Diabetes completely curable : ಜೀವನದಲ್ಲಿ ಒಂದೊಮ್ಮೆ ಮಧುಮೇಹ (Diabetes) ದೇಹವನ್ನು ಅಮರಿಕೊಂಡರೆ ಕೊನೆ ಉಸಿರಿರುವ ತನಕ ಅದು ವಾಸಿಯಾಗದು. ಮಧುಮೇಹ ದೇಹ ವ್ಯಾಪಿಸದಂತೆ ಎಚ್ಚರವಹಿಸುವುದೊಂದೇ ಇದಕ್ಕಿರುವ ಪರಿಹಾರ. ಆದರೆ, ಆಧುನಿಕ ಜೀವನ ಶೈಲಿ, ಒತ್ತಡದ ಬದುಕು, ಕಳಪೆ ಆಹಾರ ಕ್ರಮದಿಂದಾಗಿ ಇಂದು ಮಧುಮೇಹ ಕಾಯಿಲೆ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ತೀರಾ ಚಿಕ್ಕ ಮಕ್ಕಳನ್ನೂ ಸಹ ಇಂದು ಮಧುಮೇಹ ಕಾಡುತ್ತಿದೆ.
ಪೌಷ್ಠಿಕ ಆಹಾರ ಸೇವನೆ, ಒತ್ತಡರಹಿತ ಜೀವನ ಶೈಲಿಯ ಜತೆಗೆ ಬದುಕನ್ನು ಶಿಸ್ತುಬದ್ಧವಾಗಿ ಏಗುವುದರಿಂದ ಮಧುಮೇಹ ಖಾಯಿಲೆಯನ್ನು ನಿಯಂತ್ರಣದಲ್ಲಿಡಬಹುದು. ನಿತ್ಯ ನಡಿಗೆ, ವ್ಯಾಯಾಮ, ಆರೋಗ್ಯಕರ ಜೀವನ ಶೈಲಿಯಿಂದ ಬಹಳಷ್ಟು ಮಧುಮೇಹಿಗಳು ಕಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊ೦ಡು ಪರಿಪೂರ್ಣ ಬದುಕು ನಡೆಸುತ್ತಿದ್ದಾರೆ. ಆದರೆ ಔಷಧಿ, ಶಸ್ತç ಚಿಕಿತ್ಸೆಗಳ ಮೂಲಕ ಇದನ್ನು ಶಾಶ್ವತವಾಗಿ ಗುಣವಾಗಿಸುವುದು ಕಷ್ಟಕರ!
ಶಾಶ್ವತ ಗುಣ ಸಾಧ್ಯ?!
ಆದರೆ, ಇದೀಗ ಚೀನಾದ ಸಂಶೋಧಕರು ‘ಸೆಲ್ ಥೆರಪಿ’ (Cell therapy) ಮೂಲಕ ಮೊಟ್ಟಮೊದಲ ಬಾರಿ ಮಧುಮೇಹ ಚಿಕಿತ್ಸೆ ನೀಡಿ ರೋಗಿಯೊಬ್ಬನನ್ನು ಸಂಪೂರ್ಣ ಗುಣಮುಖ ಮಾಡಿದ್ದಾಗಿ ಘೋಷಿಸಿಕೊಂಡಿದ್ದಾರೆ. ಈ ವಿಚಾರವನ್ನು ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ಪತ್ರಿಕೆ ವರದಿ ಸವಿಸ್ತಾರವಾಗಿ ವರದಿ ಮಾಡಿದೆ.
ವರದಿ ಪ್ರಕಾರ 2021ರಲ್ಲಿ ‘ಸೆಲ್ ಟ್ರಾನ್ಸ್‌ಪ್ಲಾಂಟ್’ (ಕೋಶಗಳ ಕಸಿ) ಮಾಡಲ್ಪಟ್ಟಿದ್ದ ವ್ಯಕ್ತಿಯೊಬ್ಬರು ಒಂದೇ ವರ್ಷದಲ್ಲಿ ಯಾವುದೇ ರೀತಿಯ ಔಷಧಿಗಳನ್ನು ಬಳಸದೇ ಸಂಪೂರ್ಣ ಸಹಜ ಜೀವನ ನಡೆಸುತ್ತಿದ್ದಾನೆ. ಆ ಮೂಲಕ ಸೆಲ್ ಥೆರಪಿ ಮೂಲಕ ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸಬಹುದು ಎಂದು ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ಪತ್ರಿಕೆ ವರದಿ ಮಾಡಿದೆ.

ಏನಿದು ಸೆಲ್ ಥೆರಪಿ?
ಇದು ಮೇದೋಜ್ಜೀರಕ ಗ್ರಂಥಿಯಲ್ಲಿನ ಇನ್ಸುಲಿನ್ ಉತ್ಪಾದಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಕೋಶಗಳನ್ನು ಕೃತಕವಾಗಿ ಸಿದ್ಧಪಡಿಸಿ ‘ಕಸಿ’ ಮಾಡುವ (Cell transplant) ಚಿಕಿತ್ಸೆಯಾಗಿದೆ. ಇದು ಪ್ರಾಯೋಗಿಕವಾಗಿ ಯಶ ಕಂಡಿದೆ ಎಂದು ಚೀನಾದ ಶಾಂಘೈ ಚಾಂಗ್‌ಜೆ೦ಗ್ ಆಸ್ಪತ್ರೆಯ ಪ್ರಮುಖ ಸಂಶೋಧಕ ಯಿನ್ ಹಾವೊ ಹೇಳಿದ್ದಾರೆಂದು ಪತ್ರಿಕೆ ವರದಿ ಮಾಡಿದೆ.
25 ವರ್ಷಗಳಿಂದ ಟೈಪ್-2 ಡಯಾಬಿಟಿಸ್‌ನಿಂದ (Type-2 diabetes) ಬಳಲುತ್ತಿದ್ದ ಆತನ ಐಲೆಟ್ ಕೋಶಗಳು ಪೂರ್ತಿ ತಟಸ್ತವಾಗಿದ್ದವು. ಆತನಿಗೆ ನಿತ್ಯ ಇನ್ಸುಲಿನ್ ಚುಚ್ಚುಮದ್ದುಗಳ ಅಗತ್ಯವಿತ್ತು. ಆದರೆ 2021ರ ಜುಲೈರಲ್ಲಿ ಕೋಶ ಕಸಿ ಚಿಕಿತ್ಸೆ ಪಡೆದ ನಂತರ, ರೋಗಿಯು ಹನ್ನೊಂದು ವಾರಗಳಲ್ಲಿ ಇನ್ಸುಲಿನ್ (Insulin) ಚುಚ್ಚುಮದ್ದಿನಿಂದ ಮುಕ್ತನಾದ. ಮುಂದೆ ಒಂದು ವರ್ಷದಲ್ಲಿ ನಿಧಾನಕ್ಕೆ ಆತನಿಗೆ ನೀಡಲಾಗುತ್ತಿದ್ದ ಔಷಧಿ ಪ್ರಮಾಣವನ್ನು ಕಡಿಮೆ, ಕ್ರಮೇಣ ಪೂರ್ತಿ ನಿಲ್ಲಿಸಲಾಯಿತು.
ಸಂಪೂರ್ಣ ಗುಣವಾದ ಮಧುಮೇಹ
ಔಷಧಿ ಸೇವನೆ ನಿಲ್ಲಿಸಿದ ಆನಂತರ ತಪಾಸಣೆ ನಡೆಸಿದಾಗ ರೋಗಿಯ ಮೇದೋಜ್ಜೀರಕ ಗ್ರಂಥಿಯಲ್ಲಿನ ಇನ್ಸುಲಿನ್ ಉತ್ಪಾದಿಸುವ ಕೋಶಗಳು (ಪ್ಯಾಂಕ್ರಿಯಾಟಿಕ್ ಐಲೆಟ್) ಪುನಃ ಯಥಾಪ್ರಕಾರ ಕೆಲಸ ಆರಂಭಿಸಿರುವುದು ಖಚಿತವಾಗಿದೆ. ಇದೀಗ ಸೆಲ್ ಥೆರಪಿಗೆ ಒಳಗಾಗಿದ್ದ ವ್ಯಕ್ತಿ 33 ತಿಂಗಳುಗಳಿAದ ಇನ್ಸುಲಿನ್ ಮುಕ್ತನಾಗಿದ್ದಾನೆ ಮತ್ತು ಆತ ಮಧುಮೇಹ ಖಾಯಿಲೆಯಿಂದ ಗುಣವಾಗಿದ್ದಾನೆಂದು ಹೇಳಲಾಗುತ್ತಿದೆ.
ನಿಜಕ್ಕೂ ಇದೊಂದು ಮಹತ್ವದ ಸಂಶೋಧನೆಯಾಗಿದ್ದು; ಇದೆಲ್ಲ ಸಾಧ್ಯವಾಗಿದ್ದು ನಿಜವಾದರೆ ಮಧುಮೇಹಿಗಳು ಇನ್ಮುಂದೆ ಜೀವನ ಪರ್ಯಂತ ತೊಳಲಾಡಬೇಕಿಲ್ಲ. ನಿತ್ಯ ಔಷಧಿ, ಇನ್ಸುಲಿನ್ ಚುಚುಮದ್ದುಗಳ ಗೋಳಿನಿಂದ ಮುಕ್ತರಾಗಬಹುದು. ಮಧುಮೇಹವನ್ನು ಶಾಶ್ವತವಾಗಿ ಗುಣವಾಗಿಸುವ ‘ಸೆಲ್ ಥೆರಪಿ’ ಕುರಿತ ಖಚಿತ ಮಾಹಿತಿಗಳು ಇನ್ನುಮೇಲಷ್ಟೇ ನಿಖರವಾಗಬೇಕಿದೆ!