Karnataka Animal Husbandry Schemes : ಹೈನುಗಾರಿಕೆ ಸೇರಿದಂತೆ ಪಶುಪಾಲನೆ ಈಗ ಲಾಭದಾಯಕ ವೃತ್ತಿಯಾಗಿದೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಕುರಿಗಾಹಿಗಳಿಗೆ ಅನುಗ್ರಹ ಯೋಜನೆ, ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ, ರಾಸುಗಳ ಆಕಸ್ಮಿಕ ಸಾವಿಗೆ ಪರಿಹಾರ, ಸಂಚಾರಿ ಪಶು ಚಿಕಿತ್ಸಾಲಯಗಳ ಸ್ಥಾಪನೆ ಸೇರಿದಂತೆ ರಾಜ್ಯ ಸರ್ಕಾರ (Animal Husbandry and Sericulture Department-Karnataka) ಹಲವು ಯೋಜನೆಗಳ ಮೂಲಕ ಪಶುಪಾಲನೆಯನ್ನು ಉತ್ತೇಜಿಸುತ್ತಿದೆ.
2024-25ನೇ ಸಾಲಿನ ಈ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಅನ್ವಯವಾಗಿದ್ದು; ಆಯಾ ವಲಯದ ಪಶುಪಾಲಕರು, ಹೈನುಗಾರ ರೈತರು ಇವುಗಳ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಕರ್ನಾಟಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಯಾವೆಲ್ಲ ಸಹಾಯಧನ, ಸಬ್ಸಿಡಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ…
ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ
ಕೆಎಂಎಪ್ ಡೈರಿಗಳಿಗೆ ಹಾಲು ಒದಗಿಸುವ ಹೈನು ರೈತರಿಗೆ ಪ್ರತಿ ಲೀಟರ್’ಗೆ ತಲಾ 5 ರೂಪಾಯಿಯಂತೆ ಹೆಚ್ಚುವರಿಯಾಗಿ ಪ್ರೋತ್ಸಾಹಧನ ನೀಡಲಾಗುತ್ತದೆ. ಇದಲ್ಲದೇ ಹೈನುಗಾರಿಕೆಯನ್ನು ಉತ್ತೇಜಿಸಲು ಹಸು ಹಾಗೂ ಎಮ್ಮೆಯನ್ನು ಖರೀದಿ ಮಾಡಿ, ಸಕಾಲಕ್ಕೆ ಸಾಲ ಮರುಪಾವತಿ ಮಾಡುವ ಮಹಿಳೆಯರಿಗೆ ಶೇ.6ರ ಬಡ್ಡಿ ಸಹಾಯಧನ ಕೂಡ ಒದಗಿಸಲಾಗುತ್ತದೆ.
ನಾಟಿ ಕೋಳಿ ಮರಿಗಳ ವಿತರಣೆ
ಗ್ರಾಮೀಣ ಮಹಿಳೆಯರುನ್ನು ಉತ್ತೇಜಿಸುವ ಹಿನ್ನಲೆಯಲ್ಲಿ ಪಶುಪಾಲನಾ ಇಲಾಖೆಯು ಈ ಯೋಜನೆಯನ್ನು ಹಮ್ಮಿಕೊಂಡಿದ್ದು; ಸದರಿ ಯೋಜನೆಯಡಿ ಆಯ್ದ ಮಹಿಳಾ ಸ್ವ-ಸಹಾಯ ಗುಂಪಿನ ಗ್ರಾಮೀಣ ಭಾಗದ ಸದಸ್ಯರಿಗೆ ಆರು ವಾರದ ತಲಾ 20 ನಾಟಿ ಕೋಳಿ ಮರಿಗಳನ್ನು ಉಚಿತವಾಗಿ ನೀಡಲಾಗುತ್ತದೆ.
ಇದನ್ನೂ ಓದಿ: ಮಳೆಯಿಂದ ಮನೆ ಹಾನಿಯಾದರೆ ಸರ್ಕಾರದಿಂದಲೇ ಹೊಸಮನೆ ನಿರ್ಮಾಣ | ಮಳೆಹಾನಿ ಪರಿಹಾರದ ಪಟ್ಟಿ Rain Damage Compensation List
ಜಾನುವಾರುಗಳ ಆಕಸ್ಮಿಕ ಸಾವಿಗೆ ಪರಿಹಾರ
ಜಾನುವಾರುಗಳು ಆಕಸ್ಮಿಕ ಸಾವಿಗೀಡಾದಾಗ ರೈತರನ್ನು ನಷ್ಟದಿಂದ ಪಾರು ಮಾಡುವ ಸದುದ್ದೇಶದಿಂದ ಈ ಯೋಜನೆಯನ್ನು ಅನುಷ್ಟಾನಗೊಳಿಸಲಾಗಿದೆ. ಸದರಿ ಯೋಜನೆಯಡಿ ಆರು ತಿಂಗಳ ಮೇಲ್ಪಟ್ಟ ಹಸು, ಎಮ್ಮೆ, ಎತ್ತು, ಕೋಣ, ಹೋರಿಗಳು ಆಕಸ್ಮಿಕವಾಗಿ ಮರಣ ಹೊಂದಿದಲ್ಲಿ ಗರಿಷ್ಟ 1 ಲಕ್ಷ ರೂಪಾಯಿ ವರೆಗೆ ಪರಿಹಾರವನ್ನು ಪಡೆಯಬಹುದು.
ಕುರಿ-ಮೇಕೆ ಸಾಕಾಣಿದಾರರಿಗೆ ಅನುಗ್ರಹ ಯೋಜನೆ
ಜಾನುವಾರುಗಳ ಆಕಸ್ಮಿಕ ಸಾವಿಗೆ ಪರಿಹಾರ ನೀಡುವ ಮಾದರಿಯಲ್ಲಿಯೇ ಆಡು ಮತ್ತು ಕುರಿ ಸಾಕಾಣಿಕೆದಾರರಿಗೂ ಕೂಡ ಪ್ರಾಣಿಗಳ ಆಕಸ್ಮಿಕ ಸಾವಿನಿಂದಾದ ನಷ್ಟಕ್ಕೆ ಪರಿಹಾರ ನೀಡುವ ‘ಅನುಗ್ರಹ’ ಯೋಜನೆಯನ್ನು ಸರಕಾರ ಜಾರಿಗೊಳಿಸಿದೆ. ಆರು ತಿಂಗಳು ಮೇಲ್ಪಟ್ಟ ಆಡು-ಕುರಿಗಳು ಆಕಸ್ಮಿಕವಾಗಿ ಮರಣ ಹೊಂದಿದ್ದಲ್ಲಿ 5,000 ರೂಪಾಯಿ ಹಾಗೂ 3 ರಿಂದ 6 ತಿಂಗಳ ಆಡು-ಕುರಿಗಳ ಸಾವಿಗೆ ರೂ 3,500 ರೂಪಾಯಿ ಪರಿಹಾರದ ನೆರವನ್ನು ನೀಡಲಾಗುತ್ತದೆ.
ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ
ಆಡು-ಕುರಿ ಸಾಕಾಣಿಕೆದಾರರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ‘ಅಮೃತ ಸ್ವಾಭಿಮಾನಿ ಯೋಜನೆ’ಯನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮೂಲಕ ರಾಜ್ಯ ಸರಕಾರ ಅನುಷ್ಠಾನಗೊಳಿಸಿದೆ. 20+1 ಕುರಿ-ಮೇಕೆ ಘಟಕಗಳ ಸ್ಥಾಪನೆಗೆ ಪ್ರತಿ ಫಲಾನುಭವಿಗೆ 1.75 ಲಕ್ಷ ಆರ್ಥಿಕ ನೆರವು ಒದಗಿಸಲಾಗುತ್ತಿದೆ. ರಾಜ್ಯದಲ್ಲಿನ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿನ ಅರ್ಹ ಸದಸ್ಯರಿಗೆ ಈ ಯೋಜನೆ ಅನ್ವಯವಾಗಿದ್ದು; ಕುರಿ ಸೊಸೈಟಿಯಲ್ಲಿ ಸದಸ್ಯರಾದವರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
ಮೇವು ಕತ್ತರಿಸುವ ಯಂತ್ರ ವಿತರಣೆ
ರೈತರು ಹಾಗೂ ಹೈನುಗಾರರನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರಕಾರವು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಮೂಲಕ ಮೇವು ಕತ್ತರಿಸುವ ಯಂತ್ರವನ್ನು (Chaff Cutter) ಕೂಡ ಸಬ್ಸಿಡಿ ದರದಲ್ಲಿ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತದೆ. ಅಗತ್ಯವಿರುವ ರೈತರು, ಹೈನುಗಾರರು ಮೇವು ಕತ್ತರಿಸುವ ಯಂತ್ರವನ್ನು ಶೇ.50ರ ಸಹಾಯಧನದಲ್ಲಿ ಪಡೆಯಬಹುದಾಗಿದೆ.
ಮೇವಿನ ಬೀಜ ಕಿರು ಪೊಟ್ಟಣ ವಿತರಣೆ
ಹಸು-ಎಮ್ಮೆಗಳ ಆರೋಗ್ಯ ಸುಧಾರಣೆ, ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಹಾಲಿನ ಉತ್ಪಾದನೆ ಹಾಗೂ ಹಾಲಿನ ಉಳುವರಿ ಮಾಡುವ ಮೂಲಕ ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭ ಪಡೆಯಲು ಹಾಲು ಉತ್ಪಾದಕರು ಹಸಿರು ಮೇವನ್ನು ಬೆಳೆಸಿ, ಬಳಸಲು ಪ್ರೋತ್ಸಾಹಿಸಲು ಉಚಿತವಾಗಿ ಮೇವಿನ ಬೀಜಗಳ ಕಿರು ಪೊಟ್ಟಣ ವಿತರಣೆ ಮಾಡಲಾಗುತ್ತದೆ. ಮೇವಿನ ಬಿತ್ತನೆ ಬೀಜದ ಮಿನಿಕಿಟ್’ಗಳನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಹಾಲು ಉತ್ಪಾದಕರಿಗೆ ಹಂಚಿಕೆ ಮಾಡಲಾಗುತ್ತದೆ.
ಸಂಚಾರಿ ಪಶು ಚಿಕಿತ್ಸಾ ಘಟಕ
ಸಂಚಾರಿ ಪಶು ಚಿಕಿತ್ಸಾ ವಾಹನಗಳ ಮೂಲಕ ಜಾನುವಾರುಗಳಿಗೆ ಅಗತ್ಯವಿರುವ ತುರ್ತು ಪಶುವೈದ್ಯಕೀಯ ಸೇವೆಗಳನ್ನು ರೈತರ ಮನೆ ಬಾಗಿಲಿಗೆ ನೀಡಲಾಗುತ್ತದೆ. ರೈತರು ಈ ‘1962’ ಸಹಾಯವಾಣಿ ಕರೆ ಮಾಡಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
ಅದೇ ರೀತಿ ಹೈನುಗಾರಿಕೆಯಲ್ಲಿ ತಳಿ ಅಭಿವೃದ್ಧಿ ಮೂಲಕ ದುಪ್ಪಟ್ಟು ಲಾಭ ಗಳಿಕೆಗೆ ಅನುಕೂಲವಾಗುವಂತೆ ಹೆಣ್ಣು ಕರುಗಳ ಜನನಕ್ಕೆ ಪೂರಕವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೆಣ್ಣು ಕರುಗಳ ಸಂತತಿಯನ್ನು ಹೆಚ್ಚಿಸಲು ಕೃತಕ ಗರ್ಭಧಾರಣೆಯನ್ನು ಲಿಂಗನಿರ್ಧರಿತ ವೀರ್ಯ ನಳಿಕೆಗಳನ್ನು ಇಲಾಖೆಯ ವತಿಯಿಂದ ಬಳಸಲಾಗುತ್ತದೆ.
ರಾಸುಗಳಿಗೆ ಉಚಿತ ಲಸಿಕೆ ಕಾರ್ಯಕ್ರಮ
ಕಾಲಮಾನಕ್ಕೆ ತಕ್ಕಂತೆ ಜಾನುವಾರುಗಳಿಗೆ ಕಾಡುವ ವಿವಿಧ ರೋಗಗಳ ವಿರುದ್ಧ ಪಶುಪಾಲನಾ ಇಲಾಖೆಯು ಉಚಿತ ಲಸಿಕಾ ಕಾರ್ಯಕ್ರಮ ಆಯೋಜಿಸುತ್ತ ಬರಲಾಗುತ್ತಿದೆ. ಈ ಕಾರ್ಯಕ್ರಮದಡಿ ಕಾಲುಬಾಯಿ ರೋಗ, ಕಂದುರೋಗ, ಪಿಪಿಆರ್ ರೋಗ, ಹಂದಿಜ್ವರ, ಗಳಲೆ ರೋಗ, ಕರಳು ಬೇನೆ ರೋಗ, ಚರ್ಮಗಂಟು ರೋಗಗಳ ವಿರುದ್ಧ ಉಚಿತವಾಗಿ ಈ ಯೋಜನೆಯಡಿಯಲ್ಲಿ ಲಸಿಕೆಯನ್ನು ಹಾಕಲಾಗುತ್ತದೆ.
ಈ ಯೋಜನೆಗಳ ಪ್ರಯೋಜನ ಪಡೆಯುವುದು ಹೇಗೆ?
ಅರ್ಹ ರೈತರು, ಹೈನುಗಾರರು ಹಾಗೂ ಆಡು ಕುರಿ ಸಾಕಾಣಿಕೆದಾರರು ಮೇಲ್ಕಾಣಿಸಿದ ಯೋಜನೆಗಳ ಪ್ರಯೋಜನ ಪಡೆಯಬಹುದಾಗಿದೆ. ಈ ಸಹಾಯಧನ ಹಾಗೂ ಸಬ್ಸಿಡಿ ಯೋಜನೆಗಳಿಗೆ ಸಂಬಂಧಿಸಿದಂತೆ ಅರ್ಹ ಫಲಾನುಭವಿಗಳಿಂದ ಕಾಲಕಾಲಕ್ಕೆ ಜಿಲ್ಲಾವಾರು ಅನುದಾನ ಲಭ್ಯತೆಯ ಆಧಾರದಲ್ಲಿ ಅರ್ಜಿ ಆಹ್ವಾನಿಸಲಾಗುತ್ತದೆ. ಆಗ ಅರ್ಜಿ ಸಲ್ಲಿಸುವ ಮೂಲಕ ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಅದೇ ರೀತಿ ರಾಸುಗಳಿಗೆ ಉಚಿತ ಲಸಿಕೆ ಕಾರ್ಯಕ್ರಮ, ಸಂಚಾರಿ ಪಶು ಚಿಕಿತ್ಸಾ ಘಟಕಗಳಂತಹ ಯೋಜನೆಗಳನ್ನು ರೈತರಿಗೆ ಸಮರ್ಪಕವಾಗಿ ತಲುಪಿಸಲು ಇಲಾಖೆಯೇ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಆಗ ಅಗತ್ಯ ಇರುವವರು ಅದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಸ್ಥಳೀಯ ಸರ್ಕಾರಿ ಪಶುವೈದ್ಯರು ಅಥವಾ ಹತ್ತಿರದ ತಾಲ್ಲೂಕು ಪಶುಪಾಲನಾ ಇಲಾಖೆ ಕಚೇರಿ ಸಂಪರ್ಕಿಸಿ. ಪಶುಪಾಲನಾ ಇಲಾಖೆಯ ಉಚಿತ ಸಹಾಯವಾಣಿ 8277200300 ನಂಬರ್’ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.
I’m interested in sheep and goat farming.
Who to apply for this scheme?