Gruhalakshmi Women Loan Scheme- ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ 5 ಲಕ್ಷ ರೂ.ವರೆಗೆ ಶೂರಿಟಿ ಇಲ್ಲದ ಸಾಲ ಸೌಲಭ್ಯ | ಸರ್ಕಾರದ ಹೊಸ ಯೋಜನೆ ಆರಂಭ

ರಾಜ್ಯ ಸರ್ಕಾರ ‘ಗೃಹಲಕ್ಷ್ಮಿ’ ಯೋಜನೆಯ ಫಲಾನುಭವಿ ಮಹಿಳೆಯರಿಗೆ ಮತ್ತೊಂದು ಶುಭಸುದ್ದಿ ನೀಡಿದೆ. ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರಿಗೆ ಸಾಲ ಸೌಲಭ್ಯ (Gruhalakshmi Women Loan Scheme) ಕಲ್ಪಿಸಲಿದ್ದು; ಈ ಕುರಿತ ಮಾಹಿತಿ ಇಲ್ಲಿದೆ…
ಕರ್ನಾಟಕ ರಾಜ್ಯದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರಿಗೆ ಹೊಸದೊಂದು ಆರ್ಥಿಕ ಅವಕಾಶ ದೊರೆಯಲಿದೆ. ಇನ್ನು ಮುಂದೆ ಅವರು ಕೇವಲ 2 ಸಾವಿರ ರೂಪಾಯಿ ಮಾಸಿಕ ಸಹಾಯಧನ ಪಡೆಯುವವರಷ್ಟೇ ಅಲ್ಲ, ಶೂರಿಟಿ ಇಲ್ಲದ ಸಾಲ ಪಡೆದು, ಉದ್ಯಮ ಆರಂಭಿಸಬಹುದಾಗಿದೆ.
ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆ ಯಜಮಾನಿಗೆ ಮಾಸಿಕ ₹2,000ರ ನಗದು ಸಹಾಯಧನ ನೀಡಲಾಗುತ್ತಿದೆ. ಈ ಹಣವನ್ನು ಮಹಿಳೆಯರು ಕೇವಲ ಖರ್ಚಿಗೆ ಬಳಸದೇ, ಒಟ್ಟುಗೂಡಿಸಿ ಹೂಡಿಕೆ ಮಾಡುವ ಮೂಲಕ ತಮ್ಮ ಬದುಕು ರೂಪಿಸಿಕೊಳ್ಳಲು ‘ಗೃಹಲಕ್ಷ್ಮಿ ಸಂಘ’ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರೂಪಿಸುತ್ತಿದೆ.
‘ಗೃಹಲಕ್ಷ್ಮಿ ಸಂಘ’ಗಳ ರಚನೆ ಹೇಗೆ?
ಪ್ರತಿ ‘ಗೃಹಲಕ್ಷ್ಮಿ ಸಂಘ’ದಲ್ಲಿ ಕನಿಷ್ಟ 4ರಿಂದ ಗರಿಷ್ಠ 10 ಮಹಿಳೆಯರು ಸದಸ್ಯರಾಗಿ ಸೇರುತ್ತಾರೆ. ಈ ಸದಸ್ಯೆಯರು ತಮಗೆ ಪ್ರತಿ ತಿಂಗಳು ಬರುವ ₹2,000 ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಾರೆ.
ಸಂಘದ ಒಟ್ಟು ಹೂಡಿಕೆಯನ್ನು ಆಧಾರವನ್ನಾಗಿ ಮಾಡಿಕೊಂಡು ಬ್ಯಾಂಕ್ ಅಥವಾ ಸಾಲ ಸಂಸ್ಥೆಗಳಿAದ ₹3 ರಿಂದ ₹5 ಲಕ್ಷದ ವರೆಗೆ ಸಾಲ ಸಿಗುತ್ತದೆ.ಉದಾಹರಣೆಗೆ, 10 ಮಂದಿ ಸದಸ್ಯರ ಒಂದು ಸಂಘ ವಾರ್ಷಿಕ ₹2.4 ಲಕ್ಷ ಹಣವನ್ನು ಜಮೆ ಮಾಡಬಹುದು. ಇದರ ಆಧಾರದಿಂದಲೇ ಬ್ಯಾಂಕ್ ತಂಡಕ್ಕೆ 5 ಲಕ್ಷ ರೂ.ವರೆಗೆ ಸಾಲ ನೀಡಲಿದೆ.
ಶೂರಿಟಿ ಇಲ್ಲದೇ ಸಿಗುತ್ತೆ ಸಾಲ
ಈ ಯೋಜನೆಯ ಮಹತ್ವಪೂರ್ಣ ಅಂಶವೇನೆಂದರೆ ಸಾಲ ಪಡೆಯಲು ಯಾವುದೇ ಶೂರಿಟಿ (ಗ್ಯಾರೆಂಟಿ) ಅಥವಾ ದಾಖಲೆಗಳ ಅಗತ್ಯವಿಲ್ಲ. ನಬಾರ್ಡ್, ಗ್ರಾಮೀಣ ವಿಕಾಸ ಬ್ಯಾಂಕ್, ಕರ್ನಾಟಕ ಅಪ್ಪೆಕ್ಸ್ ಬ್ಯಾಂಕ್ ಮುಂತಾದ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಸರ್ಕಾರ ಸಿದ್ಧತೆ ಮಾಡುತ್ತಿದೆ.
ಯಾವುದಕ್ಕೆಲ್ಲ ಸಾಲ ಸಿಗಲಿದೆ?
ಈ ಸಾಲ ಪಡೆದು ಸಂಘದ ಸದಸ್ಯರು ತಮ್ಮ ಆಸಕ್ತಿಗೆ ಅನುಗುಣವಾಗಿ ಹಲವಾರು ಸ್ವ-ಉದ್ಯಮ ಆರಂಭಿಸಬಹುದಾಗಿದೆ. ಕೃಷಿ ಯಂತ್ರೋಪಕರಣಗಳಾದ ಟ್ರ‍್ಯಾಕ್ಟರ್, ನಾಟಿ ಯಂತ್ರ, ಒಕ್ಕಣೆ ಯಂತ್ರ ಖರೀದಿಸಿ ಬಾಡಿಗೆಗೆ ಕೊಡುವ ಮೂಲಕ ಆದಾಯ ಗಳಿಸಬಹುದು.
ಹೋಟೆಲ್ ಅಥವಾ ಟೀ ಸ್ಟಾಲ್, ಅಡುಗೆ ಪದಾರ್ಥ, ಹ್ಯಾಂಡಿಕ್ರಾಫ್ಟ್ ಉತ್ಪಾದನೆ, ದಿನಸಿ, ಹಣ್ಣು ತರಕಾರಿ, ಆಹಾರದ ಅಂಗಡಿ ಸ್ಥಾಪನೆ ಮಾಡಿ ಮಹಿಳೆಯರು ಹಣ ಸಂಪಾದನೆ ಮಾಡಬಹುದು.

ಯೋಜನೆ ಯಾವಾಗಿನಿಂದ ಪ್ರಾರಂಭ?
ಅಕ್ಟೋಬರ್ 2025ರಲ್ಲಿ ಪ್ರಾಯೋಗಿಕ ಹಂತವಾಗಿ ಆಯ್ದ ಜಿಲ್ಲೆಗಳಲ್ಲಿ ‘ಗೃಹಲಕ್ಷ್ಮಿ ಸಂಘ’ ಯೋಜನೆ ಜಾರಿಗೆ ಬರಲಿದೆ. ನಂತರ, ರಾಜ್ಯದ ಎಲ್ಲಾ ಜಿಲ್ಲೆಗಳ ಗ್ರಾಮ/ನಗರ ಪ್ರದೇಶಗಳಲ್ಲಿ ಈ ಯೋಜನೆ ವಿಸ್ತರಿಸಲಾಗುವುದು.
ಈ ಮೂಲಕ, ರಾಜ್ಯದ 1.24 ಕೋಟಿ ಫಲಾನುಭವಿಗಳಲ್ಲಿ ಸಾವಿರಾರು ಮಹಿಳೆಯರು ಸ್ವ-ಉದ್ಯೋಗಿ ಯಜಮಾನಿಯರಾಗಿ ಪರಿವರ್ತನೆಗೊಳ್ಳುವ ನಿರೀಕ್ಷೆ ಇದೆ. ಈ ಯೋಜನೆ ಮೂಲಕ ಸರ್ಕಾರ ಮಹಿಳೆಯರಿಗೆ ಉದ್ಯಮದ ಕನಸು ಸಾಕಾರಗೊಳಿಸುವ ಶಕ್ತಿ ನೀಡಲಿದೆ.
ಮಹಿಳಾ ಇಲಾಖೆ ಸುವರ್ಣ ಸಂಭ್ರಮ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ವರ್ಷ 50ನೇ ವರ್ಷದ ಸುವರ್ಣ ಸಂಭ್ರಮ ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ 1975ರಲ್ಲಿ ಆರಂಭವಾದ ಅಂಗನವಾಡಿ ಕೇಂದ್ರಗಳೂ 50 ವರ್ಷ ಪೂರೈಸುತ್ತಿವೆ. ಈ ಸ್ಮರಣಾರ್ಥವಾಗಿ ಮಹಿಳೆಯರ ಬದುಕಿನಲ್ಲಿ ಪ್ರಬಲ ಬದಲಾವಣೆ ತರುವಂತೆ ಈ ಯೋಜನೆ ರೂಪಿಸಲಾಗಿದೆ.
ಈ ಯೋಜನೆಯ ಕುರಿತು ಇನ್ನಷ್ಟು ಮಾಹಿತಿಗಾಗಿ ನೀವು ಸ್ಥಳೀಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ಗೃಹಲಕ್ಷ್ಮಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು.
New Ration Card Applications- ಹೊಸ ರೇಷನ್ ಕಾರ್ಡ್ ಅರ್ಜಿ | ಜಿಲ್ಲಾವಾರು ಅರ್ಜಿದಾರರ ಮಾಹಿತಿ ಇಲ್ಲಿದೆ…