Govt employees covered by 7th Pay Commission : ಇದೇ ಆಗಸ್ಟ್ ತಿಂಗಳಿನಿಂದ 7ನೇ ವೇತನ ಆಯೋಗದ (7th Pay Commission) ಪ್ರಯೋಜನಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ (Karnataka State Government Employees) ಸಿಗಲಿವೆ. ದಿನಾಂಕ: 31-03-2023ರಂತೆ ಒಟ್ಟು 10.99 ಲಕ್ಷ ನೌಕರರು ಮತ್ತು ನಿವೃತ್ತಿ ವೇತನದಾರರು 7ನೇ ರಾಜ್ಯ ವೇತನ ಆಯೋಗದ ವ್ಯಾಪ್ತಿಗೆ ಒಳಪಡಲಿದ್ದು; ಈ ಎಲ್ಲ ನೌಕರರ ವೇತನ, ಭತ್ಯೆ, ಪಿಂಚಣಿ ಏರಿಕೆಯಾಗಲಿದೆ.
ಅಖಿಲ ಭಾರತ ಸೇವೆಗಳ ಅಧಿಕಾರಿಗಳು, ನ್ಯಾಯಾಂಗ ಅಧಿಕಾರಿಗಳು ಮತ್ತು ಯುಜಿಸಿ / ಎಐಸಿಟಿಇ ವೇತನ ಶ್ರೇಣಿಯ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಕಾಲೇಜುಗಳು ಮತ್ತು ಅನುದಾನಿತ ಸಂಸ್ಥೆಗಳ ಬೋಧಕ ಸಿಬ್ಬಂದಿಯ ವೇತನ ಮತ್ತು ಭತ್ಯೆಗಳು ಆಯೋಗದ ಕಾರ್ಯವ್ಯಾಪ್ತಿಗೆ ಒಳಪಡುವುದಿಲ್ಲ. ಯಾವೆಲ್ಲ ನೌಕರರಿಗೆ 7ನೇ ವೇತನ ಆಯೋಗದ ಪ್ರಯೋಜನಗಳು ಸಿಗಲಿವೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ…
7ನೇ ವೇತನ ಆಯೋಗದ ವ್ಯಾಪ್ತಿಗೆ ಒಳಪಡುವ ನೌಕರರು ಮತ್ತು ಸಿಬ್ಬಂದಿ
- ರಾಜ್ಯ ಸರ್ಕಾರಿ ನೌಕರರು
- ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ
- ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ
- ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿ
- ನಿವೃತ್ತಿ ವೇತನದಾರರು ಮತ್ತು ಕುಟುಂಬ ನಿವೃತ್ತಿ ವೇತನದಾರರು
ಮೇಲ್ಕಣಿಸಿದ ನೌಕರರು, ನಿವೃತ್ತ ನೌಕರರು ಹಾಗೂ ನಿಬ್ಬಂದಿಗಳ ಅಂಕಿ-ಅ೦ಶ ಸಹಿತ ವಿವರಣೆಯನ್ನು ಇಲ್ಲಿ ಅವಲೋಕಿಸೋಣ…
ಕಾರ್ಯನಿರತ ರಾಜ್ಯ ಸರ್ಕಾರಿ ನೌಕರರು
ರಾಜ್ಯ ಸರ್ಕಾರದಲ್ಲಿ ಒಟ್ಟು 94 ಇಲಾಖೆಗಳಿದ್ದು, ಇಲ್ಲಿ ಒಟ್ಟು 5,16,105 ನೌಕರರು ಕಾರ್ಯನಿರತರಾಗಿದ್ದಾರೆ. ಈ ಎಲ್ಲ ನೌಕರರು 7ನೇ ವೇತನ ಆಯೋಗದ ವ್ಯಾಪ್ತಿಗೆ ಒಳಪಡುತ್ತಾರೆ.
ಸರ್ಕಾರಿ ನೌಕರರ ಒಟ್ಟು ಸಂಖ್ಯೆಯಲ್ಲಿ ಶಿಕ್ಷಣ, ಒಳಾಡಳಿತ ಮತ್ತು ಆರೋಗ್ಯ ಇಲಾಖೆಗಳು ಒಟ್ಟಾಗಿ ಅಂದಾಜು ಶೇ.73ರಷ್ಟು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರೆ, ಇತರೆ ಎಲ್ಲಾ ಇಲಾಖೆಗಳಲ್ಲಿ ಶೇ.27ರಷ್ಟು ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಸೆಪ್ಟೆಂಬರ್‌ನಲ್ಲಿ ತುಟ್ಟಿಭತ್ಯೆ ಗಿಫ್ಟ್? | ಯಾರಿಗೆ ಎಷ್ಟು ಸಿಗಲಿದೆ ಡಿಎ? DA Gift for Govt Employees
ಸ್ಥಳೀಯ ಸಂಸ್ಥೆಗಳಲ್ಲಿನ ನೌಕರರು
ಪೌರಾಡಳಿತ ನಿರ್ದೇಶನಾಲಯ ಹಾಗೂ ಬಿಬಿಎಂಪಿ ಮಾಹಿತಿ ಪ್ರಕಾರ ರಾಜ್ಯದ 11 ಮಹಾನಗರ ಪಾಲಿಕೆಗಳು, 62 ನಗರಸಭೆಗಳು, 126 ಪುರಸಭೆಗಳು, 119 ಪಟ್ಟಣ ಪಂಚಾಯತಿ ಮತ್ತು ಅಧಿಸೂಚಿತ ಪ್ರದೆಶಗಳಲ್ಲಿ ಒಟ್ಟು 23,835 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜ್ಯಾದ್ಯಂತ ಒಟ್ಟು 23,835 ನೌಕರರು ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು; ಈ ಎಲ್ಲಾ ನೌಕರರಿಗೆ ರಾಜ್ಯ ಸರ್ಕಾರದ ಸಮಾನ ವೃಂದಗಳು ಮತ್ತು ಹುದ್ದೆಗಳಿಗೆ ಲಭ್ಯವಾಗುವ ವೇತನ ಶ್ರೇಣಿಗಳು ಅನ್ವಯವಾಗುತ್ತವೆ.
ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ನೌಕರರು
ರಾಜ್ಯದ ವಿವಿಧ ಪ್ರವರ್ಗಗಳ ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿನ 51,681 ನೌಕರರಿಗೆ ರಾಜ್ಯ ಸರ್ಕಾರದಿಂದ ಅನುದಾನದ ರೂಪದಲ್ಲಿ ವೇತನವನ್ನು ಪಾವತಿ ಮಾಡಲಾಗುತ್ತಿದೆ. ಈ ಎಲ್ಲಾ ನೌಕರರು ಕೂಡ 7ನೇ ವೇತನ ಆಯೋಗದ ಪ್ರಯೋಜನಕ್ಕೆ ಭಾಜನರಾಗುತ್ತಾರೆ.
ಈ ನೌಕರರಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಪದವಿ ಪೂರ್ವ ಕಾಲೇಜುಗಳು, ಪದವಿ ಮತ್ತು ಸ್ನಾತಕೋತ್ತರ ಪಠ್ಯಕ್ರಮಗಳನ್ನು ಹೊಂದಿರುವ ಕಾಲೇಜುಗಳು, ಕೈಗಾರಿಕಾ ತರಬೇತಿ ಕೇಂದ್ರಗಳು, ಕಾನೂನು ಕಾಲೇಜುಗಳು, ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿ೦ಗ್ ಕಾಲೇಜುಗಳ ಎಲ್ಲಾ ನೌಕರರು ಸೇರಿರುತ್ತಾರೆ.
ವಿಶ್ವವಿದ್ಯಾಲಯಗಳಲ್ಲಿನ ಬೋಧಕೇತರ ಸಿಬ್ಬಂದಿ
ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ 32 ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 3,269 ಬೋಧಕೇತರ ಸಿಬ್ಬಂದಿಗಳಿಗೂ ಕೂಡ ರಾಜ್ಯ ಸರ್ಕಾರದ ವೇತನ ಶ್ರೇಣಿಗಳನ್ನು ವಿಸ್ತರಿಸಲಾಗಿದ್ದು, ಈ ಸಿಬ್ಬಂದಿ ಕೂಡ 7ನೇ ವೇತನ ಆಯೋಗದ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಗಳು ವೇತನ ಮತ್ತು ನಿವೃತ್ತಿ ವೇತನಕ್ಕಾಗಿ ರಾಜ್ಯ ಸರ್ಕಾರದಿಂದ ಯಾವುದೇ ಅನುದಾನವನ್ನು ಪಡೆಯದೇ ಇರುವುದರಿಂದ, ಅವುಗಳಲ್ಲಿ ಸೇವೆ ಸಲ್ಲಿಸುವ ಬೋದಕೇತರ ಸಿಬ್ಬಂದಿಗೆ 7ನೇ ವೇತನ ಆಯೋಗದ ಪ್ರಯೋಜನ ಅನ್ವಯವಾಗುವುದಿಲ್ಲ.
ನಿವೃತ್ತ ನೌಕರರು
ಇನ್ನು ಕರ್ನಾಟಕ ಸರ್ಕಾರದ ಖಜಾನೆ ಇಲಾಖೆ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಟ್ಟು 5,27,954 ನಿವೃತ್ತಿ ವೇತನದಾರರು ಮತ್ತು ಕುಟುಂಬ ನಿವೃತ್ತಿ ವೇತನದಾರರಿದ್ದು; ಇವರೆಲ್ಲ 7ನೇ ರಾಜ್ಯ ವೇತನ ಆಯೋಗದ ವ್ಯಾಪ್ತಿಗೊಳಪಡುತ್ತಾರೆ.
ಈ ಪೈಕಿ 3.17,337 ಜನ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ನಿವೃತ್ತಿ ವೇತನದಾರರು ಸೇರಿದಂತೆ ರಾಜ್ಯ ನಿವೃತ್ತಿ ವೇತನದಾರರಿದ್ದಾರೆ. ಇನ್ನು 1.91,764 ಕುಟುಂಬ ನಿವೃತ್ತಿ ವೇತನದಾರರಿದ್ದಾರೆ. ಅದೇ ರೀತಿ 18,853 ಜನ ಸ್ಥಳೀಯ ಸಂಸ್ಥೆಗಳ ನಿವೃತ್ತಿ ವೇತನದಾರರಿದ್ದಾರೆ.
ಎನ್‌ಪಿಎಸ್ ವ್ಯಾಪ್ತಿಯ ಸರ್ಕಾರಿ ನೌಕರರು
ದಿನಾಂಕ: 31-03-2023ರಂತೆ 2,64,008 ಸರ್ಕಾರಿ ನೌಕರರು ಎನ್‌ಪಿಎಸ್ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ. ದಿನಾಂಕ: 01-04-2006 ಮತ್ತು ತದನಂತರ ನೇಮಕವಾಗುವ ಎಲ್ಲಾ ಸರ್ಕಾರಿ ನೌಕರರಿಗೆ ವಂತಿಗೆಯಾಧಾರಿತ ರಾಷ್ಟ್ರೀಯ ನಿವೃತ್ತಿ ವೇತನ ಯೋಜನೆಯನ್ನು (ಎನ್‌ಪಿಎಸ್) ರಾಜ್ಯ ಸರ್ಕಾರ ಜಾರಿಗೆ ತಂದಿದೆ.
ಪ್ರಸ್ತುತ, ಈ ಯೋಜನೆ ಅಡಿಯಲ್ಲಿ ನೌಕರರು ಅವರ ಮೂಲ ವೇತನ ಮತ್ತು ತುಟ್ಟಿ ಭತ್ಯೆಯ ಶೇ.10 ರಷ್ಟನ್ನು ವಂತಿಗೆಯಾಗಿ ಪಿಂಚಣಿ ನಿಧಿಗೆ ಜಮೆ ಮಾಡುತ್ತಾರೆ. ಇದಕ್ಕೆ ರಾಜ್ಯ ಸರ್ಕಾರವು ನೌಕರರ ಸೇವಾ ಅವಧಿಯಲ್ಲಿ ಶೇ.14ರಷ್ಟು ವಂತಿಗೆಯನ್ನು ನೀಡುತ್ತದೆ.
Source : State 7th Commission Report Volume-1
Very Good Benefit.