Karnataka Arogya Sanjeevini Scheme 2025- ಸರ್ಕಾರಿ ನೌಕರರಿಗೆ ‘ಆರೋಗ್ಯ ಸಂಜೀವಿನಿ’ ಯೋಜನೆ ಜಾರಿ | ಅಕ್ಟೋಬರ್ 1ರಿಂದ ನಗದುರಹಿತ ಚಿಕಿತ್ಸೆ

ರಾಜ್ಯ ಸರ್ಕಾರಿ ನೌಕರರಿಗೆ ನಗದು ರಹಿತ ಚಿಕಿತ್ಸೆ ನೀಡಲು ರೂಪಿಸಿರುವ ‘ಆರೋಗ್ಯ ಸಂಜೀವಿನಿ’ (Karnataka Arogya Sanjeevini Scheme 2025) ಯೋಜನೆಯನ್ನು ಅಕ್ಟೋಬರ್ 1ರಿಂದ ಜಾರಿಗೊಳಸಲಾಗುತ್ತಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಶುಭಸುದ್ದಿ ನೀಡಿದೆ. ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ‘ಕರ್ನಾಟಕ ಆರೋಗ್ಯ ಸಂಜೀವಿನಿ’ (KASS) ಯೋಜನೆಯನ್ನು ಅಕ್ಟೋಬರ್ 1, 2025ರಿಂದ ಜಾರಿಗೊಳಿಸಿ ಸರ್ಕಾರ ಆದೇಶಿಸಿದೆ.
ಈ ಯೋಜನೆಯು ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲಿದ್ದು, ರಾಜ್ಯದ ಸರ್ಕಾರಿ ನೌಕರರಿಗೆ ಒಂದು ದೊಡ್ಡ ಸೌಲಭ್ಯವಾಗಲಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಯೋಜನೆಯ ಅಡಿಯಲ್ಲಿ ನೌಕರರು ತಮ್ಮ ಗ್ರೂಪ್‌ಗೆ ಅನುಗುಣವಾಗಿ ಮಾಸಿಕ ವಂತಿಕೆಯನ್ನು ಪಾವತಿಸಬೇಕಾಗುತ್ತದೆ. ಈ ವಂತಿಕೆಯನ್ನು ಅಕ್ಟೋಬರ್ 2025ರ ವೇತನದಿಂದ ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ.

ವರ್ಗವಾರು ವಂತಿಕೆ ವಿವರ
- ಗ್ರೂಪ್ ಎ: ₹1,000
- ಗ್ರೂಪ್ ಬಿ: ₹500
- ಗ್ರೂಪ್ ಸಿ: ₹350
- ಗ್ರೂಪ್ ಡಿ: ₹250
ಯೋಜನೆಗೆ ಒಳಪಡಲು ಇಚ್ಛಿಸದ ನೌಕರರು ಅಕ್ಟೋಬರ್ 18 ರೊಳಗೆ ಲಿಖಿತ ಘೋಷಣೆಯನ್ನು ತಮ್ಮ ಡಿಡಿಒಗಳಿಗೆ ಸಲ್ಲಿಸಲು ಕಾಲಾವಕಾಶವನ್ನು ವಿಸ್ತರಿಸಲಾಗಿದೆ. ಒಂದು ವೇಳೆ ಈ ದಿನಾಂಕದೊಳಗೆ ಲಿಖಿತವಾಗಿ ತಿಳಿಸದಿದ್ದರೆ, ಹೊರಗುಳಿಯಲು ಇಚ್ಛಿಸದ ನೌಕರರು ಯೋಜನೆಯ ಭಾಗವೆಂದು ಪರಿಗಣಿಸಲಾಗುತ್ತದೆ.
‘ಜ್ಯೋತಿ ಸಂಜೀವಿನಿ’ ಯೋಜನೆ ಸ್ಥಗಿತ
ಯೋಜನೆಯ ಅನುಷ್ಠಾನದ ಜವಾಬ್ದಾರಿಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್’ಗೆ (SAST) ವಹಿಸಲಾಗಿದೆ. ಈ ಯೋಜನೆಯು ಜಾರಿಗೆ ಬಂದ ನಂತರ ಪ್ರಸ್ತುತ ಚಾಲ್ತಿಯಲ್ಲಿರುವ ‘ಜ್ಯೋತಿ ಸಂಜೀವಿನಿ’ ಯೋಜನೆಯು ಸ್ಥಗಿತಗೊಳ್ಳಲಿದೆ. ಇದಲ್ಲದೆ, ಸರ್ಕಾರಿ ನೌಕರರ ಪೋಷಕರ ಮಾಸಿಕ ಆದಾಯ ಮಿತಿಯನ್ನು ₹17,000 ದಿಂದ ₹27,000 ಕ್ಕೆ ಹೆಚ್ಚಿಸಲಾಗಿದೆ.
ಆರಂಭಿಕ ಹಂತದಲ್ಲಿ ನಗದುರಹಿತ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಇದು ಪೂರ್ಣಗೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು.
ಹೀಗಾಗಿ, ಮುಂದಿನ ಆರು ತಿಂಗಳ ವರೆಗೆ ಅಥವಾ ಮುಂದಿನ ಆದೇಶದ ವರೆಗೆ, ನೌಕರರು ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963ರ ಅಡಿಯಲ್ಲಿ ನೋಂದಾಯಿತ 500ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದು, ನಂತರ ಮರುಪಾವತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಅವಕಾಶವು ಯೋಜನೆಗೆ ಒಳಪಡಲು ಅಥವಾ ಹೊರಗುಳಿಯಲು ಇಚ್ಛಿಸುವ ಎಲ್ಲ ನೌಕರರಿಗೂ ಅನ್ವಯವಾಗುತ್ತದೆ.
‘ಕರ್ನಾಟಕ ಆರೋಗ್ಯ ಸಂಜೀವಿನಿ’ ಯೋಜನೆ ಕುರಿತ ಸರ್ಕಾರದ ಸಂಪೂರ್ಣ ನಡಾವಳಿ: Download