ಬರೋಬ್ಬರಿ ಹತ್ತು ವರ್ಷಗಳ ಹಿಂದೆ ನಡೆದ ತಾ.ಪಂ ಹಾಗೂ ಜಿ.ಪಂ ಚುನಾವಣೆಗೆ (Karnataka ZP-TP Election 2026) ಕಡೆಗೂ ಕಾಲ ಕೂಡ ಬಂದಿದೆ. ಇನ್ನು ನಾಲ್ಕು ತಿಂಗಳೊಳಗೆ ಚುನಾವಣೆ ನಡೆಯಲಿದ್ದು; ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ…
ನನೆಗುದಿಗೆ ಬಿದ್ದಿದ್ದ ಜಿಲ್ಲಾ ಪಂಚಾಯತ್ (ಜಿ.ಪಂ) ಹಾಗೂ ತಾಲ್ಲೂಕು ಪಂಚಾಯತ್ (ತಾ.ಪಂ) ಚುನಾವಣೆಗೆ ಕಡೆಗೂ ಡೇಟ್ ಫಿಕ್ಸ್ ಆಗಿದೆ. ಡಿಸೆಂಬರ್ 11ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ರಾಜ್ಯ ಸಂಪುಟ ಸಭೆಯ ಮಹತ್ವದ ನಿರ್ಧಾರದಿಂದ, ಈ ಚುನಾವಣೆಗಳ ಕುರಿತ ಗೊಂದಲಕ್ಕೆ ತೆರೆ ಬೀಳುವ ಲಕ್ಷಣಗಳು ಕಾಣಿಸುತ್ತಿವೆ.
ಹತ್ತು ವರ್ಷಗಳ ನಂತರ ಚುನಾವಣೆ!
ಕಳೆದ 2016ರ ಏಪ್ರಿಲ್ನಲ್ಲಿ ಕರ್ನಾಟಕದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ಕೊನೆಯ ಬಾರಿ ಚುನಾವಣೆ ನಡೆದಿತ್ತು. ಆಗ ಆಯ್ಕೆಯಾದ ಸದಸ್ಯರ ಅವಧಿ 2021ರ ಏಪ್ರಿಲ್ 27ರಂದು ಮುಕ್ತಾಯಗೊಂಡಿತ್ತು.
ಆದರೆ, ತಾಂತ್ರಿಕ ಕಾರಣಗಳು, ಕಾನೂನು ತಿದ್ದುಪಡಿಗಳು ಹಾಗೂ ಕ್ಷೇತ್ರ ಪುನರ್ವಿಂಗಡಣೆ ಸಂಬಂಧಿತ ಗೊಂದಲಗಳಿಂದಾಗಿ ಚುನಾವಣೆ ಪ್ರಕ್ರಿಯೆ ಸುಮಾರು ಐದು ವರ್ಷಗಳ ಕಾಲ ವಿಳಂಬವಾಗಿದೆ.
ಅಂದರೆ ರಾಜ್ಯದಲ್ಲಿ ತಾ.ಪಂ ಹಾಗೂ ಜಿ.ಪಂ ಚುನಾವಣೆ ನಡೆದು ಬರೋಬ್ಬರಿ ಹತ್ತು ವರ್ಷಗಳು ಕಳೆದಿವೆ. ಈ ಹತ್ತು ವರ್ಷಗಳಲ್ಲಿ ಜನಪ್ರತಿನಿಧಿಗಳಿಲ್ಲದೇ ಸ್ಥಳೀಯ ಆಡಳಿತ ವ್ಯವಸ್ಥೆ ನಡೆಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇದು ಗ್ರಾಮೀಣ ಆಡಳಿತಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತ್ತು.

2026ರ ಬೇಸಿಗೆಯೊಳಗೆ ಚುನಾವಣೆ
ಇದೀಗ ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರದಂತೆ, 2026ರ ಏಪ್ರಿಲ್ ಒಳಗೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿ, ಬೇಸಿಗೆ ಅವಧಿ ಮುಗಿಯುವ ಮೊದಲು ಚುನಾವಣೆ ನಡೆಸಲು ಸರ್ಕಾರ ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ಇಷ್ಟಕ್ಕೂ ಚುನಾವಣೆ ವಿಳಂಬಕ್ಕೆ ಪ್ರಮುಖ ಕಾರಣವಾಗಿದ್ದು ಕ್ಷೇತ್ರ ಪುನರ್ವಿಂಗಡಣೆ ಮತ್ತು ಮೀಸಲಾತಿ ಪ್ರಕ್ರಿಯೆ. ಕೆಲ ವರ್ಷಗಳ ಹಿಂದೆಯೇ ರಾಜ್ಯ ಚುನಾವಣಾ ಆಯೋಗ ಈ ಪ್ರಕ್ರಿಯೆಯನ್ನು ಆರಂಭಿಸಿ, ಕ್ಷೇತ್ರಗಳ ಪುನರ್ವಿಂಗಡಣೆ, ಮತದಾರರ ಅಂತಿಮ ಪಟ್ಟಿ ಹಾಗೂ ಮೀಸಲಾತಿಯ ಕರಡು ಪ್ರಕಟಿಸಿತ್ತು.
ಆದರೆ, ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ ಈ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂಪಡೆದು, ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯ್ದೆಗೆ ತಿದ್ದುಪಡಿ ತಂದು, ಹೊಸದಾಗಿ ‘ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ’ಕ್ಕೆ ಈ ಹೊಣೆಗಾರಿಕೆಯನ್ನು ನೀಡಿತ್ತು.
ಹೈಕೋರ್ಟ್ ಮೆಟ್ಟಿಲೇರಿದ ಚುನಾವಣಾ ಆಯೋಗ
ಈ ಬದಲಾವಣೆಗಳಿಂದ ಅಸಮಾಧಾನಗೊಂಡ ರಾಜ್ಯ ಚುನಾವಣಾ ಆಯೋಗವು ಕ್ಷೇತ್ರ ಪುನರ್ವಿಂಗಡಣೆ ಮತ್ತು ಮೀಸಲಾತಿ ವಿಳಂಬದ ವಿರುದ್ಧ ಹೈಕೋರ್ಟ್ ಮೊರೆ ಹೋಗಿತ್ತು.
ಈ ಪ್ರಕರಣದ ಹಿನ್ನೆಲೆಯಲ್ಲೇ ರಾಜ್ಯ ಸರ್ಕಾರವು 2023ರ ಡಿಸೆಂಬರ್ನಲ್ಲಿ ‘ಒಂದು ತಿಂಗಳೊಳಗೆ ಕ್ಷೇತ್ರ ಪುನರ್ವಿಂಗಡಣೆ ಹಾಗೂ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು’ ಎಂದು ಹೈಕೋರ್ಟ್’ಗೆ ಪ್ರಮಾಣ ಪತ್ರ ಸಲ್ಲಿಸಿತ್ತು.
ನಂತರ ಸರ್ಕಾರ ರಚಿಸಿದ್ದ ಆಯೋಗದ ಶಿಫಾರಸುಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಂಗೀಕರಿಸಿ, ಕ್ಷೇತ್ರಗಳು ಮತ್ತು ಸದಸ್ಯರ ಸಂಖ್ಯೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಹೊರಡಿಸಿತ್ತು. ಆದರೆ, ಮೀಸಲಾತಿ ನಿಗದಿ ಮಾತ್ರ ಅಂತಿಮ ಹಂತ ತಲುಪಿರಲಿಲ್ಲ.
ಕಡೆಗೂ ಚುನಾವಣೆಗೆ ಹಸಿರು ನಿಶಾನೆ
ಇದೀಗ ಮೊನ್ನೆ ನಡೆದ ಡಿಸೆಂಬರ್ 11ರ ಸಂಪುಟ ಸಭೆಯ ನಿರ್ಧಾರದಿಂದ, ಈ ಎಲ್ಲಾ ಪ್ರಕ್ರಿಯೆಗಳು ವೇಗ ಪಡೆದುಕೊಳ್ಳಲಿವೆ. ಮೀಸಲಾತಿ ನಿಗದಿ, ಚುನಾವಣಾ ಸಿದ್ಧತೆ ಮತ್ತು ವೇಳಾಪಟ್ಟಿ ಘೋಷಣೆಗೆ ದಾರಿ ತೆರೆದಿದೆ. ಇದರಿಂದಾಗಿ ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳು ನಡೆಯುವುದು ಬಹುತೇಕ ಖಚಿತವಾಗಿದೆ.
ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳು ಗ್ರಾಮೀಣಾಭಿವೃದ್ಧಿಯ ಕೇಂದ್ರ ಕೊಂಡಿಯಾಗಿವೆ. ಇವುಗಳಿಗೆ ಚುನಾವಣೆ ನಡೆಯದೇ ಇರುವುದರಿಂದ ಅಭಿವೃದ್ಧಿ ಯೋಜನೆಗಳು, ಸ್ಥಳೀಯ ಸಮಸ್ಯೆಗಳ ಪರಿಹಾರ ಹಾಗೂ ಜನಪ್ರತಿನಿಧಿಗಳ ನೇರ ಪಾಲ್ಗೊಳ್ಳುವಿಕೆ ಕುಂಠಿತವಾಗಿತ್ತು.
ಚುನಾವಣೆ ನಡೆದರೆ ಜನರಿಗೆ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅವಕಾಶ ಸಿಗಲಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಸಿದ್ಧತೆಗಳು ಪೂರ್ಣಗೊಂಡರೆ, 2026ರ ಆರಂಭದಲ್ಲೇ ಗ್ರಾಮೀಣ ಕರ್ನಾಟಕದಲ್ಲಿ ಮತ್ತೆ ಜನಪ್ರತಿನಿಧಿ ಆಡಳಿತ ಆರಂಭವಾಗುವ ನಿರೀಕ್ಷೆ ಇದೆ.