karnataka Anganwadi Nemakati 2024 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಬರುವ ಅಂಗನವಾಡಿ ಕಾರ್ಯಕರ್ತೆಯರು (Anganwadi Workers) ಹಾಗೂ ಸಹಾಯಕಿಯರ (Anganwadi assistant) ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ( C M Siddaramaiah) ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪಿಯುಸಿ, ಎಸ್‌ಎಸ್‌ಎಲ್‌ಸಿ ಪಾಸಾದ ಮಹಿಳೆಯರಿಗೆ ಇದೊಂದು ಸುವರ್ಣಾವಕಾಶವಾಗಿದೆ.
ಡಿಸೆಂಬರ್ ಅಂತ್ಯದೊಳಗೆ ಹುದ್ದೆ ಭರ್ತಿಗೆ ಗಡುವು
ರಾಜ್ಯದ ಅನೇಕ ಗ್ರಾಮ ಹಾಗೂ ನಗರ-ಪಟ್ಟಣ ಪ್ರದೇಶಗಳಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳು ಖಾಲಿ ಇವೆ. ಇನ್ನು ಕೆಲವು ಕಡೆಗಳಲ್ಲಿ ಹೊಸ ಅಂಗನವಾಡಿಗಳು ಆರಂಭವಾಗಿದ್ದು; ಅವುಗಳಿಗೆ ಸೂಕ್ತ ಸಿಬ್ಬಂದಿ ಇಲ್ಲದೇ ಸಕ್ರೀಯವಾಗಿ ನಡೆಸಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರಕಾರ ಅಂಗನವಾಡಿ ಹುದ್ದೆಗಳ ಭರ್ತಿಗೆ ಮುಂದಾಗಿದೆ.
ನಿನ್ನೆ (ಜುಲೈ 10) ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ಸಿಇಒ ಮತ್ತು ಉಸ್ತುವಾರಿ ಕಾರ್ಯದರ್ಶಿಗಳ ಸಭೆ ನಡೆಸಿ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ ಅವರು ಇದೇ ವರ್ಷ ಡಿಸೆಂಬರ್ ಅಂತ್ಯದ ಒಳಗಾಗಿ ಎಲ್ಲಾ ಅಂಗನವಾಡಿ ಹುದ್ದೆ ಭರ್ತಿ ಪೂರ್ಣಗೊಳಿಸಬೇಕು. ಜತೆಗೆ ಅಂಗನವಾಡಿ ಸಹಾಯಕಿಯರ ಹುದ್ದೆಯ ಗೌರವಧನ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಅಂಗನವಾಡಿ ಖಾಲಿ ಹುದ್ದೆಗಳೆಷ್ಟು?
ರಾಜ್ಯಾದ್ಯಂತ ಲಕ್ಷಾಂತರ ಅಂಗನವಾಡಿ ಕೇಂದ್ರಗಳಿದ್ದು; ಬಹಳಷ್ಟು ಕೇಂದ್ರಗಳಲ್ಲಿ ಸೂಕ್ತ ಸಿಬ್ಬಂದಿ ಕೊರತೆಯಿಂದಾಗಿ ಸ್ಥಳೀಯ ಮಕ್ಕಳ ಬಾಲ್ಯ ಶಿಕ್ಷಣಕ್ಕೆ ತೊಂದರೆಯಾಗಿದೆ. ಸಿಎಂ ನೀಡಿದ ಮಾಹಿತಿಯಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಅಂಗನವಾಡಿ ಹುದ್ದೆಗಳ ವಿವರ ಈ ಕೆಳಗಿನಂತಿದೆ:
- ಅಂಗನವಾಡಿ ಕಾರ್ಯಕರ್ತೆಯರ : 4,180
- ಅಂಗನವಾಡಿ ಸಹಾಯಕಿಯರು : 9,411
- ಒಟ್ಟು ಅಂಗನವಾಡಿ ಖಾಲಿ ಹುದ್ದೆಗಳು : 13,592
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
19 ರಿಂದ 35 ವರ್ಷ ವಯೋಮಿತಿ ಒಳಗಿರುವ ಮಹಿಳೆಯರು ಹಾಗೂ ಮಹಿಳಾ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಅಂಗನವಾಡಿ ಕೇಂದ್ರಕ್ಕೆ ಒಳಪಟ್ಟ ಗ್ರಾಮ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಹಿಳಾ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ.
ದೈಹಿಕ ಅಂಗವಿಕಲತೆ ಪ್ರಮಾಣ ಶೇ.40ಕ್ಕಿಂತ ಕಡಿಮೆ ಇರುವ ಅಂಗವಿಕಲ ಅಭ್ಯರ್ಥಿಗಳು ಕೂಡ ಅಂಗನವಾಡಿ ಕಾರ್ಯಕರ್ತೆಯರು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು; ಇವರಿಗೆ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ನೀಡಲಾಗಿದೆ.
ವಿದ್ಯಾರ್ಹತೆ ಏನಿರಬೇಕು?
10ನೇ ತರಗತಿ ಅಥವಾ ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿದ ಅರ್ಹ ಮಹಿಳೆಯರು ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಎರಡೂ ಹುದ್ದೆಗಳ ವಿದ್ಯಾರ್ಹತೆ ಈ ಕೆಳಗಿನಂತಿದೆ:
- ಕಾರ್ಯಕರ್ತೆ ಹುದ್ದೆ : ಪಿಯುಸಿ ಪಾಸ್
- ಸಹಾಯಕಿ ಹುದ್ದೆ : 10ನೇ ತರಗತಿ ಪಾಸ್
ಸಂಬಳ, ಸೌಲತ್ತುಗಳೇನು?
ಪ್ರಸ್ತುತ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು 12,000 ರೂಪಾಯಿ ಹಾಗೂ ಸಹಾಯಕಿಯರಿಗೆ 8,000 ರೂಪಾಯಿ ಸಂಬಳ ನೀಡಲಾಗುತ್ತಿದೆ. ಆದರೆ, ಹಾಲಿ ಆಡಳಿತರೂಢ ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕಾರ್ಯಕರ್ತೆಯರಿಗೆ 15,000 ವೇತನ ನೀಡುವ ಭರವಸೆ ನೀಡಿತ್ತು. ಈ ಬಗ್ಗೆ ಅಂಗನವಾಡಿ ಸಿಬ್ಬಂದಿ ನಿರಂತರ ಧರಣಿ, ಹಕ್ಕೊತ್ತಾಯ ಮಾಡುತ್ತಿದ್ದು; ಸದ್ಯದಲ್ಲಿಯೇ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ.
ಇದಕ್ಕೆ ಪೂರಕವೆಂಬ೦ತೆ ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ಸಿಇಒ ಮತ್ತು ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಅಂಗನವಾಡಿ ಸಹಾಯಕಿಯರ ಹುದ್ದೆಯ ಗೌರವಧನ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ಅಂಗನವಾಡಿ ಸಿಬ್ಬಂದಿ ಮಾಸಿಕ ವೇತನ ಇನ್ನಷ್ಟು ಹೆಚ್ಚಳವಾಗಲಿದೆ ಎನ್ನಲಾಗುತ್ತಿದೆ.
ಇದರ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆಯನ್ನು ಗುರುತಿಸಿರುವ ರಾಜ್ಯ ಸರ್ಕಾರವು 2023-24ನೇ ಸಾಲಿನಿಂದ ಅವರಿಗೆ ಉಪಧನವನ್ನು (Gratuity) ನೀಡಲು ನಿರ್ಧರಿಸಿದೆ.
ನೇಮಕ ಪ್ರಕ್ರಿಯೆ ಹೇಗೆ?
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ನೇಮಕಕ್ಕೆ ಸರಕಾರ ಆನ್‌ಲೈನ್ ಹೊಸ ತಂತ್ರಾAಶ (ವೆಬ್‌ಸೈಟ್) ರೂಪಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸದರಿ ವೆಬ್‌ಸೈಟ್ ಲಿಂಕ್ ಬಳಸಿಕೊಂಡು ಅರ್ಹ ಮಹಿಳೆಯರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಾದ್ಯಂತ 4,180 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 9,411 ಅಂಗನವಾಡಿ ಸಹಾಯಕಿಯರು ಸೇರಿ ಒಟ್ಟು 13,592 ಅಂಗನವಾಡಿ ಖಾಲಿ ಹುದ್ದೆಗಳ ಭರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು; ಇಷ್ಟರಲ್ಲೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ನೇಮಕ ಪ್ರಕ್ರಿಯೆ ನಡೆಯಲಿದೆ. ಆಗ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಂಗನವಾಡಿ ಹುದ್ದೆಗಳ ನಿರಂತರ ಅಪ್ಡೇಟ್‌ಗಾಗಿ ಮಾಹಿತಿಮನೆ ಡಾಟ್ ಕಾಂ ಜಾಲತಾಣ ಫಾಲೋ ಮಾಡಿ….
Anganavadi job