
ಎಸ್‌ಎಸ್‌ಸಿಯಿಂದ ದಿಲ್ಲಿ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳಿಗೆ (Delhi Police Constable Recruitment 2025) ಪಿಯುಸಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ದಿಲ್ಲಿ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳಿಗೆ ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗವು (Staff Selection Commission- SSC) ಅರ್ಜಿ ಆಹ್ವಾನಿಸಿದೆ. ಪಿಯುಸಿ ಪಾಸಾದ ದೇಶದ ಯಾವುದೇ ರಾಜ್ಯದ ಅಭ್ಯರ್ಥಿಗಳಾಗಿದ್ದರೂ ಅರ್ಜಿ ಸಲ್ಲಿಸುವ ಅವಕಾಶವಿದೆ. ಕರ್ನಾಟಕದಲ್ಲಿಯೂ ಪರೀಕ್ಷಾ ಕೇಂದ್ರಗಳಿರುತ್ತವೆ.
ಈ ಪರೀಕ್ಷೆಯ ಮೂಲಕ ಒಟ್ಟು 7,565 ಕಾನ್‍ಸ್ಟೆಬಲ್ ಹುದ್ದೆಗಳಿಗೆ ನೇಮಕ ನಡೆಯಲಿದೆ. ಇದೇ ಸೆಪ್ಟೆಂಬರ್ 23ರಿಂದಲೇ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಈ ನೇಮಕಕ್ಕೆ ಡಿಸೆಂಬರ್ ಅಥವಾ ಮುಂದಿನ ವರ್ಷದ ಜನವರಿಯಲ್ಲಿ ಪರೀಕ್ಷೆ ನಡೆಯಲಿದೆ.
ಶೈಕ್ಷಣಿಕ ಅರ್ಹತೆಗಳು
ಈ ಹುದ್ದೆಗಳಿಗೆ ದ್ವಿತೀಯ ಪಿಯುಸಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಪುರುಷ ಅಭ್ಯರ್ಥಿಗಳು ಕಡ್ಡಾಯವಾಗಿ ಲಘು ವಾಹನ ಪರವಾನಗಿ ಹೊಂದಿರಬೇಕು. ಅಭ್ಯರ್ಥಿಗಳಲ್ಲಿ ಎನ್‌ಸಿಸಿ ಸರ್ಟಿಫಿಕೇಟ್ ಇದ್ದರೆ ಅದನ್ನೂ ನೇಮಕಕ್ಕೆ ಪರಿಗಣಿಸಲಾಗುತ್ತದೆ.
ವಯೋಮಿತಿ ವಿವರ
18ರಿಂದ 25 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಅಂದರೆ ಅಭ್ಯರ್ಥಿಗಳು 2000ನೇ ಇಸವಿಯ ಜುಲೈ 1ರ ಮೊದಲು ಹಾಗೂ 2007ರ ಜುಲೈ 2ರ ನಂತರ ಜನಿಸಿದವರು ಆಗಿರಬಾರದು.
ಮೀಸಲಾತಿ ವ್ಯಾಪ್ತಿಗೆ ಒಳಪಡುವ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ವರ್ಗದವರಿಗೆ 3 ವರ್ಷ ಹಾಗೂ ಕ್ರೀಡಾಳುಗಳಿಗೆ ಗರಿಷ್ಠ ವಯೋಮಿತಿಯಲ್ಲಿ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ ಮತ್ತು ಅರ್ಜಿ ತಿದ್ದುಪಡಿ
ಎಸ್‌ಸಿ/ಎಸ್‌ಟಿ ಮತ್ತು ಮಾಜಿ ಸೈನಿಕರು ಹೊರತುಪಡಿಸಿ ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳು 100 ರೂ. ಶುಲ್ಕ ಪಾವತಿಸಬೇಕು. ಶುಲ್ಕ ಪಾವತಿಗೆ ಅಕ್ಟೋಬರ್ 22 ಕೊನೆಯ ದಿನವಾಗಿರುತ್ತದೆ.
ಒಮ್ಮೆ ಸಲ್ಲಿಸಿದ ಅರ್ಜಿಯನ್ನು ತಿದ್ದುಪಡಿ ಮಾಡಲೂ ಅವಕಾಶವಿದೆ. ಅಕ್ಟೋಬರ್ 29-31ರ ತನಕ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಒಮ್ಮೆ ಅರ್ಜಿಯನ್ನು ತಿದ್ದುಪಡಿ ಮಾಡಲು ಬಯಸಿದ್ದಲ್ಲಿ 200 ರೂ. ಮತ್ತು ನಂತರದ ತಿದ್ದುಪಡಿಗಳಿಗೆ 500 ರೂ. ಶುಲ್ಕ ವಿಧಿಸಲಾಗುತ್ತದೆ. ಅಭ್ಯರ್ಥಿಗಳು ಇದನ್ನು ಗಮನದಲ್ಲಿಟ್ಟುಕೊಂಡು ಅರ್ಜಿ ಸಲ್ಲಿಸಬೇಕು.

ನೇಮಕಾತಿ ಹೇಗೆ ನಡೆಯುತ್ತದೆ?
ಅರ್ಹ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧರಿತ ಪರೀಕ್ಷೆ ನಡೆಸಲಾಗುತ್ತದೆ. ವಸ್ತುನಿಷ್ಠ ಮಾದರಿಯ ಬಹು ಆಯ್ಕೆಯ 100 ಅಂಕಗಳ 100 ಪ್ರಶ್ನೆಗಳಿಗೆ ಅಭ್ಯರ್ಥಿಗಳು ಉತ್ತರಿಸಬೇಕಾಗುತ್ತದೆ.
ಸಾಮಾನ್ಯ ಜ್ಞಾನ/ ಪ್ರಚಲಿತ ವಿದ್ಯಮಾನ ರೀಸನಿಂಗ್, ನ್ಯೂಮರಿಕಲ್ ಎಬಿಲಿಟಿ, ಕಂಪ್ಯೂಟರ್ ಜ್ಞಾನದ ಪ್ರಶ್ನೆಗಳಿರುತ್ತವೆ. ಹೆಚ್ಚೆಂದರೆ ಸಾಮಾನ್ಯ/ಪ್ರಚಲಿತ ವಿದ್ಯಮಾನಕ್ಕೆ 50 ಅಂಕಗಳನ್ನು ಮೀಸಲಿಡಲಾಗಿದೆ. ತಪ್ಪು ಉತ್ತರಗಳಿಗೆ 0.25 ಅಂಕಗಳನ್ನು ಕಳೆಯಲಾಗುತ್ತದೆ.
ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಮತ್ತು ದಾಖಲಾತಿ ಪರಿಶೀಲನೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.
ವೇತನ ಶ್ರೇಣಿ
ದಿಲ್ಲಿ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಮಾಸಿಕ 21,700 ರೂ. ರಿಂದ 69,100 ರೂ. ವರೆಗೆ ವೇತನ ನಿಗದಿಪಡಿಸಲಾಗಿದೆ. ಇದರ ಜೊತೆಗೆ ವಿವಿಧ ಸವಲತ್ತುಗಳು ಅನ್ವಯವಾಗಲಿವೆ.
ರಾಜ್ಯದಲ್ಲಿ ಪರೀಕ್ಷಾ ಕೇಂದ್ರ
ರಾಜ್ಯದಲ್ಲಿ ರಾಜಧಾನಿ ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಉಡುಪಿ, ಶಿವಮೊಗ್ಗ, ಮೈಸೂರು ಮತ್ತು ಬೆಳಗಾವಿಗಳಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಕೊನೆ ದಿನ: 21-10-2025
- ಅರ್ಜಿ ತಿದ್ದುಪಡಿಗೆ ಅವಕಾಶ: ಅಕ್ಟೋಬರ್ 29-30, 2025
- ಕಂಪ್ಯೂಟರ್ ಆಧರಿತ ಪರೀಕ್ಷೆ: 2025ರ ಡಿಸೆಂಬರ್/ 2025ರ ಜನವರಿ
ಅಧಿಸೂಚನೆ: Download
ಅರ್ಜಿ ಲಿಂಕ್: Apply Now