ಕಳೆದ ನಾಲ್ಕು ವರ್ಷಗಳಿಂದ ಒಂದಿಲ್ಲೊಂದು ನೆಪ ಮುಂದಿಟ್ಟುಕೊಂಡು ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಚುನಾವಣೆಯನ್ನು (Karnataka ZP-TP Election) ಮುಂದೂಡುತ್ತ ಬಂದಿದ್ದ ರಾಜ್ಯ ಸರ್ಕಾರ ಕಡೆಗೂ ಜಿಪಂ, ತಾಪಂ ಚುನಾವಣೆ ನಡೆಸಲು ಮುಹೂರ್ತ ಫಿಕ್ಸ್ ಮಾಡಿದೆ…
ಹೌದು, ನಿಯಮದ ಪ್ರಕಾರ ಕಳೆದ 2021ರಲ್ಲೇ ನಡೆಯಬೇಕಿದ್ದ ಜಿಪಂ ಹಾಗೂ ತಾಪಂ ಚುನಾವಣೆ ಭರ್ತಿ ನಾಲ್ಕು ವರ್ಷ ಕಳೆದರೂ ಎಲೆಕ್ಷನ್ ನಡೆದಿಲ್ಲ. ಈ ಹಿನ್ನಲೆಯಲ್ಲಿ ಈಗಾಗಲೇ ರಾಜ್ಯ ಸರ್ಕಾರದ ವಿರುದ್ಧ ಎರಡು ನ್ಯಾಯಾಂಗ ನಿಂದನೆ ಅರ್ಜಿಗಳು ದಾಖಲಾಗಿವೆ.
ಇದೀಗ ಮತ್ತೊಂದು ನ್ಯಾಯಾಂಗ ನಿಂದನೆ ಅರ್ಜಿ ದಾಖಲಾಗುವ ಭಯ ರಾಜ್ಯ ಸರ್ಕಾರಕ್ಕಿದೆ. ಹೀಗಾಗಿ ಶತಾಯ ಗತಾಯ ಈ ವರ್ಷ ಚುನಾವಣೆ ನಡೆಸಲೇ ಬೇಕು ಎಂಬ ತೀರ್ಮಾನ ಕೈಗೊಂಡಿದ್ದು ಸಿಎಂ ಸಿದ್ದರಾಮಯ್ಯ ತಮ್ಮ ಸಚಿವರು ಮತ್ತು ಶಾಸಕರಿಗೆ ಮಹತ್ವದ ಸೂಚನೆ ನೀಡಿದ್ದಾರೆ.
Bank Holiday- ಆಗಸ್ಟ್ 13ರಿಂದ 17ರ ವರೆಗೆ ಸಾಲು ಸಾಲು ಬ್ಯಾಂಕ್ ರಜಾ | ಆರ್‌ಬಿಐ ಘೋಷಿಸಿದ ರಜಾ ಪಟ್ಟಿ ಇಲ್ಲಿದೆ…
ಸಿಎಂ ಮಹತ್ವದ ಸೂಚನೆ
ಮೊನ್ನ ಆಗಸ್ಟ್ 12ರಂದು ಅಧಿವೇಶನ ಮುಕ್ತಾಯದ ಬಳಿಕ ರಾತ್ರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ (ಸಿಎಲ್‌ಪಿ) ಸಿಎಂ ಸಿದ್ದರಾಮಯ್ಯ ಅವರು ತಾಪಂ ಮತ್ತು ಜಿಪಂ ಚುನಾವಣೆ ಕುರಿತು ಪ್ರಸ್ತಾಪಿಸಿದ್ದಾರೆ.
ಎಲೆಕ್ಷನ್ ವಿಚಾರವಾಗಿ ಕೋರ್ಟ್ ನಿರಂತರ ಮೇಲ್ವಿಚಾರಣೆ ನಡೆಸುತ್ತಿದ್ದು, ಮುಂದೂಡಿಕೊಂಡು ಹೋಗಲು ಸಾಧ್ಯವಿಲ್ಲ. ಉಸ್ತುವಾರಿ ಸಚಿವರು ಹಾಗೂ ಶಾಸಕರು ಸಭೆ ನಡೆಸಿ ಈಗಿನಿಂದಲೇ ಸಿದ್ಧತೆ ಆರಂಭಿಸಿ ಎಂದು ಸೂಚಿಸಿದ್ದಾರೆ.

ಜಿಪಂ, ತಾಪಂ ಚುನಾವಣೆ ಯಾವಾಗ?
ಇದೇ ವರ್ಷ ಡಿಸೆಂಬರ್ ಕೊನೆಯಲ್ಲಿ ಅಥವಾ 2026ರ ಜನವರಿಯಲ್ಲಿ ಜಿ.ಪಂ ಹಾಗೂ ತಾ.ಪಂ ಚುನಾವಣೆ ನಡೆಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಲ್‌ಪಿ ಸಭೆಯಲ್ಲಿ ಹೇಳಿದ್ದಾರೆ.
ಈ ಮೂಲಕ ರಾಜ್ಯಾದ್ಯಂತ ಮುಂದಿನ ನಾಲ್ಕು ತಿಂಗಳಲ್ಲಿ ಗ್ರಾಮೀಣ ರಾಜಕೀಯ ರಂಗು ಪಡೆಯಲಿದ್ದು; ನೆನೆಗುದಿಗೆ ಬಿದ್ದಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆ ಕಣ ರಂಗೇರಲಿದೆ.
2 ತಿಂಗಳಲ್ಲಿ ಮೀಸಲು ನಿಗದಿ ಪ್ರಕ್ರಿಯೆ ಪೂರ್ಣ
ಇದಕ್ಕೆ ಪೂರಕವಾಗಿ ಜಿಪಂ, ತಾಪಂ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಅದಾದ ನಂತರ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಮಂಡಿಸಿದ ಸೂಚನೆಗೆ ಉತ್ತರಿಸಿದ ಸಚಿವ ಖರ್ಗೆ, ಕ್ಷೇತ್ರ ಮರುವಿಂಗಡಣೆ ಕಾರ್ಯ ಪೂರ್ಣಗೊಂಡಿದೆ. ಮೀಸಲಾತಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಎರಡು ತಿಂಗಳಲ್ಲಿ ಮುಗಿಯುತ್ತದೆ. ನಂತರ ಚುನಾವಣೆ ನಡೆಸಲಾಗುತ್ತದೆ.
ಗ್ರಾಪಂ, ತಾಪಂ ಹಾಗೂ ಜಿಪಂಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಉಭಯ ಸದನಗಳ ಸದಸ್ಯರು ಸೇರಿ ಸಂಬಂಧಿಸಿದ ಎಲ್ಲಾ ವಲಯಗಳ ಜನರ ಅಭಿಪ್ರಾಯ ಸಂಗ್ರಹಿಸಲು ಸಮಿತಿ ರಚಿಸಲಾಗುವುದು ಎಂದು ತಿಳಿಸಿದ್ದಾರೆ.