ಸರ್ಕಾರ ಈ ಬಾರಿ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆ ಶಾಲಾ ಮಕ್ಕಳಿಗೆ ಸೈಕಲ್ ವಿತರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಹೊಸ ಶೈಕ್ಷಣಿಕ ವರ್ಷ ಆರಂಭದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ ಯೋಜನೆಯನ್ನು ಜಾರಿಗೊಳಿಸಲು ಸಿದ್ಧತೆ ಮಾಡಿಕೊಂಡಿದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸದೃಢ ಆರೋಗ್ಯ ಮತ್ತು ಪರಿಸರ ಪ್ರೀತಿ ಬೆಳೆಸಲು ಈ ಯೋಜನೆ ಮುಖ್ಯ ಉದ್ದೇಶವಾಗಿದೆ.
ಬಜೆಟ್‌ನಲ್ಲಿ ಅನುದಾನ ಮೀಸಲು
2025-26ನೇ ಸಾಲಿನ ಬಿಬಿಎಂಪಿ ಬಜೆಟ್‌ನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸಲು ₹721.40 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. ಕಳೆದ ವರ್ಷ (2024-25) ₹554.05 ಕೋಟಿ ಮೀಸಲಾಗಿತ್ತು.
ಈ ಬಾರಿ ₹167 ಕೋಟಿ ಹೆಚ್ಚುವರಿ ಅನುದಾನವನ್ನು ಮೀಸಲಿಟ್ಟಿದ್ದು, ಇದರಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸುವ ಅವಕಾಶ ಕಲ್ಪಿಸಲಾಗಿದೆ.ಕಲ್ಯಾಣ ವಿಭಾಗದ ಅಧಿಕಾರಿಗಳಿಗೆ ಈ ಯೋಜನೆ ಕಾರ್ಯಗತಗೊಳಿಸಲು ವಿಶೇಷ ಮಾರ್ಗಸೂಚಿ ರೂಪಿಸಲು ಸೂಚಿಸಲಾಗಿದೆ.
Arivu Education Loan Scheme- ಸರ್ಕಾರದಿಂದ 5 ಲಕ್ಷ ರೂಪಾಯಿ ವರೆಗೆ ಶಿಕ್ಷಣ ಸಾಲ | ಅರ್ಜಿ ಆಹ್ವಾನ
ಏನಿದು ಶಾಲಾ ಮಕ್ಕಳ ಉಚಿತ ಸೈಕಲ್ ಯೋಜನೆ?
2006-07ರಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಈ ಯೋಜನೆ ಆರಂಭಿಸಲಾಗಿಯತ್ತು. ಪ್ರಾರಂಭದಲ್ಲಿ ಕೇವಲ ಸರ್ಕಾರಿ ಪ್ರೌಢಶಾಲೆಗಳ ಹೆಣ್ಣು ಮಕ್ಕಳಿಗೆ ಸೈಕಲ್ ವಿತರಿಸಲಾಗುತ್ತಿತ್ತು. ನಂತರ ಬಾಲಕರಿಗೂ ಈ ಸೌಲಭ್ಯ ವಿಸ್ತರಿಸಿ ಸಮಾನ ಅವಕಾಶ ಕಲ್ಪಿಸಲಾಯಿತು.
ಆದರೆ, 2019ರಲ್ಲಿ ಈ ಯೋಜನೆ ಏಕಾಏಕಿ ಸ್ಥಗಿತಗೊಂಡಿತ್ತು. 2022ರಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಯೋಜನೆಯನ್ನು ಪುನಶ್ಚೇತನಗೊಳಿಸುವ ಭರವಸೆ ನೀಡಿದ್ದರು. ಆದರೆ, ಭರವಸೆ ಈಡೇರುವ ಹೊತ್ತಿಗೆ ಅವರು ಸಿಎಂ ಸ್ಥಾನದಿಂದ ನಿರ್ಗಮಿಸಿದ್ದರು.
ಮತ್ತೆ 2023ರಲ್ಲಿ ಸಿದ್ದರಾಮಯ್ಯ ಸಂಪುಟದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು 8ನೇ ತರಗತಿ ಮಕ್ಕಳಿಗೆ ಸೈಕಲ್ ನೀಡುವುದಾಗಿ ಘೋಷಿಸಿದ್ದರು. ಅದೂ ಕೂಡ ಪ್ರಗತಿ ಆಗಿರಲಿಲ್ಲ. ಇದೀಗ ಬಿಬಿಎಂಪಿ ಇದಕ್ಕಾಗಿ ಸ್ಪಷ್ಟ ಕಾರ್ಯಕ್ರಮ ರೂಪಿಸಿದ್ದು, ಶೀಘ್ರವೇ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆಗೆ ಮುಂದಾಗಿದೆ.

ಯಾವ್ಯಾವ ವಿದ್ಯಾರ್ಥಿಗಳಿಗೆ ಸೈಕಲ್ ಸಿಗಲಿದೆ?
ಬಿಬಿಎಂಪಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ಸಿಗಲಿದೆ. ಕೇವಲ ಬಿಬಿಎಂಪಿಯ ಶಾಲೆಯ ವಿದ್ಯಾರ್ಥಿಗಳಿಗಷ್ಟೇ ಅಲ್ಲದೇ, ಬಿಬಿಎಂಪಿ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಕೂಡ ಸೈಕಲ್ ಪಡೆಯಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
ಶೈಕ್ಷಣಿಕ ವರ್ಷ 2025-26 ಸಾಲಿನಲ್ಲಿ 8ನೇ ತರಗತಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳು ಆಗಲಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಬಾರಿ ಎಷ್ಟು ವಿದ್ಯಾರ್ಥಿಗಳು 8ನೇ ತರಗತಿಗೆ ದಾಖಲಾತಿ ಪಡೆಯಲಿದ್ದಾರೆ ಎಂಬುದರ ಕುರಿತು ಮಾಹಿತಿ ಸಂಗ್ರಹಣೆ ಮಾಡುವುದಕ್ಕೆ ಬಿಬಿಎಂಪಿ ಕಲ್ಯಾಣ ವಿಭಾಗದ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
ಅರ್ಜಿ ಸಲ್ಲಿಕೆ ಹೇಗೆ?
ಅರ್ಹ ವಿದ್ಯಾರ್ಥಿಗಳು ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್ ಅಥವಾ ತಾವು ಕಲಿಯುತ್ತಿರುವ ಶಾಲೆಯ ಮುಖಾಂತರ ಅರ್ಜಿ ಸಲ್ಲಿಸಬೇಕು. ಅರ್ಜಿಯೊಂದಿಗೆ ವಿದ್ಯಾರ್ಥಿಯ ದಾಖಲಾತಿ ಪ್ರಮಾಣಪತ್ರ ಮತ್ತು ಶಾಲೆಯ ದೃಢೀಕರಣ ಪತ್ರ ಅಗತ್ಯವಿರಲಿದೆ.
ಅರ್ಜಿಯ ತಪಾಸಣೆ ನಂತರ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆಯ ಪಟ್ಟಿ ಪ್ರಕಟಿಸಲಾಗುವುದು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮತ್ತು ಇತರ ತಾಂತ್ರಿಕ ವಿವರಗಳನ್ನು ಬಿಬಿಎಂಪಿ ಶೀಘ್ರದಲ್ಲೇ ಪ್ರಕಟಿಸಲಿದೆ ಎನ್ನಲಾಗುತ್ತಿದೆ.
ಈ ಯೋಜನೆ ರಾಜ್ಯಾದ್ಯಂತ ವಿಸ್ತರಣೆಯಾಗುತ್ತಾ?
ಕಳೆದ 2023ರಲ್ಲಿ ಸಿದ್ದರಾಮಯ್ಯ ಸರ್ಕಾರ ನಿಂತು ಹೋಗಿದ್ದ ಶಾಲಾ ಮಕ್ಕಳಿಗೆ ಉಚಿತ ಸೈಕಲ್ ವಿತರಿಸುವ ಯೋಜನೆಗೆ ಮರು ಚಾಲನೆ ನೀಡುವ ಸೂಚನೆ ನೀಡಿತ್ತು. ಬಹುಶಃ ನಂತರದ ದಿನಗಳಲ್ಲಿ ಈ ಯೋಜನೆ ರಾಜ್ಯದ ಇತರ ಮಕ್ಕಳಿಗೂ ವಿಸ್ತರಣೆಯಾದರೆ ಆಶ್ಚರ್ಯವಿಲ್ಲ.
ಸದ್ಯಕ್ಕೆ ಬಿಬಿಎಂಪಿಯ ಉಚಿತ ಸೈಕಲ್ ವಿತರಣಾ ಯೋಜನೆ ಶಿಕ್ಷಣದ ಜೊತೆಗೆ ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು ಸಂಚಾರ ಸುಧಾರಣೆಗೆ ಕೂಡ ಒಂದು ದೊಡ್ಡ ಹೆಜ್ಜೆಯಾಗಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಸಿಗಲಿದೆ. ಈ ಕುರಿತ ಬಿಬಿಎಂಪಿಯ ಅಧಿಕೃತ ಸೂಚನೆಗಳನ್ನು ಕಾದು ನೋಡಬೇಕಿದೆ.