ಬಿಪಿಎಲ್ ಕಾರ್ಡ್ ರದ್ದತಿ (BPL to APL) ಕುರಿತು ರಾಜ್ಯದಲ್ಲಿ ಮತ್ತೆ ಚರ್ಚೆ ಶುರುವಾಗಿದೆ. ಈ ಬಗ್ಗೆ ನಿನ್ನೆ (ಆಗಸ್ಟ್ 11) ಆಹಾರ ಸಚಿವ ಎಚ್ ಕೆ ಮುನಿಯಪ್ಪ ಅವರು ವಿಧಾನಪರಿಷತ್‌ನಲ್ಲಿ ಸರ್ವಸದಸ್ಯರ ಒಪ್ಪಿಗೆ ಕೋರಿದ್ದಾರೆ.
ಹೌದು, ಕಾಂಗ್ರೆಸ್ ಸದಸ್ಯ ಎಂ.ನಾಗರಾಜು ಅವರ ಪ್ರಶ್ನೆಗೆ ಉತ್ತರಿಸಿರುವ ಆಹಾರ ಸಚಿವರು ರಾಜ್ಯದಲ್ಲಿ 15 ಲಕ್ಷ ಅನರ್ಹ ಬಿಪಿಎಲ್ ಕಾರ್ಡುದಾರರಿದ್ದಾರೆ. ಇವರೆಲ್ಲರನ್ನು ಎಪಿಎಲ್ ಕಾರ್ಡಿಗೆ ಸೇರ್ಪಡೆ ಮಾಡುವ ಉದ್ದೇಶವಿದೆ. ಎಲ್ಲಾ ಶಾಸಕರು ಒಮ್ಮತ ಸೂಚಿಸಿದರೆ ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಾಗುವುದು ಎಂದಿದ್ದಾರೆ.
ಈ ಹಿಂದೆ ಬಿಪಿಎಲ್ ಕಾರ್ಡಿನಲ್ಲಿದ್ದ ಫಲಾನುಭವಿಗಳನ್ನು ಎಪಿಎಲ್ ವರ್ಗಾವಣೆ ಮಾಡಲು ಇಲಾಖೆ ಮುಂದಾದಾಗ ದೊಡ್ಡ ವಿವಾದವೇ ಸೃಷ್ಟಿಯಾಗಿತ್ತು. ಸದನದ ಸದಸ್ಯರೆಲ್ಲರೂ ಒಪ್ಪಿಗೆಯನ್ನು ಸೂಚಿಸಿದರೆ ಫಲಾನುಭವಿಗಳನ್ನು ಬಿಪಿಎಲ್ ನಿಂದ ಎಪಿಎಲ್ ಕಾರ್ಡಿಗೆ ವರ್ಗಾವಣೆ ಮಾಡಲಾಗುವುದು ಎಂದಿದ್ದಾರೆ.
ರಾಜ್ಯದಲ್ಲೇ ಅತೀ ಹೆಚ್ಚು ಬಿಪಿಎಲ್ ಫಲಾನುಭವಿಗಳು
ಅನರ್ಹ ಬಿಪಿಎಲ್ ಕಾರ್ಡುದಾರರನ್ನು ರದ್ದುಗೊಳಿಸಲು ಸರ್ಕಾರ ಸಿದ್ಧವಿದೆ. ಆದರೆ, ಈ ಬಗ್ಗೆ ಕೆಲವು ಸಮಸ್ಯೆಗಳಿವೆ. ಅರ್ಹ ಫಲಾನುಭವಿಗಳನ್ನೂ ತೆಗೆದು ಹಾಕುತ್ತಾರೆ ಎಂದು ಕೆಲವರು ಅಪಪ್ರಚಾರ ಮಾಡುತ್ತಾರೆ. ಇದಕ್ಕೆ ಸದನ ಸದಸ್ಯರು ಅವಕಾಶ ನೀಡದೇ ಒಪ್ಪಿಗೆ ಸೂಚಿಸಿದರೆ ಅನರ್ಹರನ್ನು ತೆಗೆದು ಹಾಕಲಾಗುವುದು ಎಂದು ವಿವರಿಸಿದ್ದಾರೆ.
ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಬಿಪಿಎಲ್ ಫಲಾನುಭವಿಗಳಿದ್ದಾರೆ. ತಮಿಳುನಾಡು ಶೇ.50, ಕೇರಳ ಶೇ.45, ತೆಲಂಗಾಣ ಶೇ.50, ಆಂಧ್ರಪ್ರದೇಶ ಶೇ.50ರಷ್ಟು ಬಿಪಿಎಲ್ ಕಾರ್ಡುದಾರರು ಇದ್ದರೆ, ನಮ್ಮಲ್ಲಿ ಮಾತ್ರ ಶೇ.70 ರಿಂದ 75ರಷ್ಟು ಬಿಪಿಎಲ್ ಫಲಾನುಭವಿಗಳು ಇದ್ದಾರೆ.

ಅನರ್ಹತಾ ಮಾನದಂಡಗಳು
ಬಿಪಿಎಲ್ ಕಾರ್ಡು ಪಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಿದೆ. ಸರ್ಕಾರದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆ, ನಿಗಮ, ಮಂಡಳಿಗಳಲ್ಲಿ ಕೆಲಸ ಮಾಡುವವರು, ತೆರಿಗೆ ಪಾವತಿದಾರರನ್ನು ಸೌಲಭ್ಯದಿಂದ ಹೊರಗೆ ಉಳಿಸಬೇಕು.
ಗ್ರಾಮೀಣ ಪ್ರದೇಶದಲ್ಲಿ ಮೂರು ಹೆಕ್ಟೇರ್ ಒಣಭೂಮಿ ಅಥವಾ ನೀರಾವರಿ ಭೂಮಿ ಹೊಂದಿರುವ ಕುಟುಂಬ, ನಗರ ಪ್ರದೇಶದಲ್ಲಿ 1000 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಪಕ್ಕಾ ಮನೆ ಹೊಂದಿದ್ದರೆ ಅಂಥವರು ಕಾರ್ಡ್ ವಾಪಸ್ ಕೊಡಬೇಕಾಗುತ್ತದೆ.
ಟ್ರ‍್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಸೇರಿ ಜೀವನೋಪಾಯದ ವಾಹನಗಳನ್ನು ಹೊರತುಪಡಿಸಿ ಎಲ್ಲ ತರಹದ ನಾಲ್ಕೂ ಚಕ್ರದ ವಾಹನಗಳು ಇದ್ದರೂ ಅಂತಹ ಕುಟುಂಬಕ್ಕೆ ಎಪಿಎಲ್ ನೀಡಲಾಗುತ್ತದೆ.
Dairy Farming Subsidy- ಹಸು-ಎಮ್ಮೆ ಖರೀದಿಗೆ ₹1.25 ಲಕ್ಷ ಸಹಾಯಧನ | ರಾಜ್ಯ ಸರ್ಕಾರದಿಂದ ಅರ್ಜಿ ಆಹ್ವಾನ
ಹೊಸ ಕಾರ್ಡ್ ಅರ್ಜಿ ಸಲ್ಲಿಕೆ ಯಾವಾಗ?
ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡುದಾರರ ಸಂಖ್ಯೆ ಗಣನೀಯವಾಗಿ ಇರುವುದರಿಂದ ಹೊಸ ಪಡಿತರ ಚೀಟಿ ನೀಡಲು ಸಾಧ್ಯವಾಗುತ್ತಿಲ್ಲ. ಇದು ದೊಡ್ಡ ಸಮಸ್ಯೆಯಾಗಿದ್ದು; ರಾಜ್ಯಾದ್ಯಂತ ಸಾವಿರಾರು ಸಂಖ್ಯೆ ಅರ್ಹ ಫಲಾನುಭವಿಗಳು ಹೊಸ ಅರ್ಜಿ ಪ್ರಕ್ರಿಯೆಗಾಗಿ ವರ್ಷಗಳಿಂದ ಕಾದು ಕುಳಿತಿದ್ದಾರೆ.
ಆದರೆ, ಅನರ್ಹರ ದೆಸೆಯಿಂದ ಅರ್ಹರಿಗೂ ಕೂಡ ಬಿಪಿಎಲ್ ಕಾರ್ಡು ನೀಡಲಾಗುತ್ತಿಲ್ಲ. ರಾಜ್ಯದಲ್ಲಿ ಗುರುತಿಸಲಾಗಿರುವ 15 ಲಕ್ಷ ಅನರ್ಹರರ ಬಿಪಿಎಲ್ ಕಾರ್ಡ್ ರದ್ದತಿ ಅಥವಾ ಎಪಿಎಲ್’ಗೆ ವರ್ಗಾಯಿಸಿದರೆ ಹೊಸ ಬಿಪಿಎಲ್ ಕಾರ್ಡ್ ವಿತರಣೆಗೆ ದಾರಿ ಸುಗಮವಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.