ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆ (GovtEmployeeTransfers) ಪ್ರಕ್ರಿಯೆಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಯಾರಿಗೆಲ್ಲ ಅವಕಾಶ ಸಿಗಲಿದೆ? ವರ್ಗಾವಣೆ ಮಾನದಂಡಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ…
ಕರ್ನಾಟಕ ಸರ್ಕಾರ 2025-26ನೇ ಸಾಲಿನ ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆಗೆ ಮೇ 15ರಿಂದ ಜೂನ್ 14ರ ವರೆಗೆ ಅವಕಾಶ ನೀಡಲು ತೀರ್ಮಾನಿಸಿದೆ. ನೌಕರರ ನೇಮಕ, ವರ್ಗಾವಣೆ ಹಾಗೂ ಬಡ್ತಿಗಳಲ್ಲಿ ಶಿಸ್ತಿನ ವ್ಯವಸ್ಥೆ ತರಲು ಈ ವರ್ಷವೂ ರಾಜ್ಯ ಸರ್ಕಾರ ವ್ಯಾಪಕ ಮಾರ್ಗಸೂಚಿಗಳನ್ನು ಅನುಸರಿಸಲಿದೆ.
ನಿನ್ನೆ ಮೇ 9ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತಂತೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಅಧಿಸೂಚನೆಯು ರಾಜ್ಯದ ಸಾವಿರಾರು ಸರ್ಕಾರಿ ನೌಕರರಿಗೆ ಭರವಸೆ ನೀಡಿದ್ದು, ತಮ್ಮ ಆಯ್ಕೆಯ ಸ್ಥಳಕ್ಕೆ ವರ್ಗಾವಣೆಯ ಕನಸು ಇಟ್ಟುಕೊಂಡಿರುವವರಿಗೆ ಇದು ಮಹತ್ವದ ಅವಕಾಶವಾಗಿದೆ.
ಮುಖ್ಯಮಂತ್ರಿಗಳಿಗೆ ವಿಶಿಷ್ಟ ಅಧಿಕಾರ
2025-26ನೇ ಸಾಲಿಗೆ ಹೊಸ ವರ್ಗಾವಣಾ ಮಾರ್ಗಸೂಚಿ ಹೊರಡಿಸುವುದು, ಈಗಿರುವ ಮಾರ್ಗಸೂಚಿಗೆ ಪರಿಷ್ಕರಣೆ ತರುವಿಕೆ ಹಾಗೂ ವರ್ಗಾವಣಾ ಪ್ರಕ್ರಿಯೆಯ ಅವಧಿ ವಿಸ್ತರಣೆಯಂತ ಪ್ರಕ್ರಿಯೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶಿಷ್ಟ ಅಧಿಕಾರ ನೀಡಲಾಗಿದೆ. ಇದರಿಂದ ವರ್ಗಾವಣಾ ಪ್ರಕ್ರಿಯೆಗೆ ಹೆಚ್ಚಿನ ಸ್ಥಿರತೆ ಹಾಗೂ ಸಮರ್ಥ ನಿರ್ವಹಣೆ ಸಾಧ್ಯವಾಗಲಿದೆ.
ವಿಭಾಗ ಮಟ್ಟದಲ್ಲಿ ಅಧಿಕಾರ ವರ್ಗಾವಣೆಯ ವಿವರ
ಗ್ರೂಪ್ ಎ ಮತ್ತು ಬಿ ಅಧಿಕಾರಿಗಳು: ‘ಗ್ರೂಪ್-ಎ’ ಮತ್ತು ‘ಗ್ರೂಪ್-ಬಿ’ ವರ್ಗದ ಅಧಿಕಾರಿಗಳ ವರ್ಗಾವಣೆಗೆ ಸಂಬAಧಿಸಿದ ನಿರ್ಧಾರವನ್ನು ಆಯಾ ಇಲಾಖಾ ಸಚಿವರು ಕೈಗೊಳ್ಳುವರು. ಆದರೆ, ವೃಂದದ ಒಟ್ಟು ಸಂಖ್ಯೆಯ ಅಧಿಕಾರಿಗಳ ಶೇ.6ರಷ್ಟು ಮಾತ್ರ ವರ್ಗಾವಣೆಗೆ ಒಳಪಡಬಹುದು. ಈ ಅಧಿಕಾರಿಗಳ ವರ್ಗಾವಣೆ ಆಡಳಿತ ಇಲಾಖೆಯ ಮೂಲಕ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿ ನಡೆಯಬೇಕಾಗುತ್ತದೆ.
ಗ್ರೂಪ್ ಸಿ ಮತ್ತು ಡಿ ನೌಕರರು: ಈ ವರ್ಗದ ನೌಕರರ ವರ್ಗಾವಣೆಗೆ ಸಂಬಂಧಿಸಿದ ನಿರ್ಧಾರಗಳನ್ನು ನೇಮಕ ಪ್ರಾಧಿಕಾರಗಳು (Appointing Authorities) ಕೈಗೊಳ್ಳುತ್ತವೆ. ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೆ, ಆಡಳಿತಾತ್ಮಕವಾಗಿ ನಿರ್ಧಾರ ಜರುಗಬೇಕೆಂಬ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.

ವರ್ಗಾವಣೆಗೆ ಅರ್ಹತಾ ಮಾನದಂಡಗಳು ಯಾವುವು?
ವರ್ಗಾವಣೆಗೆ ಅರ್ಹರಾಗಿರುವ ಅಧಿಕಾರಿಗಳು ಮತ್ತು ನೌಕರರ ಕುರಿತಾಗಿ ನಿಗದಿಪಡಿಸಲಾದ ನಿಯಮಾವಳಿ ಈ ಕೆಳಗಿನಂತಿದೆ:
- ಗ್ರೂಪ್ ಎ ಮತ್ತು ಬಿ ನೌಕರರು ವರ್ಗವು ಒಂದೇ ಸ್ಥಳದಲ್ಲಿ ಕನಿಷ್ಠ 2 ವರ್ಷ ಕಡ್ಡಾಯ ಸೇವೆ ಸಲ್ಲಿಸಿರಬೇಕು.
- ಗ್ರೂಪ್ ಸಿ ಮತ್ತು ಡಿ ನೌಕರ ವರ್ಗವು ಕನಿಷ್ಠ 4 ವರ್ಷ ಕಡ್ಡಾಯ ಸೇವೆ ಸಲ್ಲಿಸಿರಬೇಕು.
- ಮೇಲ್ಕಾಣಿಸಿದ ನೌಕರರ ವರ್ಗವು ಇವರು ತಮ್ಮ ವಿಭಾಗದ ನಿರ್ದಿಷ್ಟ ಪ್ರಕ್ರಿಯೆಗಳ ಮೂಲಕ ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅಬಕಾರಿ ಇಲಾಖೆಯಲ್ಲಿ ಕೌನ್ಸೆಲಿಂಗ್ ವ್ಯವಸ್ಥೆ
ಮುಖ್ಯಮಂತ್ರಿಗಳ ಸೂಚನೆಯಂತೆ ಈ ವರ್ಷದಿಂದ ಅಬಕಾರಿ ಇಲಾಖೆಯಲ್ಲೂ ಕೌನ್ಸೆಲಿಂಗ್ ವಿಧಾನದಲ್ಲಿ ವರ್ಗಾವಣೆ ಜರುಗಲಿದೆ. ಈಗಾಗಲೇ ಕೆಲ ಇಲಾಖೆಗಳಲ್ಲಿ ಈ ಪದ್ದತಿಯು ಯಶಸ್ವಿಯಾಗಿ ಜಾರಿಯಲ್ಲಿದೆ. ಅಬಕಾರಿ ಇಲಾಖೆಯ ನೌಕರರ ವರ್ಗಾವಣೆಯು ಪಾರದರ್ಶಕ ಹಾಗೂ ಆಯ್ಕೆಗೆ ಅವಕಾಶ ನೀಡುವ ರೀತಿಯಲ್ಲಿ ನಡೆಯಲಿದೆ.
UPI Payment New Rule- ಫೋನ್ ಪೇ, ಗೂಗಲ್ ಪೇ ಹಣ ಪಾವತಿಗೆ ಹೊಸ ನಿಯಮ | ಇನ್ಮುಂದೆ 15 ಸೆಕೆಂಡ್’ನಲ್ಲಿ ಹಣ ವರ್ಗಾವಣೆ
ವಿಕಲಚೇತನರಿಗೆ ಬಡ್ತಿಯಲ್ಲಿ ಶೇ.4ರಷ್ಟು ಮೀಸಲು
ಸಚಿವ ಸಂಪುಟ ಸಭೆಯಲ್ಲಿ ಮತ್ತೊಂದು ಪ್ರಮುಖ ತೀರ್ಮಾನ ಕೈಗೊಳ್ಳಲಾಗಿದೆ. ವಿಶೇಷ ಚೇತನ (ವಿಕಲಚೇತನ) ಸಿಬ್ಬಂದಿಗೆ ‘ಗ್ರೂಪ್ ಬಿ’ ಮತ್ತು ‘ಗ್ರೂಪ್ ಎ’ (ಕಿರಿಯ ಶ್ರೇಣಿ) ಹುದ್ದೆಗಳ ಬಡ್ತಿಯಲ್ಲಿ ಶೇ.4ರಷ್ಟು ಮೀಸಲು ನೀಡಲಾಗುವುದು.
ಈ ತೀರ್ಮಾನವು 2016ರ ‘ವಿಕಲಚೇತನರ ಹಕ್ಕುಗಳ ಕಾಯಿದೆ’ (RPwD Act, 2016) ಅನ್ವಯ ಜಾರಿಯಲ್ಲಿರುತ್ತದೆ. ಸುಪ್ರೀಂ ಕೋರ್ಟ್ ಕೂಡ ಈ ಕಾಯಿದೆಯ ಪ್ರಾಬಲ್ಯವನ್ನು ದೃಢಪಡಿಸಿರುವುದರಿಂದ, ರಾಜ್ಯದ ಸರ್ಕಾರ ಇದನ್ನು ಅಳವಡಿಸಿಕೊಂಡಿದೆ.
ಪಾರದರ್ಶಕ ವರ್ಗಾವಣೆಗೆ ನಿರ್ಧಾರ
ಈ ಬಾರಿ ರಾಜ್ಯ ಸರ್ಕಾರವು ನಿಯಮಾನುಸಾರ ಹಾಗೂ ಸಮರ್ಥವಾಗಿ ವರ್ಗಾವಣೆ ನಡೆಸುವ ನಿರ್ಧಾರವನ್ನು ಕೈಗೊಂಡಿದ್ದು, ಅನೇಕ ನೌಕರರು ತಮ್ಮ ಸೇವೆ ಕಾರ್ಯಕ್ಷಮತೆಗೂ ಅನುಗುಣವಾಗಿ ಬೇರೆ ಸ್ಥಳಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಪಡೆಯಲಿದ್ದಾರೆ.
ವ್ಯವಸ್ಥಿತ ಕೌನ್ಸೆಲಿಂಗ್, ನ್ಯಾಯಸಮ್ಮತ ಮೀಸಲು ವ್ಯವಸ್ಥೆ ಮತ್ತು ಪ್ರಮಾಣಿತ ಅರ್ಹತಾ ಮಾನದಂಡಗಳಿಂದ ಈ ವರ್ಷದ ವರ್ಗಾವಣಾ ಪ್ರಕ್ರಿಯೆ ಹೆಚ್ಚು ಪಾರದರ್ಶಕವಾಗಲಿದೆ. ಇದು ಸಾವಿರಾರು ನೌಕರರ ವರ್ಗಾವಣೆ ಕನಸಿಗೆ ಬಲ ತುಂಬಲಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.