ಊರಲ್ಲೇ ಉದ್ಯಮ ಸ್ಥಾಪಿಸಲು (PMFME Scheme) ಸರ್ಕಾರ 15 ಲಕ್ಷ ರೂಪಾಯಿ ವರೆಗೂ ಸಹಾಯಧನ ನೀಡುತ್ತದೆ. ಈ ಸಹಾಯಧನ ಪಡೆಯುವುದು ಹೇಗೆ? ಇತ್ಯಾದಿ ಮಾಹಿತಿ ಇಲ್ಲಿದೆ…
ಹಳ್ಳಿಯಲ್ಲೇ ಸ್ವಯಂ ಉದ್ಯೋಗ ಸೃಷ್ಟಿಸುವ ಮೂಲಕ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಅವಕಾಶ ನೀಡಲು ಸರ್ಕಾರ ‘ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಬದ್ಧಗೊಳಿಸುವಿಕೆ’ (PM Micro Food Processing Scheme- PM FME) ಯೋಜನೆ ಅನುಷ್ಠಾನಗೊಳಿಸಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಈ ಯೋಜನೆಯಡಿ ಕಿರು ಆಹಾರ ಉತ್ಪನ್ನ ಉದ್ಯಮ ಸ್ಥಾಪಿಸಲು ಗರಿಷ್ಠ 15 ಲಕ್ಷ ರೂಪಾಯಿ ಸಹಾಯಧನ ನೀಡಲಾಗುತ್ತಿದೆ. ಆಸಕ್ತ ರೈತರು, ಮಹಿಳೆಯರು, ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಾವಿರಾರು ಘಟಕಗಳು ಸ್ಥಾಪನೆ
ಈ ಯೋಜನೆಯ ಪ್ರಯೋಜನ ಪಡೆದು ರೈತರು, ಮಹಿಳೆಯರು, ಯುವ ಉದ್ಯಮಿಗಳು, ಸ್ವ-ಸಹಾಯ ಸಂಘಗಳು, ರೈತ ಉತ್ಪಾದಕರ ಸಂಘಗಳು ಮತ್ತು ಖಾಸಗಿ ಸಂಸ್ಥೆಗಳು ತಮ್ಮ ಊರಲ್ಲಿಯೇ ಆಹಾರ ಸಂಸ್ಕರಣಾ ಘಟಕ ಆರಂಭಿಸಬಹುದು.
ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ 20,000 ಅರ್ಜಿ ಸಲ್ಲಿಕೆಯಾಗಿದ್ದು; ಈ ಪೈಕಿ 6,698 ಅರ್ಜಿಗಳ ವಿಲೇವಾರಿ ಮಾಡಲಾಗಿದೆ. ಇದೀಗ ಮತ್ತೊಂದು ವರ್ಷ ಅವಧಿ ವಿಸ್ತರಣೆ ಮಾಡಿದ್ದು; 5,000 ಹೊಸ ಅರ್ಜಿಗಳ ಗುರಿ ಹೊಂದಲಾಗಿದೆ.
ಈಗಾಗಲೇ ಈ ಯೋಜನೆಯಡಿ ಸಹಾಯಧನ ಪಡೆದು ರಾಜ್ಯದ್ಯಂತ 1700 ಸಿರಿಧಾನ್ಯ ಸಂಸ್ಕರಣಾ ಘಟಕಗಳು ಸ್ಥಾಪನೆಯಾಗಿವೆ. ಜೊತೆಗೆ 783 ಗಾಣದ ಎಣ್ಣೆ ಘಟಕಗಳು, 380 ಬೆಲ್ಲ ಘಟಕಗಳು, 180 ಮಸಾಲಾ ಘಟಕಗಳು ಆರಂಭವಾಗಿದ್ದು; ಸಿರಿಧಾನ್ಯ ಉತ್ಪನ್ನಗಳು ವಿದೇಶಗಳಿಗೆ ರಫ್ತಾಗುತ್ತಿವೆ.
ಸಹಾಯಧನವೆಷ್ಟು? ಅರ್ಜಿ ಸಲ್ಲಿಕೆಗೆ ಯಾರೆಲ್ಲ ಅರ್ಹರು?
ಮೊದಲೇ ಹೇಳಿದಂತೆ ಈ ಯೋಜನೆಯಡಿಯಲ್ಲಿ ಒಟ್ಟು ₹15 ಲಕ್ಷದ ವರೆಗೆ ಸಹಾಯಧನ ಸಿಗುತ್ತದೆ. ಇದರಲ್ಲಿ ಕೇಂದ್ರ ಸರ್ಕಾರ ₹6 ಲಕ್ಷ ಹಾಗೂ ರಾಜ್ಯ ಸರ್ಕಾರ ₹9 ಲಕ್ಷ ಸಹಾಯಧನ ಒದಗಿಸುತ್ತವೆ.
ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಯಾವುದೇ ವಿದ್ಯಾರ್ಹತೆ ಅಗತ್ಯವಿಲ್ಲ. 18 ವರ್ಷ ಮೇಲ್ಪಟ್ಟ ಎಲ್ಲರೂ ಅರ್ಹರು. ಬ್ಯಾಂಕ್ ಸಾಲ ಪಡೆದವರಿಗೂ ಕೂಡ ಅರ್ಜಿ ಸಲ್ಲಿಸಲು ಅವಕಾಶವಿದೆ. ಸುಲಭವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಯಾವೆಲ್ಲ ಘಟಕಗಳಿಗೆ ಸಹಾಯಧನ ಸಿಗುತ್ತದೆ?
- ಸಿರಿಧಾನ್ಯ ಸಂಸ್ಕರಣಾ ಘಟಕ (ಮಿಲೆಟ್ಸ್)
- ಬೆಲ್ಲ ಮತ್ತು ಸಕ್ಕರೆ ಉತ್ಪನ್ನ ಘಟಕ
- ನಿಂಬೆ ಉತ್ಪನ್ನ ಘಟಕ
- ಬೇಕರಿ ಉತ್ಪನ್ನ ಘಟಕ
- ಕೋಲ್ಡ್ ಪ್ರೆಸ್ ಎಣ್ಣೆ ಘಟಕ (ಗಾಣದ ಎಣ್ಣೆ)
- ಮೆಣಸಿನ ಪುಡಿ ಘಟಕ
- ಮಸಾಲಾ ಘಟಕ
- ಶುಂಠಿ, ಅನಾನಸ್, ಹಲವಾರು ಹಣ್ಣು/ತರಕಾರಿ ಸಂಸ್ಕರಣಾ ಘಟಕ
- ಕೋಳಿ (ಕುಕ್ಕಟ್) ಉತ್ಪನ್ನ ಘಟಕ
- ಮೀನು ಮತ್ತು ಸಾಗರ ಉತ್ಪನ್ನ ಘಟಕ
ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ನೇಮಕಾತಿ
ವಿಶೇಷವೆಂದರೆ ಈ ಯೋಜನೆಯಡಿ ಅರ್ಜಿದಾರರಿಗೆ ನೆರವಾಗಲು ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ನೇಮಕಾತಿ ಕೂಡ ನಡೆಯುತ್ತಿದೆ. ಅಈಖಿಖIಯಿಂದ 2 ದಿನಗಳ ಉಚಿತ ತರಬೇತಿ ನೀಡಲಾಗುತ್ತದೆ. ಅರ್ಜಿ ವಿಲೇವಾರಿ ಮಾಡಿದ ಪ್ರತಿಯೊಂದು ಪ್ರಕರಣಕ್ಕೆ ₹20,000 ಕಮೀಷನ್ ಸಿಗುತ್ತದೆ.
ಇಂತಹ ಉದ್ಯೋಗೋತ್ಪನ್ನ ಯೋಜನೆಗಳು ಗ್ರಾಮೀಣ ಭಾರತದಲ್ಲಿ ಸ್ವಯಂ ಉದ್ಯೋಗವನ್ನು ಉತ್ತೇಜಿಸುತ್ತಿದ್ದು, ರೈತರು, ಮಹಿಳೆಯರು, ಯುವಕರು ತಮ್ಮ ಊರಲ್ಲಿಯೇ ಉದ್ಯಮ ಅಭಿವೃದ್ಧಿ ಮಾಡಿಕೊಳ್ಳಲು ಬಹು ದೊಡ್ಡ ಅವಕಾಶವನ್ನು ನೀಡುತ್ತಿದೆ.
ಹೆಚ್ಚಿನ ಮಾಹಿತಿಗೆ:
ಅರ್ಜಿ ಲಿಂಕ್: pmfme.mofpi.gov.in