New BPL Card – ಮುಂದಿನ ತಿಂಗಳು ಹೊಸ ಬಿಪಿಎಲ್ ಕಾರ್ಡ್ ಅರ್ಜಿ ಆಹ್ವಾನ | ಸರ್ಕಾರದ ಮಹತ್ವದ ನಿರ್ಧಾರ

ರಾಜ್ಯದಲ್ಲಿ ಹೊಸ ಬಿಪಿಎಲ್ ರೇಷನ್ ಕಾರ್ಡ್ (New BPL Card ) ಅರ್ಜಿ ಆಹ್ವಾನಕ್ಕೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಬಹು ದಿನಗಳಿಂದ ಹೊಸ ಬಿಪಿಎಲ್ ರೇಷನ್ ಕಾರ್ಡಿಗಾಗಿ ಅರ್ಜಿ ಸಲ್ಲಿಸಲು ಕಾದು ಕೂತಿರುವ ಅರ್ಹ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಶುಭಸುದ್ದಿ ನೀಡಿದೆ. ಮುಂದಿನ ತಿಂಗಳು ಹೊಸ ಬಿಪಿಎಲ್ ಕಾರ್ಡ್ ಅರ್ಜಿ ಕರೆಯಲಿದ್ದು; ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.
ಹೌದು, ದಕ್ಷಿಣ ಭಾರತದಲ್ಲಿಯೇ ಕರ್ನಾಟಕದಲ್ಲಿ ಅತೀ ಹೆಚ್ಚು ಅಂದರೆ ಶೇ.75ರಷ್ಟು ಅನರ್ಹ ಬಿಪಿಎಲ್ ಕಾರ್ಡುದಾರರಿದ್ದು; ಇವುಗಳ ಪತ್ತೆ ಕಾರ್ಯಕ್ಕೆ ರಾಜ್ಯ ಸರ್ಕಾರ ದಿನದಿಂದ ದಿನಕ್ಕೆ ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ರಾಜ್ಯದಲ್ಲಿ ಸುಮಾರು 7 ಲಕ್ಷ ಬಿಪಿಎಲ್ ಕಾರ್ಡುಗಳ ರದ್ದತಿಗೆ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ.

ಮುಂದಿನ ತಿಂಗಳು ಹೊಸ ಕಾರ್ಡಿಗೆ ಅರ್ಜಿ
ಈ ಕುರಿತು ಆಹಾರ ಸಚಿವ ಎಚ್ ಕೆ ಮುನಿಯಪ್ಪ ಅವರು ಮಹತ್ವದ ಮಾಹಿತಿ ನೀಡಿದ್ದು; ಅನರ್ಹ ಬಿಪಿಎಲ್ ರೇಷನ್ ಕಾರ್ಡುಗಳನ್ನು ಎಪಿಎಲ್ ಕಾರ್ಡುಗಳಾಗಿ ಬದಲಿಸಿ, ಅಷ್ಟೇ ಸಂಖ್ಯೆಯ ಹೊಸ ಬಿಪಿಎಲ್ ಕಾರ್ಡ್ ವಿತರಣೆಗೆ ಮುಂದಿನ ತಿಂಗಳು ಅರ್ಜಿ ಆಹ್ವಾನಿಸಲು ಆಹಾರ ಇಲಾಖೆ ನಿರ್ಧರಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ನಿನ್ನೆ (ಸೆಪ್ಟೆಂಬರ್ 17) ಸುದ್ದಿಗಾರರೊಂದಿಗೆ ಮಾತನಾಡಿದ ಆಹಾರ ಸಚಿವ ಎಚ್ ಕೆ ಮುನಿಯಪ್ಪ ಅವರು ಕೇಂದ್ರ ಸರ್ಕಾರದ ಮಾನದಂಡಗಳ ಅನ್ವಯವೇ ಬಿಪಿಎಲ್ ಕಾರ್ಡುಗಳನ್ನು ಪರಿಷ್ಕರಿಸಲಾಗುವುದು. ಈ ಪರಿಷ್ಕರಣೆಯಲ್ಲಿ ಅನರ್ಹವೆಂದು ಕಂಡುಬಂದ ಕಾರ್ಡುಗಳನ್ನು ಎಪಿಎಲ್ ಕಾರ್ಡಿಗೆ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಅರ್ಹರಿಗೆ 24 ಗಂಟೆಯಲ್ಲೇ ಮತ್ತೆ ಬಿಪಿಎಲ್ ಕಾರ್ಡ್
ರಾಜ್ಯದಲ್ಲಿ ಸುಮಾರು 7 ಲಕ್ಷದಷ್ಟು ಬಿಪಿಎಲ್ ಕಾರ್ಡುಗಳು ಅನರ್ಹವೆಂದು ಗುರುತಿಸಲಾಗಿದೆ. ಆದರೆ, ಯಾವ ಕಾರ್ಡುಗಳನ್ನೂ ರಾಜ್ಯ ಸರ್ಕಾರ ರದ್ದು ಮಾಡುವುದಿಲ್ಲ. ಬದಲಾಗಿ ಬಿಪಿಎಲ್’ನಿಂದ ಎಪಿಎಲ್’ಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಆಹಾರ ಸಚಿವರು ಸ್ಪಷ್ಟಪಡಿಸಿದ್ದಾರೆ.
ವಿಶೇಷವೆಂದರೆ ಬಿಪಿಎಲ್ ಕಾರ್ಡಿಗೆ ಅರ್ಹರಾಗಿರುವ ಫಲಾನುಭವಿಗಳ ಕಾರ್ಡು ತಾಂತ್ರಿಕ ದೋಷ ಅಥವಾ ಕಣ್ತಪ್ಪಿನಿಂದ ಅನರ್ಹವೆಂದು ಪರಿಗಣಿಸಿ ಎಪಿಎಲ್’ಗೆ ವರ್ಗಾವಣೆ ಮಾಡಿದ್ದರೆ ಅಂಥವರು ಕೂಡಲೇ ಇಲಾಖೆಯ ಗಮನಕ್ಕೆ ತರಬೇಕು. ಆಗ ಅಂತಹ ಕಾರ್ಡುಗಳನ್ನು 24 ಗಂಟೆಯೊಳಗೇ ಸರಿಪಡಿಸಿ ಸೌಲಭ್ಯಗಳನ್ನು ಯಥಾಪ್ರಕಾರ ಮುಂದುವರೆಸಲಾಗುವುದು ಎಂದು ಸಚಿವರು ಹೇಳಿದ್ದಾರೆ.