ಹೆಚ್ಚೂಕಮ್ಮಿ ಕಳೆದೊಂದು ವರ್ಷದಿಂದ ಒಂದು ಲಕ್ಷ ರೂಪಾಯಿ ಗಡಿ ದಾಟುವ ಹವಣಿಕೆಯಲ್ಲಿದ್ದ ಬಂಗಾರದ ಬೆಲೆ (Gold Price) ಇದೇ ಏಪ್ರಿಲ್ 30ರ ಅಕ್ಷಯ ತೃತೀಯದ (Akshaya Tritiya 2025) ಹೊತ್ತಿಗೆ ಲಕ್ಷ ರೂ. ತಲುಪುವ ನಿರೀಕ್ಷೆ ಬಲವಾಗುತ್ತಿದೆ. ಏಕೆಂದರೆ ನಿನ್ನೆ ಒಂದೇ ದಿನಕ್ಕೆ ಚಿನ್ನದ ದರ ಬರೋಬ್ಬರಿ ₹6,250 ಏರಿಕೆ ಕಂಡಿದೆ!
ಆ ಮೂಲಕ ಹಬ್ಬದ ಸಂಭ್ರಮ ಹಾಗೂ ವಿವಾಹ ಋತುವಿನಲ್ಲಿ ಚಿನ್ನ ಖರೀದಿಗೆ ಮುಂದಾಗುತ್ತಿರುವ ಗ್ರಾಹಕರಿಗೆ ಬಹುದೊಡ್ಡ ಆಘಾತ ನೀಡಿದೆ. ನಿನ್ನೆ ಏಪ್ರಿಲ್ 11ರ ಶುಕ್ರವಾರದಂದು ದೆಹಲಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ದರ ಒಂದೇ ದಿನದಲ್ಲಿ ₹6,250 ಏರಿಕೆ ಕಂಡು, 10 ಗ್ರಾಂಗೆ ₹96,450ಕ್ಕೆ ತಲುಪಿದ್ದು, ಇತ್ತೀಚಿನ ಇತಿಹಾಸದಲ್ಲೇ ಗರಿಷ್ಠ ಮಟ್ಟ ತಲುಪಿದೆ.
Personal Loans Guide- ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಟಾಪ್ ಫೈವ್ ಪರ್ಸನಲ್ ಲೋನ್ ಲಿಸ್ಟ್ ಇಲ್ಲಿದೆ…
ಬೆಲೆ ಏರಿಕೆಗೆ ಪ್ರಮುಖ ಕಾರಣಗಳು
1. ಹಬ್ಬ ಮತ್ತು ಮದುವೆ ಋತು: ಈ ಅವಧಿಯಲ್ಲಿ ಜನರು ಸಾಮಾನ್ಯವಾಗಿ ಚಿನ್ನದ ಆಭರಣಗಳನ್ನು ಖರೀದಿಸಲು ಹೆಚ್ಚು ಆಸಕ್ತರಾಗಿರುತ್ತಾರೆ. ಮದುವೆ ಸಮಾರಂಭಗಳಲ್ಲಿ ಚಿನ್ನದ ಆಭರಣಗಳು ವೈಭೋಗದ ಸಂಕೇತವಾಗಿದ್ದು; ಈ ಹಿನ್ನಲೆಯಲ್ಲಿ ಚಿನ್ನದ ಬೇಡಿಕೆ ಬಹಳಷ್ಟು ಹೆಚ್ಚಾಗಿದೆ.
2. ಜಾಗತಿಕ ಅಸ್ಥಿರತೆ ಮತ್ತು ತೆರಿಗೆ ಯುದ್ಧ: ಚೀನಾ ಮತ್ತು ಅಮೆರಿಕದ ನಡುವೆ ತೆರಿಗೆ ಯುದ್ಧ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಬಂಡವಾಳದ ಹೂಡಿಕೆದಾರರು ‘ಸುರಕ್ಷಿತ ಆಶ್ರಯ’ (Safe Haven) ಎನ್ನಲಾಗುವ ಚಿನ್ನದತ್ತ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಚಿನ್ನದ ಬೆಲೆ ಏರಿಕೆಯಾಗುತ್ತಿದೆ.
3. ಆಭರಣ ತಯಾರಕರಿಂದ ಹೆಚ್ಚಿದ ಬೇಡಿಕೆ: ಚಿನ್ನದ ದಾಸ್ತಾನು ಮಾಡುವವರು ಮತ್ತು ಆಭರಣ ತಯಾರಕರು ಮುಂದಿನ ಬೆಲೆ ಏರಿಕೆಯನ್ನು ಊಹಿಸಿ ಈಗಲೇ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಖರೀದಿ ಆರಂಭಿಸಿರುವುದು ದರ ಏರಿಕೆಗೆ ಕಾರಣವಾಗಿದೆ.
4. ಸತತ ಕುಸಿತದ ನಂತರ ಏರಿಕೆ: ಚಿನ್ನದ ದರಗಳು ಏಪ್ರಿಲ್ 09ರ ಬುಧವಾರದ ವರೆಗೆ ಸತತ ನಾಲ್ಕು ದಿನಗಳ ಕಾಲ ಕುಸಿತ ಕಂಡು ₹90,200ಕ್ಕೆ ತಲುಪಿತ್ತು. ಈ ಹಿನ್ನಲೆಯಲ್ಲಿ ಮತ್ತೆ ವೇಗವಾಗಿ ಏರಿಕೆಯಾಗಿರುವುದು ಮಾರುಕಟ್ಟೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
Low Interest Loans- ಇನ್ಮುಂದೆ ಕಡಿಮೆ ಬಡ್ಡಿಗೆ ಸಿಗುತ್ತೆ ಸಾಲ | ಮತ್ತೆ ರೆಪೋ ದರ ಇಳಿಸಿದ ಆರ್‌ಬಿಐ
ಬೆಂಗಳೂರಿನ ಚಿನ್ನ ಹಾಗೂ ಬೆಳ್ಳಿ ಧಾರಣೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಚಿನ್ನದ ದರವು ಪ್ರಭಾವಿತರಾಗಿದೆ. ಇಲ್ಲಿ 10 ಗ್ರಾಂ ಚಿನ್ನದ ದರ ₹95,400ಗೆ ತಲುಪಿದ್ದು, ಇದು ದೇಶದ ಇತರ ಪ್ರಮುಖ ಮಾರುಕಟ್ಟೆಗಳೊಂದಿಗೆ ಸಮನ್ವಯ ಹೊಂದಿದೆ. ಇತ್ತ ಬೆಳ್ಳಿಯ ದರವೂ ₹2,300 ಏರಿಕೆಯಾಗಿದ್ದು, 1 ಕೇಜಿಗೆ ₹97,100 ತಲುಪಿದೆ.
ಒಂದು ತೊಲ ಚಿನ್ನ ಲಕ್ಷ ರೂ. ತಲುಪುತ್ತಾ?
ಸತತ ಒಂದು ವರ್ಷದಿಂದ ಏರಿಳಿತ ಕಾಣುತ್ತ, 10 ಗ್ರಾಂ ಚಿನ್ನದ ಬೆಲೆಯು ಒಂದು ಲಕ್ಷ ರೂಪಾಯಿ ಹತ್ತಿರ ಹತ್ತಿರ ಬಂದು ತಟಸ್ಥವಾಗುತ್ತ ಬಂದಿದೆ. ಈಗೀನ ಬೆಲೆ ಏರಿಕೆಯ ಭರಾಟೆ ನೋಡಿದರೆ ಅಕ್ಷಯ ತೃತೀಯದ ಹೊತ್ತಿಗೆ ಒಂದು ತೊಲ (10 ಗ್ರಾಂ) ಚಿನ್ನ ಲಕ್ಷ ರೂಪಾಯಿ ಬೆಲೆ ಕಂಡರೆ ಆಶ್ಚರ್ಯವೇನಿಲ್ಲ.
ಈ ರೀತಿ ಬೆಲೆ ಏರಿಕೆಯನ್ನು ನೋಡಿದ ನಂತರ ಹೂಡಿಕೆದಾರರು ಚಿನ್ನದಲ್ಲಿ ಇನ್ನಷ್ಟು ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಚಿನ್ನದ ದರ ಮನ್ನಷ್ಟು ಏರಬಹುದು ಎಂಬ ನಿರೀಕ್ಷೆಯಿಂದ ಈಗಾಗಲೇ ಮಾರುಕಟ್ಟೆಯಲ್ಲಿ ತೀವ್ರ ಚಟುವಟಿಕೆಗಳು ಶುರುವಾಗಿವೆ.
ಮಾರುಕಟ್ಟೆ ತಜ್ಞರ ಪ್ರಕಾರ, ಜಾಗತಿಕ ಮಾರುಕಟ್ಟೆಯಲ್ಲಿ ಇದೇ ರೀತಿ ಅಸ್ಥಿರತೆ ಮುಂದುವರೆದರೆ ಹಾಗೂ ಹಬ್ಬಗಳ ಹಿನ್ನಲೆಯಲ್ಲಿ ದೇಶೀಯ ಬೇಡಿಕೆ ಕುದುರಿದರೆ ಚಿನ್ನದ ದರಗಳು ಇನ್ನಷ್ಟು ಏರಬಹುದು. ಆದರೆ, ಹೂಡಿಕೆದಾರರು ತಮ್ಮ ಬಂಡವಾಳ ಹೂಡಿಕೆಗೆ ಮುನ್ನ ಮಾರುಕಟ್ಟೆಯ ಸ್ಥಿತಿ ಹಾಗೂ ನಿರೀಕ್ಷಿತ ಧಾರಣೆಯನ್ನು ಸೂಕ್ತ ವಿಶ್ಲೇಷಣೆ ಮಾಡುವುದು ಅತ್ಯವಶ್ಯಕ.