ರಾಜ್ಯ ಸರ್ಕಾರ ‘ಭೂ ಸುರಕ್ಷಾ’ ಯೋಜನೆಗೆ (Bhu Suraksha Yojana) ಅಧಿಕೃತ ಚಾಲನೆ ನೀಡಿದ್ದು; ಇನ್ಮುಂದೆ ರೈತರು ಜಮೀನಿನ ಎಲ್ಲಾ ದಾಖಲೆಗಳನ್ನು ಮೊಬೈಲ್‌ನಲ್ಲೇ ಪಡೆಯಬಹುದು. ಈ ಕುರಿತ ಮಾಹಿತಿ ಇಲ್ಲಿದೆ…
ರೈತರು ತಮ್ಮ ಜಮೀನಿನ ಹಳೆಯ ಮೂಲ ದಾಖಲೆಗಳನ್ನು ಪಡೆಯಲು ಇನ್ನು ಮುಂದೆ ತಹಶೀಲ್ದಾರ್ ಕಚೇರಿ ಅಲೆದಾಡಬೇಕಾಗಿಲ್ಲ. ಕಂದಾಯ ಇಲಾಖೆ ಪ್ರಾರಂಭಿಸಿರುವ ಹೊಸ ‘ಭೂ ಸುರಕ್ಷಾ ಯೋಜನೆ’ (Bhu Suraksha Yojana) ಮೂಲಕ, ರೈತರು ಕೇವಲ ತಮ್ಮ ಮೊಬೈಲ್ ಅಥವಾ ನಾಡಕಚೇರಿಯ ಕಂಪ್ಯೂಟರ್‌ನಲ್ಲಿಯೇ ಈ ದಾಖಲೆಗಳನ್ನು ಸುಲಭವಾಗಿ ಪಡೆಯಬಹುದು.
ಹೌದು, ‘ಭೂ ಸುರಕ್ಷಾ’ ಯೋಜನೆಯು ಡಿಜಿಟಲೀಕರಣದ ಪ್ರಮುಖ ಹೆಜ್ಜೆಯಾಗಿದೆ. ನಿನ್ನೆ ಆಗಸ್ಟ್ 5ರಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಡಳಿತ ಕಚೇರಿಯಲ್ಲಿರುವ ರೆಕಾರ್ಡ್ ರೂಮ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ‘ಭೂ ಸುರಕ್ಷಾ’ ಯೋಜನೆಗೆ ಅಧಿಕೃತ ಚಾಲನೆ ನೀಡಿದ್ದಾರೆ.
Karnataka Rain Alert- ರಾಜ್ಯದ 15 ಜಿಲ್ಲೆಗಳಲ್ಲಿ ಬಿರುಸಿನ ಮಳೆ | ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ
ಏನಿದು ಭೂ ಸುರಕ್ಷಾ ಯೋಜನೆ?
‘ಭೂ ಸುರಕ್ಷಾ’ ಯೋಜನೆಯು ರೈತರು ತಮ್ಮ ಮೂಲ ಹಕ್ಕು ದಾಖಲೆಗಳು, ಹಿಂದಿನ ನಖಲು ದಾಖಲೆಗಳು ಇತ್ಯಾದಿಗಳನ್ನು ಡಿಜಿಟಲ್ ರೂಪದಲ್ಲಿ ಪಡೆಯಲು ಅವಕಾಶ ಕಲ್ಪಿಸುವ ಡಿಜಿಟಲ್ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಹಳೆಯ ದಾಖಲೆಗಳಿಗಾಗಿ ಕಚೇರಿಗಳಿಗೆ ಅಲೆದು ಸಮಯ ಹಾಗೂ ಹಣ ಖರ್ಚನ್ನು ತಪ್ಪಿಸಬಹುದು.
ಇಲ್ಲಿಯವರೆಗೆ ರೈತರು ತಮ್ಮ ಜಮೀನಿನ ಮೂಲ ದಾಖಲೆಗಳನ್ನು ಪಡೆಯಲು ತಹಶೀಲ್ದಾರ್ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಿ, ಅಲೆದಾಡಿ ದಾಖಲೆಗಳನ್ನು ಪಡೆದುಕೊಳ್ಳಬೇಕಾಗಿತ್ತು. ಆದರೆ, ಈಗ ಈ ವಿಧಾನಕ್ಕೆ ಬ್ರೇಕ್ ಬೀಳಲಿದ್ದು ರೈತರೇ ಸ್ವಂತ ಮೊಬೈಲ್ ಅಥವಾ ನಾಡಕಚೇರಿಯಲ್ಲಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಶೀಘ್ರವಾಗಿ ಜಮೀನಿನ ಮೂಲ ದಾಖಲೆಗಳನ್ನು ಪಡೆಯಬಹುದು.

ಮೊಬೈಲ್‌ನಲ್ಲೇ ಜಮೀನು ದಾಖಲೆ ಪಡೆಯುವ ವಿಧಾನ
ಇದಕ್ಕಾಗಿ ಕಂದಾಯ ಇಲಾಖೆಯ ‘ಭೂ ಸುರಕ್ಷಾ’ ಯೋಜನೆಯ ಜಾಲತಾಣದ ಮುಖಾಂತರ ನೀವು ಈ ಸೇವೆಯನ್ನು ಪಡೆಯಬಹುದಾಗಿದೆ. ಅಥವಾ ನಾವು ಕೆಳಗೆ ನೀಡಿರುವ ಲಿಂಕ್ ಬಳಸಿ ದಾಖಲೆಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಲಿಂಕ್ ಕ್ಲಿಕ್ ಮಾಡಿದರೆ ‘ಭೂ ಸುರಕ್ಷಾ – ಕಂದಾಯ ದಾಖಲೆಗಳ ಗ್ರಂಥಾಲಯ / Bhu Suraksha – Revenue Documents Library’ ವೆಬ್ ಪೋರ್ಟ್ಲ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿ, ‘OTP ರಚಿಸಿ’ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಗೆ ಬಂದ OTP ಅನ್ನು ಹಾಕಿ ಲಾಗಿನ್ ಆಗಿ.
ಪ್ರೊಫೈಲ್ ಮಾಹಿತಿ (ಹೆಸರು, ವಿಳಾಸ, ಇಮೇಲ್ ಐಡಿ) ನಮೂದಿಸಿ, “ಉಳಿಸಿ” ಕ್ಲಿಕ್ ಮಾಡಿ. ‘ಕಡತ ವಿನಂತಿ ನಮೂದಿಸಿ’ ವಿಭಾಗದಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಫೈಲ್ ನಂಬರ್, ರಿಜಿಸ್ಟರ್ ಡೀಟೇಲ್ ಹಾಗೂ ಸರ್ವೆ ನಂಬರ್ ನಮೂದಿಸಿ ‘ದಾಖಲೆ ಹುಡುಕಿ’ ಆಯ್ಕೆ ಮಾಡಿ.
ಆಗ ನಿಮಗೆ ಬೇಕಾದ ದಾಖಲೆ ಸ್ಕ್ರೀನ್ ಮೇಲೆ ಲಭ್ಯವಾಗುತ್ತದೆ. ಅದಕ್ಕೆ ನಿಗದಿತ ಶುಲ್ಕ ಪಾವತಿ ಮಾಡಿ. ಪಾವತಿ ನಂತರ, ನಿಮ್ಮ ಇಮೇಲ್ ಅಥವಾ ಖಾತೆಯಲ್ಲಿ ಡಿಜಿಟಲ್ ದಾಖಲೆ ಡೌನ್‌ಲೋಡ್ ಮಾಡಬಹುದು.
ನಾಡ ಕಚೇರಿಯಲ್ಲೂ ದಾಖಲೆಗಳು ಸಿಗಲಿದೆ…
ಕಂದಾಯ ಇಲಾಖೆ ಸ್ಪಷ್ಟಪಡಿಸಿರುವಂತೆ, ಈ ಯೋಜನೆ ಆರಂಭದ ಹಂತದಲ್ಲಿದೆ. ಆದ್ದರಿಂದ ಎಲ್ಲಾ ಗ್ರಾಮಗಳ ಹಾಗೂ ಎಲ್ಲಾ ದಾಖಲೆಗಳು ಇನ್ನೂ ಆನ್‌ಲೈನ್‌ನಲ್ಲಿ ಲಭ್ಯವಿಲ್ಲ.
ಹೀಗಾಗಿ ನಿಮ್ಮ ಗ್ರಾಮ ಅಥವಾ ಸರ್ವೆ ನಂಬರ್ ಆನ್‌ಲೈನ್‌ನಲ್ಲಿ ಸಿಗದಿದ್ದರೆ, ಆತಂಕ ಬೇಡ. ನೀವು ನಿಮ್ಮ ಹೋಬಳಿಯ ನಾಡ ಕಚೇರಿಗೆ ತೆರಳಿ, ಅಲ್ಲಿನ ಸಿಬ್ಬಂದಿಗಳ ನೆರವಿನಿಂದ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.
ರೈತರ ಕಷ್ಟಗಳಿಗೆ ಪರಿಹಾರ
ಕಂದಾಯ ಸಚಿವರು ತಿಳಿಸಿದಂತೆ, ರಾಜ್ಯಾದ್ಯಂತ 100 ಕೋಟಿ ಅಧಿಕ ಭೂ ದಾಖಲೆಗಳಿವೆ. ಇವುಗಳಲ್ಲಿ ಈಗಾಗಲೇ 35.36 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. 35 ಕೋಟಿ ಪುಟಗಳ ಸ್ಕ್ಯಾನಿಂಗ್ ಇನ್ನೂ ಬಾಕಿ ಇದೆ. ಈ ಕೆಲಸ ತಹಸೀಲ್ದಾರ್ ಕಚೇರಿಗಷ್ಟೇ ಸೀಮಿತವಾಗದೆ ಎಸಿ ಮತ್ತು ಡಿಸಿ ಕಚೇರಿಯಲ್ಲಿರುವ ದಾಖಲೆಗಳನ್ನೂ ಸ್ಕ್ಯಾನ್ ಮಾಡಲು ನಿರ್ಧರಿಸಲಾಗಿದೆ.
ಭೂ ಸುರಕ್ಷಾ ಯೋಜನೆಯು ರೈತರ ದಿನನಿತ್ಯದ ಕಷ್ಟಗಳಿಗೆ ಪರಿಹಾರ ನೀಡುವ ನೂತನ ಹೆಜ್ಜೆಯಾಗಿದ್ದು, ಡಿಜಿಟಲ್ ಭಾರತದ ಕನಸಿಗೆ ಬಲ ನೀಡಿದೆ. ರೈತರು ತಾವೇ ತಮ್ಮ ಜಮೀನಿನ ದಾಖಲೆ ಪಡೆಯಬಹುದಾದ ಈ ವ್ಯವಸ್ಥೆ, ಪಾರದರ್ಶಕತೆ, ನಂಬಿಕೆ ಮತ್ತು ವೇಗದ ಸೇವೆಯನ್ನು ಒದಗಿಸುತ್ತದೆ. ರೈತರು ಈ ಸೇವೆಯ ಉಯೋಗ ಪಡೆದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ತಮ್ಮ ಹೋಬಳಿಯ ನಾಡಕಚೇರಿಯನ್ನು ಸಂಪರ್ಕಿಸಬಹುದು.
ಭೂ ಸುರಕ್ಷಾ ಅರ್ಜಿ ಲಿಂಕ್: Click Here