೂ ಶೇ. 8.2 ಬಡ್ಡಿದರ ಸಿಗಲಿದೆ.
4. Monthly Income Scheme (MIS)
ನಿರಂತರ ಆದಾಯ ಬೇಕಾದವರಿಗೆ ಈ ಯೋಜನೆ ಉತ್ತಮ ಆಯ್ಕೆ. 5 ವರ್ಷದ ಅವಧಿಯ ಎಂಐಎಸ್ ಯೋಜನೆಯಲ್ಲಿ ವ್ಯಕ್ತಿಗತ ₹1,000 ರಿಂದ ₹9 ಲಕ್ಷ ಹಾಗೂ ಜೆಂಟಿಯಾಗಿ ₹15 ಲಕ್ಷದ ವರೆಗೂ ಹೂಡಿಕೆ ಮಾಡಬಹುದು. ಶೇ. 7.4 ಬಡ್ಡಿದರ ಹೊಂದಿದ್ದು, ಪ್ರತಿ ತಿಂಗಳೂ ಬಡ್ಡಿ ಪಾವತಿಯಾಗಲಿದೆ. ನಿವೃತ್ತರಾದªರು ಅಥವಾ ನಿರಂತರ ಆದಾಯ ಬಯಸುವವರಿಗೆ ಇದು ಸೂಕ್ತ ಯೋಜನೆ.

5. Kisan Vikas Patra (KVP)
ಹಣದ ದ್ವಿಗುಣಗೊಳಿಸಲು ಸರಳ, ಸುಭದ್ರ ಯೋಜನೆ ಇದು. ಪ್ರಸ್ತುತ 115 ತಿಂಗಳು ಅಂದರೆ 9 ವರ್ಷ 7 ತಿಂಗಳಲ್ಲಿ ನೀವು ಹೂಡಿದ ಹಣ ಡಬಲ್ ಆಗುತ್ತದೆ. ₹1,000 ರಿಂದ ಆರಂಭವಾಗಿ ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು. ಶೇ. 7.5ರಷ್ಟು ಬಡ್ಡಿದರ ಸಿಗಲಿದೆ. ಲಾಕ್ ಇನ್ ನಂತರ ಸಂಪೂರ್ಣ ಹಣ ಪಡೆಯಲು ಅವಕಾಶವಿದೆ.
6. Mahila Samman Savings Certificate (MSSC)
ಮಹಿಳೆಯರ ಆರ್ಥಿಕ ಶಕ್ತಿಗೆ ದಾರಿಯಾಗುವ ಯೋಜನೆ ಇದು. 2 ವರ್ಷ ಅವಧಿಯ ಈ ಯೋಜನೆಯಲ್ಲಿ ₹1,000 ರಿಂದ ₹2 ಲಕ್ಷ ವರೆಗೆ ಹೂಡಿಕೆ ಮಾಡಬಹುದು. ಮಹಿಳೆಯರಿಗಾಗಿಯೇ ರೂಪಿಸಲಾದ ಕಡಿಮೆ ಅವಧಿಯಲ್ಲಿ ಉತ್ತಮ ಬಡ್ಡಿದರ (ಶೇ. 7.5) ನೀಡುವ ಉತ್ತಮ ಯೋಜನೆ ಇದು.
7. Recurring Deposit (RD) – National Savings RD
ಶಿಸ್ತಿನ ಉಳಿತಾಯಕ್ಕೆ ಇದು ಹೇಳಿ ಮಾಡಿಸಿದ ಯೋಜನೆಯಾಗಿದೆ. 5 ವರ್ಷ ಅವಧಿಯ ಈ ಯೋಜನೆಯಲ್ಲಿ ಪ್ರತಿ ತಿಂಗಳು ₹100 ಹೂಡಿಕೆ ಮಾಡಬಹುದು. ಶೇ. 6.7 ಬಡ್ಡಿದರ ಹೊಂದಿದ್ದು; ಬಡ್ಡಿ ಸಹಿತ ಸಂಪೂರ್ಣ ಮೊತ್ತ ಕೊನೆಗೆ ಸಿಗಲಿದೆ.
8. Time Deposit (TD) – Post Office FD
1, 2, 3, ಅಥವಾ 5 ವರ್ಷ ವೈವಿಧ್ಯಮಯ ಅವಧಿ ಆಯ್ಕೆಗಳನ್ನು ಹೊಂದಿರುವ ಈ ಯೋಜನೆಯಲ್ಲಿ ₹1,000 ರಿಂದ ಹೂಡಿಕೆ ಆರಂಭ ಮಾಡಬಹುದು. 1 ವರ್ಷಕ್ಕೆ ಶೇ. 6.9, 2 ವರ್ಷಕ್ಕೆ ಶೇ. 7.0, 3 ವರ್ಷಕ್ಕೆ ಶೇ. 7.0 ಹಾಗೂ 5 ವರ್ಷಕ್ಕೆ ಶೇ. 7.5ರಷ್ಟು ಬಡ್ಡಿದರವನ್ನು ಹೊಂದಿದೆ. ಬ್ಯಾಂಕ್ ಎಫ್‌ಡಿ ಗಿಂತ ಹೆಚ್ಚು ಬಡ್ಡಿದರ ಹೊಂದಿರುವ ಈ ಯೋಜನೆಯಡಿ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದೆ.
9. Post Office Savings Account
ಇದು ಅಂಚೆ ಇಲಾಖೆಯ ವಿಶೇಷ ಯೋಜನೆಯಾಗಿದ್ದು; ಆರಂಭಿಕ ₹500 ಹೂಡಿಕೆ ಮಾಡಬಹುದು. ಶೇ. 4ರಷ್ಟು ಬಡ್ಡಿದರ ಲಭ್ಯವಿದೆ. ATM ಕಾರ್ಡ್, NEFT/RTGS ಸೌಲಭ್ಯ ಮತ್ತು ಬೇರೆ ಯಾವುದೇ ಪೋಸ್ಟ್ ಆಫೀಸ್ ಯೋಜನೆಗಳಿಗೆ ರೂಟ್ ಖಾತೆಯಾಗಿ ಉಪಯುಕ್ತವಾಗಿದೆ.
10. National Savings Certificate (NSC)
ಇದು ತೆರಿಗೆ ಉಳಿತಾಯಕ್ಕೆ ಸೂಕ್ತ ಯೋಜನೆ. 5 ವರ್ಷ ಅವಧಿಯ ಈ ಯೋಜನೆಯಲ್ಲಿ ₹1,000 ರಿಂದ ಪ್ರಾರಂಭವಾಗಿ ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು. ಗರಿಷ್ಟ ಮಿತಿಯಿಲ್ಲ. ಶೇ. 7.7 ದರ ಹೊಂದಿದ್ದು; ಸೆಕ್ಷನ್ 80ಸಿ ಅಡಿಯಲ್ಲಿ ₹1.5 ಲಕ್ಷ ವರೆಗೆ ತೆರಿಗೆ ವಿನಾಯಿತಿ ಇದೆ.
ಈ ಎಲ್ಲಾ ಪೋಸ್ಟ್ ಆಫೀಸ್ ಯೋಜನೆಗಳಿಗೆ ಕೇಂದ್ರ ಸರ್ಕಾರದ ಭದ್ರತೆ ಇದೆ. ಎಲ್ಲ ವರ್ಗದ ಜನರಿಗೆ ಉಪಯುಕ್ತವಾಗುವ ಶ್ರೇಷ್ಠ ಉಳಿತಾಯ ಆಯ್ಕೆಗಳನ್ನು ಒದಗಿಸುತ್ತವೆ. ನಿಮ್ಮ ಹಣಕಾಸು ಗುರಿಗೆ ಅನುಗುಣವಾಗಿ ಸೂಕ್ತ ಯೋಜನೆ ಆಯ್ಕೆಮಾಡಿ, ಭವಿಷ್ಯವನ್ನು ಭದ್ರಪಡಿಸಿಕೊಳ್ಳಿ. ಹೆಚ್ಚಿನ ಮಾಹಿತಿಗೆ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಿ…