Unauthorized BPL Ration Card- 12 ಲಕ್ಷ ಬಿಪಿಎಲ್ ಕಾರ್ಡ್ ರದ್ದತಿಗೆ ಸರ್ಕಾರದ ಸಿದ್ಧತೆ | ನೀವು ಈ ಪಟ್ಟಿಯಲ್ಲಿದ್ದೀರಾ?

ರಾಜ್ಯದಲ್ಲಿ 12 ಲಕ್ಷಕ್ಕೂ ಹೆಚ್ಚು ಅನಧಿಕೃತ ಬಿಪಿಎಲ್ ಕಾರ್ಡುಗಳು (Unauthorized BPL Ration Card) ಪತ್ತೆಯಾಗಿದ್ದು; ಈ ಎಲ್ಲಾ ಕಾರ್ಡುಗಳ ರದ್ಧತಿಗೆ ಸರ್ಕಾರ ಸಿದ್ಧತೆ ನಡೆಸಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಅಕ್ರಮಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕಠಿಣ ನಿಯಮ ರೂಪಿಸುತ್ತಿದೆ. ಅಕ್ರಮವಾಗಿ ಕಾರ್ಡು ಪಡೆದಿರುವವರನ್ನು ಪತ್ತೆ ಹಚ್ಚುತ್ತಿದ್ದು; ಇದೇ ಕಾರಣಕ್ಕೆ ವರ್ಷಗಳಿಂದ ಹೊಸ ರೇಷನ್ ಕಾರ್ಡ್ ವಿತರಣೆಯಾಗುತ್ತಿಲ್ಲ.
ಸದ್ಯ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಬರೋಬ್ಬರಿ 12 ಲಕ್ಷಕ್ಕೂ ಹೆಚ್ಚು ಅನಧಿಕೃತ ಕಾರ್ಡುಗಳು ಪತ್ತೆಯಾಗಿವೆ. ಇವರಲ್ಲಿ ಲಕ್ಷಾಧೀಶ್ವರಿದ್ದಾರೆ, ಹೊರ ರಾಜ್ಯದವರಿದ್ದಾರೆ, ಮೃತರು, ಲಕ್ಷ ಲಕ್ಷ ವಹಿವಾಟು ನಡೆಸಿದವರೆಲ್ಲ ಇರುವುದು ಶೋಚನೀಯ!
ಇದನ್ನೂ ಓದಿ: Vayubhara Kusita- ವಾಯುಭಾರ ಕುಸಿತ | ಕರ್ನಾಟದಲ್ಲಿ ವಾರಪೂರ್ತಿ ಭಾರಿ ಮಳೆ ಮುನ್ಸೂಚನೆ
ನಿಯಮ ಮೀರಿ 14 ಲಕ್ಷ ಬಿಪಿಎಲ್ ಕಾರ್ಡ್ ವಿತರಣೆ
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಪ್ರಕಾರ ಗ್ರಾಮಾಂತರ ಪ್ರದೇಶ ಹಾಗೂ ನಗರ ಪ್ರದೇಶಗಳಲ್ಲಿ ಇಂತಿಷ್ಟೇ ಮಿತಿಯಲ್ಲಿ ರೇಷನ್ ಕಾರ್ಡ್ ವಿತರಿಸಬೇಕು ಎಂಬ ನಿಯಮವಿದೆ.
ಆ ಪ್ರಕಾರ ಕರ್ನಾಟಕದ ಗ್ರಾಮಾಂತರ ಪ್ರದೇಶದಲ್ಲಿ ಶೇ.76.04 ಹಾಗೂ ನಗರ ಪ್ರದೇಶದಲ್ಲಿ ಶೇ.49.36 ಸೇರಿ ಒಟ್ಟು 3,58,87,666 ಫಲಾನುಭವಿಗಳಿಗೆ 1,03,70,669 ಬಿಪಿಎಲ್ ಕಾರ್ಡುಗಳನ್ನು ಮಾತ್ರ ವಿತರಣೆ ಮಾಡಬೇಕು.
ಆದರೆ, ಸದ್ಯ ರಾಜ್ಯದಲ್ಲಿ 3,93,29,981 ಜನ ಪಡಿತರ ಚೀಟಿ ಹೊಂದಿದ್ದು; ಈ ಪೈಕಿ 1,16,51,209 ಜನಕ್ಕೆ ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ. ಅಂದರೆ, NFSA ನಿಯಮ ಮೀರಿ ಭರ್ತಿ 14 ಲಕ್ಷದಷ್ಟು ಬಿಪಿಎಲ್ ರೇಷನ್ ಕಾರ್ಡ್ ವಿತರಿಸಲಾಗಿದೆ.

ಯಾರೆಲ್ಲ ಅಕ್ರಮವಾಗಿ ಕಾರ್ಡ್ ಪಡೆದಿದ್ದಾರೆ?
- ಪಡಿತರ ಚೀಟಿ ಪಡೆಯಲು ವಾರ್ಷಿಕ ವರಮಾನ 1.20 ಲಕ್ಷ ರೂ. ನಿಗದಿಪಡಿಸಲಾಗಿದೆ. ಆದರೆ, ಈ ನಿಗದಿತ ಆದಾಯ ಮಿತಿ ಮೀರಿದ 5,13,613 ಜನ ಹಸಿರು ಕಾರ್ಡ್ ಹೊಂದಿದ್ದಾರೆ.
- ಏಳೂವರೆ ಎಕರೆಗಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿರುವ 33,456 ಜನ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ.
- ರೇಷನ್ ಕಾರ್ಡ್ ಪಡೆಯಲು ಮೂಲತಃ ಕರ್ನಾಟಕ ರಾಜ್ಯದ ನಿವಾಸಿಗಳು ಮಾತ್ರ ಅರ್ಹರಾಗಿದ್ದು; ಇಲ್ಲಿ 57,864 ಅಂತಾರಾಜ್ಯದವರು ಪಡಿತರ ಚೀಟಿ ಪಡೆದುಕೊಂಡಿದ್ದಾರೆ.
- ಇನ್ನೂ ನಾಚಿಕೆಗೇಡಿನ ಸಂಗತಿ ಎಂದರೆ, ವಾರ್ಷಿಕ 25 ಲಕ್ಷ ರೂ. ವಹಿವಾಟು ನಡೆಸಿರುವ 2,684 ಜನ ಲಕ್ಷಾಧೀಶ್ವರರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ.
- ಕಂಪನಿಗಳಲ್ಲಿ ನಿರ್ದೇಶಕರಾಗಿ ಲಕ್ಷ ಲಕ್ಷ ಆದಾಯ ಹೊಂದಿರುವ 19,690 ಮಹಾನುಭಾವರು ಕೂಡ ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದಾರೆ.
- ಫಲಾನುಭವಿ ಮರಣ ಹೊಂದಿದ ನಂತರ ಅಂತಹ ಫಲಾನುಭವಿಯ ಕಾರ್ಡು ರದ್ಧತಿ ಆಗಬೇಕು. ಆದರೆ ರಾಜ್ಯದಲ್ಲಿ ಇನ್ನೂ 1,446 ಜನ ಮೃತರ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ಇದೆ.
ಇದಲ್ಲದೇ ಕಾರು ಹೊಂದಿರುವ, ಆದಾಯ ತೆರಿಗೆ ಪಾವತಿಸುವ, ಅನುದಾನಿತ / ಅನುದಾನರಹಿತ ಶಾಲಾ-ಕಾಲೇಜು ನೌಕರರು, ನೋಂದಾಯಿತ ಗುತ್ತಿಗೆದಾರರು, ಬಹುರಾಷ್ಟ್ರೀಯ ಕಂಪನಿ ಮತ್ತು ಕೈಗಾರಿಕೆಗಳಲ್ಲಿ ಉದ್ಯೋಗದಲ್ಲಿರುವವರು ಹಾಗೂ ಸ್ವಂತಕ್ಕಾಗಿ ಒಂದು ಆಟೊರಿಕ್ಷಾ ಹೊರತುಪಡಿಸಿ 100 ಸಿಸಿ ಮೇಲ್ಪಟ್ಟ ಇಂಧನ ಚಾಲಿತ ವಾಹನ ಇರುವವರು ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡೆದಿದ್ದಾರೆ.
ಅನರ್ಹರು ಪತ್ತೆಯಾಗಿದ್ದು ಹೇಗೆ?
ಅನರ್ಹರು ಸುಳ್ಳು ದಾಖಲೆ ನೀಡಿ ಪಡೆದ ರೇಷನ್ ಕಾರ್ಡ್ ಪತ್ತೆ ಮಾಡಲು ಆಹಾರ ಇಲಾಖೆಯು ಪಡಿತರ ಚೀಟಿಗೆ ಆಧಾರ್ ದೃಢೀಕರಣ (ಇ-ಕೆವೈಸಿ) ಜೋಡಣೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ಹಂತದಲ್ಲಿಯೇ ಅನೇಕ ಅನರ್ಹರರನ್ನು ಪತ್ತೆ ಮಾಡಲಾಗಿದೆ.
ಬ್ಯಾಂಕ್ ಸಾಲ ಪಡೆಯುವಾಗ, ಆದಾಯ ಪ್ರಮಾಣ ಪತ್ರ ಪಡೆಯುವಾಗ ರೇಷನ್ ಕಾರ್ಡಿನಲ್ಲಿ ಹೊಸ ಹೆಸರು ಸೇರ್ಪಡೆ ಮಾಡುವಾಗ, ಕುಟುಂಬದ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿದ್ದಾಗ ದಾಖಲಿಸಿದ ‘ವರಮಾನ/ಆದಾಯ’ದ ಆಧಾರದಲ್ಲಿ ಅನರ್ಹರನ್ನು ಪತ್ತೆ ಮಾಡಲಾಗಿದೆ.
ಹೀಗೆ ಅನಧಿಕೃತವಾಗಿ, ನಿಯಮಬಾಹಿರವಾಗಿ ಕಾರ್ಡ್ ಪಡೆದ 12 ಲಕ್ಷಕ್ಕೂ ಹೆಚ್ಚು ಪಡಿತರ ಚೀಟಿಗಳು ಪತ್ತೆಯಾಗಿವೆ. ಶೀಘ್ರದಲ್ಲಿಯೇ ಸರ್ಕಾರ ಈ ಎಲ್ಲಾ ಕಾರ್ಡುಗಳನ್ನು ರದ್ದು ಮಾಡಲಿದ್ದು; ಕೆಲವರಿಗೆ ದಂಡ/ಶಿಕ್ಷೆ ವಿಧಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.