ಎಸ್ಬಿಐ ಬ್ಯಾಂಕಿನಲ್ಲಿ ಬರೋಬ್ಬರಿ 6,589 ಜೂನಿಯರ್ ಅಸೋಸಿಯೇಟ್ಸ್ ಹುದ್ದೆಗಳಿಗೆ (SBI Junior Associates Recruitment 2025) ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ದೇಶದ ಪ್ರತಿಷ್ಠಿತ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (State Bank of India) ಭಾರೀ ಪ್ರಮಾಣದಲ್ಲಿ ನೇಮಕಾತಿ ನಡೆಯುತ್ತಿದೆ. ಜೂನಿಯರ್ ಅಸೋಸಿಯೇಟ್ಸ್ (ಕಸ್ಟಮರ್ ಸಪೋರ್ಟ್ ಆ್ಯಂಡ್ ಸೇಲ್ಸ್) ಭರ್ತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ದೇಶಾದ್ಯಂತ ಒಟ್ಟು 6,589 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಇವುಗಳಲ್ಲಿ 1,409 ಬ್ಯಾಕ್ ಲಾಗ್ ಸ್ಥಾನಗಳು ಸೇರಿವೆ.
ಕನ್ನಡಬಲ್ಲವರಿಗಾಗಿ ರಾಜ್ಯದಲ್ಲಿ ಒಟ್ಟು 468 ಸ್ಥಾನಗಳಿದ್ದು, ಇದರಲ್ಲಿ 11 ಬ್ಯಾಕ್ಲಾಗ್ ಹುದ್ದೆಗಳು ಪರಿಶಿಷ್ಟರಿಗೆ, ಅಂಗವಿಕಲರಿಗೆ 20 ಹಾಗೂ 198 ಬ್ಯಾಕ್ ಲಾಗ್ ಹುದ್ದೆಗಳು ಮಾಜಿ ಸೈನಿಕರಿಗೆ ಮೀಸಲಾಗಿವೆ. ಒಟ್ಟಾರೆ ಮಾಜಿ ಸೈನಿಕರಿಗಾಗಿ 810 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಪ್ರದೇಶದ ಭಾಷಾ ಪ್ರಾವೀಣ್ಯತೆ ಹೊಂದಿರುವುದು ಕಡ್ಡಾಯವಾಗಿದ್ದು, ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದ್ದು; ಕನ್ನಡದಲ್ಲೂ ಪರೀಕ್ಷೆ ಬರೆಯಬಹುದಾಗಿದೆ.
ವಯೋಮಿತಿ ವಿವರ
ಏಪ್ರಿಲ್ 1ಕ್ಕೆ ಅನ್ವಯವಾಗುವಂತೆ ಕನಿಷ್ಠ 20 ಹಾಗೂ ಗರಿಷ್ಠ 28 ವರ್ಷದವರಾಗಿರಬೇಕು. ಒಬಿಸಿಗೆ 3 ವರ್ಷ, ಎಸ್ಸಿ/ಎಸ್ಟಿ-5, ಅಂಗವಿಕಲರಿಗೆ ಗರಿಷ್ಠ 15 ವರ್ಷಗಳ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ಶೈಕ್ಷಣಿಕ ಅರ್ಹತೆ
ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಸೋಸಿಯೇಟ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವೀಧರರಾಗಿರಬೇಕು. ಅಂತಿಮ ಸೆಮಿಸ್ಟರ್/ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ ಡಿಸೆಂಬರ್ 31ರೊಳಗಾಗಿ ಉತ್ತೀರ್ಣರಾಗಿರಬೇಕು.

ಆಯ್ಕೆ ಪ್ರಕ್ರಿಯೆ ಹೇಗೆ?
ಕಂಪ್ಯೂಟರ್ ಆಧಾರಿತ ಆನ್ಲೈನ್ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಪೂರ್ವಭಾವಿ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆ ನಡೆಸಲಾಗುತ್ತದೆ. ಇದರೊಂದಿಗೆ ಸ್ಥಳೀಯ ಭಾಷಾ ಜ್ಞಾನ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಕನ್ನಡದಲ್ಲೂ ಪರೀಕ್ಷೆ ಬರೆಯಬಹುದಾಗಿದೆ.
ಪರೀಕ್ಷಾ ಕೇಂದ್ರಗಳು
ರಾಜ್ಯದಲ್ಲಿ ಬೆಂಗಳೂರು, ದಾವಣಗೆರೆ, ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿಗಲಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ.
ಆಯ್ದ ಅಭ್ಯರ್ಥಿಗಳಿಗೆ ತರಬೇತಿ
ಎಸ್ಸಿ/ಎಸ್ಟಿ, ಒಬಿಸಿ/ ಮಾಜಿ ಸೈನಿಕರು ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಬ್ಯಾಂಕ್ ಮೂಲಕ ಆನ್ಲೈನ್’ನಲ್ಲಿ ಪರೀಕ್ಷಾ ಪೂರ್ವ ತರಬೇತಿ ಆಯೋಜಿಸಲಾಗುತ್ತದೆ. ಇದಕ್ಕಾಗಿ ಆನ್ಲೈನ್ ಅರ್ಜಿಯಲ್ಲಿ ಇಚ್ಛೆ ವ್ಯಕ್ತಪಡಿಸಿರಬೇಕು.
ವೇತನ ಶ್ರೇಣಿ
ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಸೋಸಿಯೇಟ್ಸ್ ಹುದ್ದೆಗಳಿಗೆ ನೇಮಕವಾಗುವ ಅಭ್ಯರ್ಥಿಗಳಿಗೆ 24,050 ರಿಂದ 64,480 ರೂ. ವೇತನ ಶ್ರೇಣಿ ನೀಡಲಾಗುತ್ತದೆ. ಮುಂಬೈನಂತಹ ಮಹಾನಗರಗಳಲ್ಲಿ ಆರಂಭಿಕ ವೇತನವು ಡಿಎ ಹಾಗೂ ಇತರ ಭತ್ಯೆಗಳನ್ನು ಒಳಗೊಂಡು 46,000 ರೂ. ವರೆಗೆ ಇರಲಿದೆ. ಇತರ ಭತ್ಯೆಗಳಿಗೂ ಅನ್ವಯವಾಗುತ್ತವೆ.
ಅರ್ಜಿ ಶುಲ್ಕವೆಷ್ಟು?
ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ. ಈ ವರ್ಗದ ಅಭ್ಯರ್ಥಿಗಳು ಸಂಪೂರ್ಣ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಇನ್ನುಳಿದ ವರ್ಗಗಳ ಅಭ್ಯರ್ಥಿಗಳು 750 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು
ಅಭ್ಯರ್ಥಿಗಳು ಒಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬೇಕು. ಅಲ್ಲಿನ ಹುದ್ದೆಗಳಿಗಷ್ಟೇ ಅರ್ಜಿ ಪರಿಗಣಿಸಲಾಗುತ್ತದೆ. ದೇಶದ ಯಾವುದೇ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಬಹುದು. ಆದರೆ, ಭಾಷಾ ಪರೀಕ್ಷೆಗೆ ಬ್ಯಾಂಕ್ ಸೂಚಿಸಿದ ಸ್ಥಳದಿಂದಲೇ ಹಾಜರಾಗಬೇಕು.
ಮೆರಿಟ್ ಪಟ್ಟಿಯನ್ನು ರಾಜ್ಯವಾರು, ವರ್ಗವಾರು ತಯಾರಿಸಲಾಗುತ್ತದೆ. ಅಭ್ಯರ್ಥಿಗಳಿಗೆ ಆರು ತಿಂಗಳ ಪ್ರೊಬೇಷನರಿ ಅವಧಿ ಇರಲಿದೆ. ಈ ವೇಳೆ ಬ್ಯಾಂಕ್ ನೀಡುವ ಇ-ಪಾಠಗಳನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ನಿರೀಕ್ಷಣಾ ಅವಧಿ ಮುಂದುವರಿಯಲಿದೆ.
ಅರ್ಜಿ ಸಲ್ಲಿಕೆ ಆರಂಭ ದಿನ: 06-08-2025
ಅರ್ಜಿ ಸಲ್ಲಿಕೆ ಕೊನೇ ದಿನ: 26-08-2025