
ಪೊಲೀಸ್ ಕಾನ್‌ಸ್ಟೇಬಲ್ ಸೇರಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿವಿಧ ಹಂತದ ಹುದ್ದೆಗಳ ಭರ್ತಿಗೆ (Karnataka Police Recruitment 2025) ರಾಜ್ಯ ಸರ್ಕಾರ ಚಾಲನೆ ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸ ಬಯಸುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಶೀಘ್ರದಲ್ಲಿಯಲ್ಲಿಯೇ 4,656 ಕಾನ್‌ಸ್ಟೇಬಲ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಲಿದೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಬರೋಬ್ಬರಿ 18,581 ಖಾಲಿ ಹುದ್ದೆಗಳಿದ್ದು; ಈ ಹುದ್ದೆಗಳ ಭರ್ತಿಗೆ ಇದೀಗ ಕಾಲ ಕೂಡಿ ಬಂದಿದೆ. ಇಲಾಖೆಯಲ್ಲಿನ ಒತ್ತಡ ತಪ್ಪಿಸಲು ಒಟ್ಟು ಖಾಲಿ ಹುದ್ದೆಗಳ ಪೈಕಿ ಸದ್ಯ 4,656 ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ ಹಾಗೂ ಸ್ಪೆ.ರಿಸರ್ವ್ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳು ಸೇರಿ ವಿವಿಧ ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಲಾಗಿದೆ.
ಇದನ್ನೂ ಓದಿ: Khagras Chandragrahana 2025- ಖಗ್ರಾಸ ಚಂದ್ರಗ್ರಹಣ | ಯಾರಿಗೆ ಶುಭ? ಯಾರಿಗೆ ಅಶುಭ? ಸಂಪೂರ್ಣ ಮಾಹಿತಿ ಇಲ್ಲಿದೆ…
ನೇಮಕಾತಿ ಪ್ರಾಧಿಕಾರಗಳಿಗೆ ನಿರ್ದೇಶನ
ಕಳೆದ 2024ರ ನವೆಂಬರ್’ನಲ್ಲಿ ರಾಜ್ಯ ಪೊಲೀಸ್ ಇಲಾಖೆಯು 4,115 ಹುದ್ದೆಗಳ ಭರ್ತಿಗೆ ಮುಂದಾಗಿತ್ತು. ಆದರೆ, ಒಳ ಮೀಸಲು ನಿಗದಿ ಆಗುವ ತನಕ ಯಾವುದೇ ಹೊಸ ನೇಮಕಾತಿ ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ಸೂಚಿಸಿದ್ದರಿಂದ ನೇಮಕಾತಿ ಅಧಿಸೂಚನೆಯನ್ನು ಕಾಯ್ದಿರಿಸಲಾಗಿತ್ತು.
ಇದೀಗ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಹೊಸದಾಗಿ ಮಹತ್ವದ ಸುತ್ತೋಲೆ ಹೊರಡಿಸಿದ್ದು, ಪರಿಶಿಷ್ಟ ಜಾತಿಗಳ ಒಳ ಮೀಸಲು ವರ್ಗೀಕರಣದಂತೆ ಈಗಾಗಲೇ ನಿಗದಿಪಡಿಸಿರುವ ರೋಸ್ಟರ್ ಬಿಂದು ಆಧರಿಸಿ ಅನುಮೋದಿತ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ.

ಈ ಸಂಬಂಧ ಹಲವು ಇಲಾಖೆಗಳು, ಮಂಡಳಿಗಳು, ನಿಗಮಗಳು, ವಿಶ್ವವಿದ್ಯಾಲಯಗಳು ಹಾಗೂ ನೇಮಕಾತಿ ಆಯೋಗಗಳು ಹೊಸ ಅಧಿಸೂಚನೆಗಳನ್ನು ತಕ್ಷಣ ಹೊರಡಿಸಿ, ನಿಗದಿತ ಕಾಲಮಿತಿಯೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸರ್ಕಾರ ಸೂಚಿಸಿದೆ.
ಇದರಿಂದಾಗಿ ದಿನಾಂಕ: 04-09-2025ರಂದು ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಡಾ|| ಎಂ ಎ ಸಲೀಂ ಅವರು ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ನೇಮಕಾತಿ ಕುರಿತು ಅಧಿಕೃತ ಜ್ಞಾಪನ ಪತ್ರ ಪ್ರಕಟಿಸಿದ್ದಾರೆ.
ಭರ್ತಿ ಆಗಲಿರುವ ಹುದ್ದೆಗಳ ವಿವರ
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ ನೇಮಕಾತಿ ಮರು ಹಂಚಿಕೆ ಮಾಡಲಾಗಿರುವ ಕಲ್ಯಾಣ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕೇತರ ಹುದ್ದೆಗಳ ವಿವರ ಈ ಕೆಳಗಿನಂತಿದೆ:
- ಡಿಟೆಕ್ಟಿವ್ ಸಬ್ ಇನ್ಸ್‌ಪೆಕ್ಟರ್ (ಡಿಎಸ್‌ಐ): 20
- ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್ (ಎಪಿಸಿ): 1,650
- ನಾಗರಿಕ ಪೊಲೀಸ್ ಕಾನ್‌ಸ್ಟೇಬಲ್ (ಸಿವಿಲ್): 614
- ಸ್ಪೆ.ರಿಸರ್ವ್ ಪೊಲೀಸ್ ಕಾನ್‌ಸ್ಟೇಬಲ್ (ಕೆಎಸ್‌ಆರ್‌ಪಿ): 2032
- ಪೊಲೀಸ್ ಕಾನ್‌ಸ್ಟೇಬಲ್ (ಕೆಎಸ್‌ಐಎಸ್‌ಎಫ್): 340
- ಒಟ್ಟು ಹುದ್ದೆಗಳು: 4,656
ಇದನ್ನೂ ಓದಿ: LIC Recruitment- LICಯ 841 ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಅವಕಾಶ
ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಸದರಿ ಖಾಲಿ ಹುದ್ದೆಗಳು ಪದವಿ, ಪಿಯುಸಿ ಹಂತದ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶವಾಗಿದ್ದು; ಶೀಘ್ರದಲ್ಲಿಯೇ ನೇಮಕಾತಿ ಕುರಿತಂತೆ ಅಧಿಕೃತ ಅಧಿಸೂಚನೆ ಹೊರಬೀಳಲಿದೆ.
ಆನಂತರ ಹುದ್ದೆವಾರು ವಿದ್ಯಾರ್ಹತೆ, ವಯೋಮಿತಿ, ದೈಹಿಕ ಅರ್ಹತೆ, ಮಾಸಿಕ ವೇತನ, ಅರ್ಜಿ ಸಲ್ಲಿಕೆಯ ಸಂಪೂರ್ಣ ವಿವರಗಳು ಪ್ರಕಟಿಸಲಿವೆ. ಈ ಕುರಿತ ಮತ್ತಷ್ಟು ಮಾಹಿತಿಯನ್ನು mahitimane.comನಲ್ಲಿ ನೋಡಬಹುದಾಗಿದೆ.
ಅಧಿಸೂಚನೆ: Download
ಅಧಿಕೃತ ವೆಬ್‌ಸೈಟ್: ksp.karnataka.gov.in