NMMS ವಿದ್ಯಾರ್ಥಿವೇತನ (NMMS Scholarship 2025) ಪ್ರವೇಶ ಪರೀಕ್ಷೆಗೆ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯು (karnataka school examination and assessment board – kseab) ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಕೇಂದ್ರ ಸರ್ಕಾರದ ನ್ಯಾಷನಲ್ ಮೀನ್ಸ್ ಕಂ-ಮೆರಿಟ್ ಸ್ಕಾಲರ್‌ಶಿಪ್ (National Means Cum-Merit Scholarship-NMMS) ಯೋಜನೆಯಡಿ 9ರಿಂದ 11 ತರಗತಿ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷದ ವ್ಯಾಸಂಗಕ್ಕೆ ಪ್ರತಿ ವರ್ಷ 12,000 ರೂ. ಆರ್ಥಿಕ ನೆರವು ನೀಡಲಾಗುತ್ತದೆ. ಸದರಿ ವಿದ್ಯಾರ್ಥಿವೇತನ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಇದೀಗ ಅರ್ಜಿ ಆಹ್ವಾನಿಸಲಾಗಿದೆ.
ಪರೀಕ್ಷೆ ಮೂಲಕ ಆಯ್ಕೆ
ನ್ಯಾಷನಲ್ ಮೀನ್ಸ್ ಕಂ-ಮೆರಿಟ್ ಸ್ಕಾಲರ್‌ಶಿಪ್ (NMMS) ಯೋಜನೆಗೆ ಅರ್ಹ ವಿದ್ಯಾರ್ಥಿಗಳನ್ನು ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಪರೀಕ್ಷೆಯು ಡಿಸೆಂಬರ್ 07ರಂದು ನಿಗದಿಯಾಗಿದ್ದು; ಇದಕ್ಕಾಗಿ ಅರ್ಜಿ ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನವಾಗಿದೆ.
ಸರ್ಕಾರಿ, ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳ ಶಾಲೆಗಳಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ನಡೆಸಲಾಗುತ್ತದೆ. ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯು ತಾಲೂಕು ಕೇಂದ್ರಗಳಲ್ಲಿ ಈ ಪರೀಕ್ಷೆಯನ್ನು ಆಯೋಜಿಸುತ್ತದೆ.
ಇದನ್ನೂ ಓದಿ: JMUCB Recruitment 2025- ಎಸ್ಸೆಸ್ಸೆಲ್ಸಿ, ಪಿಯುಸಿ ಪಾಸಾದವರಿಗೆ ಕೋ-ಅಪರೇಟಿವ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಯಾರೆಲ್ಲ ಅರ್ಹರು?
ಇದು ಆರ್ಥಿಕವಾಗಿ ಹಿಂದುಳಿದ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆಂದೇ ರೂಪಿಸಲಾಗಿರುವ ಯೋಜನೆಯಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ, ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳ ಶಾಲೆಗಳಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಖಾಸಗಿ ಶಾಲೆಗಳು, ಕೇಂದ್ರೀಯ ವಿದ್ಯಾಲಯ, ನವೋದಯ ಶಾಲೆ, ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ನಡೆಸಲಾಗುವ ವಸತಿ ಶಾಲೆಗಳಲ್ಲಿ ಹಾಗೂ ಖಾಸಗಿ ವಸತಿ ಶಾಲೆಗಳಲ್ಲಿ ಪ್ರವೇಶ ಪಡೆದವರು ಈ ಸ್ಕಾಲರ್‌ಶಿಪ್ ಪಡೆಯಲು ಅರ್ಹರಲ್ಲ.
ವಿದ್ಯಾರ್ಥಿಯ ಪಾಲಕರ ವಾರ್ಷಿಕ ಆದಾಯವು 3.50 ಲಕ್ಷ ರೂ. ಮೀರುವಂತಿಲ್ಲ. 7ನೇ ತರಗತಿಯಲ್ಲಿ ಕನಿಷ್ಠ ಶೇ.55 ಅಂಕಗಳನ್ನು ಗಳಿಸಿರಬೇಕು. ಪರಿಶಿಷ್ಟ ವಿದ್ಯಾರ್ಥಿಗಳು ಶೇ.50 ಅಂಕ ಪಡೆದಿರಬೇಕು.
ಐಟಿಐ, ಡಿಪ್ಲೊಮಾದವರನ್ನು ಈ ಸ್ಕಾಲರ್‌ಶಿಪ್‌ಗೆ ಪರಿಗಣಿಸಲಾಗುವುದಿಲ್ಲ ಎಂದು ಎಂದು ಶಿಕ್ಷಣ ಇಲಾಖೆಯು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸ್ಕಾಲರ್‌ಶಿಪ್ ಮೊತ್ತವೆಷ್ಟು?
ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದರೆ 9ನೇ ತರಗತಿಯಿಂದ 12ನೇ ತರಗತಿಯ ವರೆಗೂ ನಿರಂತರವಾಗಿ ನಾಲ್ಕು ವರ್ಷಗಳ ಕಾಲ ಮಾಸಿಕ 1,000 ರೂ. ನಂತೆ ವಾರ್ಷಿಕ 12,000 ರೂ. ಸ್ಕಾಲರ್‌ಶಿಪ್ ನೀಡಲಾಗುತ್ತದೆ. ವಿದ್ಯಾರ್ಥಿಗಳ ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತದೆ.
ನಾಲ್ಕೂ ವರ್ಷವೂ ವಿದ್ಯಾರ್ಥಿ ವೇತನ ಮುಂದುವರಿಕೆಗೆ ಕೆಲ ಷರತ್ತುಗಳು ಅನ್ವಯವಾಗುತ್ತವೆ. 9, 10, 11ನೇ ತರಗತಿಯನ್ನು ಒಂದೇ ಯತ್ನದಲ್ಲಿ ಪಾಸು ಮಾಡಬೇಕು. 9, 11ನೇ ತರಗತಿಯಲ್ಲಿ ಶೇ.55 ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಶೇ.60 ಅಂಕ ಪಡೆಯಬೇಕು.

ಪರೀಕ್ಷೆ ಹೇಗಿರುತ್ತದೆ?
ಮೆಂಟಲ್ ಎಬಿಲಿಟಿ ಟೆಸ್ಟ್ (ಬೌದ್ಧಿಕ ಸಾಮರ್ಥ್ಯ ಪರೀಕ್ಷೆ) ಹಾಗೂ ಸ್ಕಾಲಸ್ಟಿಕ್ ಎಬಿಲಿಟಿ ಟೆಸ್ಟ್ (ವ್ಯಾಸಂಗಿಕ ಪ್ರವೃತ್ತಿ ಪರೀಕ್ಷೆ) ಎಂಬ ಎರಡು ¥ತ್ರಿಕೆಗಳ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗಬೇಕಾಗುತ್ತದೆ. ಉತ್ತೀರ್ಣರಾಗುವುದು ಕಡ್ಡಾಯವಾಗಿದೆ.
ಮೊದಲ ಪರೀಕ್ಷೆಯಲ್ಲಿ 90 ವಸ್ತುನಿಷ್ಠ, ಬಹು ಆಯ್ಕೆ ಮಾದರಿಯ ಪ್ರಶ್ನೆಗಳಿರುತ್ತವೆ. ಪ್ರತಿ ಪ್ರಶ್ನೆಗೆ ಒಂದು ಅಂಕದಂತೆ 90 ಅಂಕಗಳು ನಿಗದಿಯಾಗಿರುತ್ತವೆ. ಎರಡನೇ ಪರೀಕ್ಷೆಯಲ್ಲಿ ವಿಜ್ಞಾನ ವಿಷಯಕ್ಕೆ 35, ಸಮಾಜ ವಿಜ್ಞಾನಕ್ಕೆ 35 ಹಾಗೂ ಗಣಿತ ವಿಷಯಕ್ಕೆ 20 ಅಂಕದಂತೆ ಒಟ್ಟು 90 ಪ್ರಶ್ನೆಗಳಿರುತ್ತವೆ.
ಪ್ರತಿ ಪರೀಕ್ಷೆಗೆ 90 ನಿಮಿಷ ನೀಡಲಾಗುತ್ತದೆ. ಡಿಸೆಂಬರ್ 7ರ ಭಾನುವಾರ ಬೆಳಗ್ಗೆ 10.30ರಿಂದ 12ಗಂಟೆಯ ವರೆಗೆ ಮೊದಲ ಪತ್ರಿಕೆ, ಮಧ್ಯಾಹ್ನ 2ರಿಂದ 3.30ರ ವರೆಗೆ ಎರಡನೇ ಪತ್ರಿಕೆಯ ಪರೀಕ್ಷೆ ನಡೆಸಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಪರೀಕ್ಷೆಗೆ ಆಯಾ ಶಾಲಾ ಪ್ರಾಂಶುಪಾಲರು ಅಥವಾ ಮುಖ್ಯ ಶಿಕ್ಷಕರ ಲಾಗಿನ್ ಮೂಲಕವೇ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಶಾಲೆಯ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಬೇಕಿದೆ.
ಅರ್ಜಿ ಸಲ್ಲಿಕೆ ಬಳಿಕ ಅದರ ಮುದ್ರಿತ ಪ್ರತಿಯನ್ನು ಪಡೆದುಕೊಳ್ಳಬೇಕು. ಪರೀಕ್ಷೆಗೆ 15 ದಿನ ಮುಂಚೆ ಪ್ರವೇಶಪತ್ರಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇದನ್ನೂ ಶಾಲಾ ಮುಖ್ಯಸ್ಥರಿಂದಲೇ ಪಡೆದುಕೊಳ್ಳಬೇಕು.
ಆಯ್ಕೆ ಪ್ರಕ್ರಿಯೆ
ಸಾಮಾನ್ಯ ವರ್ಗದವರು ಶೇ.40, ಪರಿಶಿಷ್ಟರು ಶೇ.32 ಅಂಕಗಳನ್ನು ಪಡೆದರಷ್ಟೇ ಅರ್ಹತೆ ಗಿಟ್ಟಿಸಲಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳಲ್ಲಿ ಮೀಸಲಾತಿ ಹಾಗೂ ಅರ್ಹತಾ ನಿಯಮ ಅನುಸಾರ ಬ್ಯಾಂಕ್ ಆಧರಿಸಿ ಡಿಎಸ್‌ಇಆರ್‌ಟಿ ವತಿಯಿಂದ ಅರ್ಹರನ್ನು ಸ್ಕಾಲರ್‌ಶಿಪ್‌ಗೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರು ಸ್ಕಾಲರ್‌ಶಿಪ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗುತ್ತದೆ.
KSEABಯು NMMS ಸ್ಕಾಲರ್‌ಶಿಪ್ ಕುರಿತ ಸಂಪೂರ್ಣ ಮಾಹಿತಿಯುಳ್ಳ ಅಧಿಸೂಚನೆಯನ್ನು ಹೊರಡಿಸಿದೆ. ಅಧಿಸೂಚನೆಯನ್ನು ಇಲ್ಲಿ Download ಮಾಡಿಕೊಳ್ಳಿ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.