ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) 2025-26ನೇ ಸಾಲಿನ ಸಿಇಟಿ (CET) ಎಂಜಿನಿಯರಿಂಗ್ ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಿದ್ದು, ಈ ಬಾರಿ ದಾಖಲೆ ಮಟ್ಟದಲ್ಲಿ ಸೀಟುಗಳ ಸಂಖ್ಯೆಯಲ್ಲಿ (CET Seat Increase 2025) ಹೆಚ್ಚಳವಾಗಿದೆ. ಇದೀಗ ಕೆಇಎ ಇಂಜಿನಿಯರಿಂಗ್ ಸೀಟುಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ.
ಕೆಇಎ ನೀಡಿದ ಮಾಹಿತಿ ಪ್ರಕಾರ ಪ್ರಸಕ್ತ ವರ್ಷ ರಾಜ್ಯದ 245 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಟ್ಟು 10,427 ಸೀಟುಗಳು ಹೆಚ್ಚಳವಾಗಿವೆ. ಹಿಂದಿನ ವರ್ಷ 1,41,009 ಸೀಟುಗಳಿದ್ದು, 2024-25ನೇ ಸಾಲಿನಲ್ಲಿ ಒಟ್ಟು 1,51,436 ಸೀಟುಗಳು ಲಭ್ಯವಾಗಿದೆ.
ಕಳೆದ ವರ್ಷ 2.74 ಲಕ್ಷ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಕೋರ್ಸ್’ಗಳಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದರು. ಈ ಬಾರಿ 2,75,677 ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (CET-2025) ಅರ್ಹತೆ ಪಡೆದಿದ್ದಾರೆ. ಆ ಪೈಕಿ 2,62,195 ವಿದ್ಯಾರ್ಥಿಗಳು ಎಂಜಿನಿಯರಿಂಗ್ ಅರ್ಹತೆ ಪಡೆದಿದ್ದಾರೆ.
ಕಂಪ್ಯೂಟರ್ ಸೈನ್ಸ್ ಸೀಟುಗಳು ಹೆಚ್ಚಳ
ಕಂಪ್ಯೂಟರ್ ಸೈನ್ಸ್ ಕೋರ್ಸಿನ ಸೀಟುಗಳ ಸಂಖ್ಯೆಯೇ 4,500ರಷ್ಟು ಜಾಸ್ತಿಯಾಗಿರುವುದು ಗಮನಾರ್ಹ ಸಂಗತಿ. ಒಟ್ಟು ಸೀಟುಗಳ ಪೈಕಿ ಸರ್ಕಾರಿ ಕೋಟಾದಡಿ 71,303, ಕಾಮೆಡ್-ಕೆ ಕೋಟಾದಡಿ 31,703, ಮತ್ತು ಸೂಪರ್ ನ್ಯೂಮರರಿ ಕೋಟಾದಡಿ 5,765 ಸೀಟುಗಳು ಸೇರಿವೆ.
ಪ್ರತಿ ವರ್ಷದಂತೆ, ಈ ವರ್ಷವೂ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ (CSE) ಕೋರ್ಸ್’ಗಳಲ್ಲಿ ಹೆಚ್ಚಿನ ಸಂಖ್ಯೆಯ ಸೀಟುಗಳು ಲಭ್ಯವಿದೆ. ವರ್ಷದಿಂದ ವರ್ಷಕ್ಕೆ ಕಂಪ್ಯೂಟರ್ ಸೈನ್ಸ್’ ಹೆಚ್ಚಿನ ಬೇಡಿಕೆ ಬರುತ್ತಿದ್ದು ಕಳೆದ ಬಾರಿ ರಾಜ್ಯದಲ್ಲಿ 33,573 ಸೀಟುಗಳು ಲಭ್ಯವಿದ್ದವು. ಈ ಬಾರಿ 4,605 ಸೀಟುಗಳನ್ನು ಹೆಚ್ಚಳ ಮಾಡಿದ್ದು ಸದ್ಯ ಆ ಕೋರ್ಸುಗಳ ಸಂಖ್ಯೆ 38,178 ಆಗಿದೆ.
ಅದೇ ರೀತಿ, ಈ ಸಲ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್‌ನಲ್ಲಿ 20,208 ಸೀಟುಗಳು, ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ 9,108 ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ 8,960 ಸೀಟುಗಳು ಲಭ್ಯವಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಸೀಟುಗಳಿವೆ?
ಪ್ರಸಕ್ತ ಸಾಲಿನಲ್ಲಿ ವಿವಿಧ ಎಂಜಿರಿಂಗ್ ಕಾಲೇಜುಗಳಲ್ಲಿ ಲಭ್ಯವಿರುವ ಸೀಟುಗಳ ವಿವರ ಈ ಕೆಳಗಿನಂತಿವೆ:
- ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು: 6,255
- ಅನುದಾನಿತ ಎಂಜಿನಿಯರಿಂಗ್ ಕಾಲೇಜುಗಳು: 2,950
- ಖಾಸಗಿ ಅನುದಾನರಹಿತ ಕಾಲೇಜುಗಳು: 95,236
- ಅಲ್ಪಸಂಖ್ಯಾತ ಎಂಜಿನಿಯರಿಂಗ್ ಕಾಲೇಜುಗಳು: 10,440
- ವಿಶ್ವೇಶ್ವರಯ್ಯ ಕಾಲೇಜು ಎಂಜಿನಿಯರಿಂಗ್ ವಿಶ್ವವಿದ್ಯಾಲಯ: 760
- ಖಾಸಗಿ ವಿಶ್ವವಿದ್ಯಾಲಯಗಳು: 33.120
- ಡೀಮ್ಸ್ ವಿಶ್ವವಿದ್ಯಾಲಯಗಳು: 2,280
- ಸರ್ಕಾರಿ ಕಾಲೇಜುಗಳು (ಹೆಚ್ಚಿನ ಶುಲ್ಕದೊಂದಿಗೆ): 395
ವಿಶೇಷವೆಂದರೆ ಬೆಂಗಳೂರಿನ ಬಿಎಂಎಸ್ ಕಾಲೇಜು 120 ಕಂಪ್ಯೂಟರ್ ಇಂಜಿನಿಯರಿಂಗ್ ಸೀಟುಗಳು, ನ್ಯೂ ಹಾರಿಜನ್ ಕಾಲೇಜು 240 ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಹಾಗೂ 660 ಕಂಪ್ಯೂಟರ್ ಸೀಟುಗಳಿಗೆ ಅನುಮತಿ ಕೇಳಿದ್ದವು. ಆದರೆ, ಈ ಕಾಲೇಜುಗಳು ಸೀಟ್ ಬ್ಲಾಕಿಂಗ್ ಪ್ರಕರಣದಲ್ಲಿರುವುದರಿಂದ ಇವುಗಳಿಗೆ ಸರ್ಕಾರ ಅನುಮತಿ ನೀಡಿಲ್ಲ.
ಕಳೆದ ವರ್ಷ 32,379 ಸೀಟುಗಳು ಖಾಲಿ
ಕಳೆದ ವರ್ಷ ಕಾಮೆಡ್-ಕೆ ಕೌನ್ಸೆಲಿಂಗ್ ಪ್ರಕ್ರಿಯೆ ಮುಗಿದ ಬಳಿಕ 32,379 ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಸೀಟುಗಳು ಖಾಲಿ ಉಳಿದಿದ್ದವು. 79,907 ಸರ್ಕಾರಿ ಕೋಟಾದ ಸೀಟುಗಳ ಪೈಕಿ 13,653 ಸೀಟುಗಳು ಭರ್ತಿಯಾಗದೇ ಉಳಿದಿದ್ದವು. ಕಾಮೆಡ್ ಕೆ ವಿಭಾಗದಲ್ಲಿ 18,726 ಸೀಟುಗಳು ಭರ್ತಿಯಾಗಿರಲಿಲ್ಲ. ಆದರೆ ಉತ್ತಮ ಕಾಲೇಜುಗಳಿಗೆ ಸ್ಥಾನ ಗಿಟ್ಟಿಸಲು ಭಾರೀ ಸ್ಪರ್ಧೆಯೇ ಇತ್ತು.
2025ನೇ ಸಾಲಿನ ಇಂಜಿನಿಯರಿಂಗ್ ಅಂತಿಮ ಸೀಟು ಹಂಚಿಕೆ ಪಟ್ಟಿಯನ್ನು ಬಿಡುಗಡೆಗೊಳಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, ಬಾಕಿ ಇರುವ ವೈದ್ಯಕೀಯ, ಕೃಷಿ, ಆಯುಷ್, ವೆಟರ್ನರಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್’ಗಳ ಸೀಟು ಹಂಚಿಕೆ ಪಟ್ಟಿಯನ್ನು ಕೆಇಎ ಬಿಡುಗಡೆ ಮಾಡಬೇಕಿದೆ. ರಾಜ್ಯದ 73 ವೈದ್ಯಕೀಯ ಕಾಲೇಜುಗಳಲ್ಲಿ 12,575 ಎಂಬಿಬಿಎಸ್ ಸೀಟುಗಳಿವೆ.
ಶೀಘ್ರದಲ್ಲೇ ಆಪ್ಷನ್ ಎಂಟ್ರಿ ಆರಂಭ
ಎAಜಿನಿಯರಿಂಗ್ ಅಂತಿಮ ಸೀಟ್ ಮ್ಯಾಟ್ರಿಕ್ಸ್ ಲಭ್ಯವಾಗಿರುವುದರಿಂದ ಸದ್ಯದಲ್ಲೇ ಆಪ್ಟನ್ ಎಂಟ್ರಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಸೀಟ್ ಮ್ಯಾಟ್ರಿಕ್ಸ್ ಇನ್ನೂ ಕೆಇಎ ಕೈ ಸೇರಿಲ್ಲದಿದ್ದರೂ ಸಹ ತಡ ಮಾಡದೆ ಸೀಟು ಹಂಚಿಕೆ ಪ್ರಕ್ರಿಯೆಗೆ ಚಾಲನೆ ನೀಡಲು ಕೆಇಎ ತೀರ್ಮಾನಿಸಿದೆ ಎನ್ನಲಾಗುತ್ತಿದೆ.