ಕಡೆಗೂ ಕೆಇಎ ಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆಗೆ ಮುಂದಾಗಿದೆ. ಇದೇ ಜುಲೈ 2ನೇ ವಾರದಿಂದ ಸೀಟು ಹಂಚಿಕೆ ಕೌನ್ಸೆಲಿಂಗ್ (Karnataka CET Counselling) ನಡೆಲಿದ್ದು; ಈ ಕುರಿತು ಕೆಇಎ ನೀಡಿದ ಸ್ಪಷ್ಟ ಮಾಹಿತಿ ಇಲ್ಲಿದೆ…
ರಾಜ್ಯದಲ್ಲಿನ ಸಾವಿರಾರು ವಿದ್ಯಾರ್ಥಿಗಳು ಉತ್ಸುಕತೆಯಿಂದ ಕಾಯುತ್ತಿದ್ದ ಸಿಇಟಿ (ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ) ಅಧಾರಿತ ಸೀಟು ಹಂಚಿಕೆ ಪ್ರಕ್ರಿಯೆ ಜುಲೈ ಎರಡನೇ ವಾರದಿಂದ ಆರಂಭವಾಗಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದೆ.
ವೈದ್ಯಕೀಯ, ದಂತ ವೈದ್ಯಕೀಯ ಮತ್ತು ನರ್ಸಿಂಗ್ ಕೋರ್ಸ್’ಗಳಿಗೆ ಇನ್ನೂ ಕೇಂದ್ರದ NMC (ರಾಷ್ಟ್ರೀಯ ವೈದ್ಯಕೀಯ ಆಯೋಗ) ಮಾನ್ಯತೆ ವಿವರಗಳು ಬಾಕಿ ಇರುವ ಕಾರಣ, ಅವುಗಳ ಸೀಟು ಹಂಚಿಕೆ ತಾತ್ಕಾಲಿಕವಾಗಿ ತಡೆಹಿಡಿದಿರುವ ಕೆಇಎ, ಇತರ ಎಲ್ಲ ಕೋರ್ಸ್ಗಳಿಗಾಗಿ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಿದೆ.
ಮೆಡಿಕಲ್ ಸೀಟುಗಳಿಗೆ ಲೇಟಾಗಿ ಸೀಟು ಮ್ಯಾಟ್ರಿಕ್ಸ್
ಕೆಇಎ ಅಧಿಕಾರಿಗಳು ಸ್ಪಷ್ಟಪಡಿಸಿದಂತೆ, ಈವರೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಸೀಟು ಮ್ಯಾಟ್ರಿಕ್ಸ್ ನೀಡಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿನ ಕೆಲವು ಹೊಸ ವೈದ್ಯಕೀಯ ಕಾಲೇಜುಗಳಿಗೆ ಅಥವಾ ಹೆಚ್ಚುವರಿ ಸೀಟುಗಳಿಗೆ NMC ಇನ್ನೂ ಅಂತಿಮ ಮಾನ್ಯತೆ ನೀಡಿಲ್ಲ. ಈ ಕಾರಣದಿಂದ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ನರ್ಸಿಂಗ್ ಸೀಟುಗಳು ಬಹುತೇಕ ತಡವಾಗಿ ಲಭ್ಯವಾಗಲಿವೆ.
ವೈದ್ಯಕೀಯ ಸೀಟುಗಳ ವಿಚಾರ ಬಾಕಿ ಇದೆ. ಅವು ಸಿಗುವವರೆಗೆ ಕಾಯದೇ, ಉಳಿದ ಎಲ್ಲ ಕೋರ್ಸ್ಗಳಿಗೆ ಜುಲೈ ಎರಡನೇ ವಾರದಲ್ಲಿ ಅಂತಿಮ ಕೌನ್ಸೆಲಿಂಗ್ ಆರಂಭಿಸಲಾಗುವುದು. ವೈದ್ಯಕೀಯ ಸೀಟುಗಳು ಬಂದ ನಂತರ ಅದಕ್ಕೆ ಪ್ರತ್ಯೇಕ ಕೌನ್ಸೆಲಿಂಗ್ ಮಾಡುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳ ಆಗ್ರಹಕ್ಕೆ ಮಣಿದ ಕೆಇಎ
ಎಐಸಿಟಿಇ (ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್) ವೇಳಾಪಟ್ಟಿ ಪ್ರಕಾರ, ಎಲ್ಲ ಹಂತದ ಪ್ರವೇಶ ಪ್ರಕ್ರಿಯೆಗಳನ್ನು ಆಗಸ್ಟ್ 14ರೊಳಗೆ ಪೂರ್ಣಗೊಳಿಸಬೇಕು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಉನ್ನತ ಶಿಕ್ಷಣ ಇಲಾಖೆ ಕೆಇಎಗೆ ಜುಲೈ ಮೊದಲ ಅರ್ಧ ಭಾಗದಲ್ಲಿ ಸೀಟು ಹಂಚಿಕೆ ಆರಂಭಿಸಲು ಒತ್ತಾಯ ಮಾಡುತ್ತಿದೆ.
ನೀಟ್ ಫಲಿತಾಂಶ (ಜೂನ್ 14) ಮತ್ತು ಸಿಇಟಿ ಫಲಿತಾಂಶ (ಮೇ 24) ಎರಡೂ ಪ್ರಕಟವಾಗಿದೆ. ವೈದ್ಯಕೀಯ ಸೀಟು ಬರುವ ತನಕ ಎಲ್ಲರನ್ನೂ ಕಾಯಿಸಬಾರದು. ನಮ್ಮ ಮಾರ್ಕ್, ಕಟ್ ಆಫ್ ಎಲ್ಲವೂ ಗೊತ್ತಿದೆ. ಉಳಿದ ಕೋರ್ಸ್ಗಳಿಗೆ ತಕ್ಷಣ ಕೌನ್ಸೆಲಿಂಗ್ ಮಾಡಿ ಸೀಟು ಕೊಡಿ ಎಂದು ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ.
ಇದೆ ವಿಚಾರದ ಹಿನ್ನೆಲೆಯಲ್ಲಿ ಇದೀಗ ಕೆಇಎ ತಾತ್ಕಾಲಿಕವಾಗಿ ವೈದ್ಯಕೀಯ ಸೀಟುಗಳನ್ನು ಬಿಟ್ಟು ಇತರ ಎಲ್ಲ ಕೋರ್ಸ್ಗಳಿಗೆ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸಲು ನಿರ್ಧಾರ ಮಾಡಿದೆ.
ಒಟ್ಟಾರೆ ಲಭ್ಯವಿರುವ ಸೀಟುಗಳು (ಕೆಇಎ ಲೆಕ್ಕಾಚಾರ)
ಕೆಇಎಗೆ ಇತ್ತೀಚೆಗೆ ಲಭ್ಯವಿರುವ ಸೀಟುಗಳ ವಿವರ ನೀಡಿದ್ದು; ಅವುಗಳ ಲೆಕ್ಕಾಚಾರ ಹೀಗಿದೆ:
- ಎಂಜಿನಿಯರಿAಗ್: 215 ಕಾಲೇಜುಗಳಲ್ಲಿ 64,047 ಸೀಟುಗಳು
- ಫಾರ್ಮಾ ಸೈನ್ಸ್: 47 ಕಾಲೇಜುಗಳಲ್ಲಿ 3,350 ಸೀಟುಗಳು
- ಫಿಸಿಯೋಥೆರಪಿ: 119 ಕಾಲೇಜುಗಳಲ್ಲಿ 1,241 ಸೀಟುಗಳು
- ಡಿಪ್ಲೋಮಾ ಸಿಇಟಿ: 223 ಕಾಲೇಜುಗಳಲ್ಲಿ 12,331 ಸೀಟುಗಳು
- ಒಟ್ಟು: 604 ಕಾಲೇಜುಗಳು, 80,969 ಸೀಟುಗಳು
ಇವೆಲ್ಲಾ ಸೀಟುಗಳು ಈಗಾಗಲೇ ಸೀಟ್ ಮ್ಯಾಟ್ರಿಕ್ಸ್ ರೂಪದಲ್ಲಿ ಲಭ್ಯವಾಗಿರುವುದರಿಂದ ಜುಲೈ ಎರಡನೇ ವಾರದಲ್ಲಿ ಇವುಗಳಿಗಾಗಿ ಕೌನ್ಸೆಲಿಂಗ್ ನಡೆಯಲಿದೆ.
ಮೆಡಿಕಲ್ ಸೀಟುಗಳಿಗೆ ಪ್ರತ್ಯೇಕ ಕೌನ್ಸೆಲಿಂಗ್
ರಾಜ್ಯದ ಸುಮಾರು ಶೇ.30 ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್’ಗಳ ಆಸೆ ಹೊಂದಿದ್ದಾರೆ. ಇವರಿಗಾಗಿ ಉಳಿದ ಶೇ.70ರಷ್ಟು ವಿದ್ಯಾರ್ಥಿಗಳನ್ನು ಕಾಯಿಸುವುದರಲ್ಲಿ ಅರ್ಥವಿಲ್ಲ ಎಂಬ ವಿವೇಕಪೂರ್ಣ ತೀರ್ಮಾನವನ್ನು ಕೆಇಎ ತೆಗೆದುಕೊಂಡಿದೆ.
ಕೆಇಎ ತನ್ನ ಕೌನ್ಸೆಲಿಂಗ್ ಪ್ರಕ್ರಿಯೆ ಮುಗಿದ ನಂತರ ಖಾಸಗಿ ಸಂಸ್ಥೆಗಳ ಸಮಿತಿಯಾದ ‘ಕಾಮೆಡ್-ಕೆ’ ತನ್ನ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸಲು ಅವಕಾಶವಿದೆ. ಆದರೆ, ಒಂದೇ ಸಮಯದಲ್ಲಿ ಕಾರ್ಯವಿಧಾನ ವಿಳಂಬವಾದರೆ ‘ಕಾಮೆಡ್-ಕೆ’ ಕೂಡ ತಮ್ಮ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಆರಂಭಿಸಲು ಮುನ್ನೆಚ್ಚರಿಕೆ ಕೈಗೊಂಡಿದೆ.
ಈ ನಿರ್ಧಾರದಿಂದಾಗಿ ಎಂಜಿನಿಯರಿಂಗ್, ಫಾರ್ಮಾ, ಫಿಸಿಯೋಥೆರಪಿ ಮತ್ತು ಡಿಪ್ಲೋಮಾ ಕೋರ್ಸ್ಗಳಿಗೆ ಆಸಕ್ತಿ ಹೊಂದಿರುವ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಪ್ರವೇಶವನ್ನು ತ್ವರಿತವಾಗಿ ಖಚಿತಪಡಿಸಿಕೊಳ್ಳುವ ಅವಕಾಶ ಪಡೆಯಲಿದ್ದಾರೆ. ವೈದ್ಯಕೀಯ ಆಸೆಪಟ್ಟು ಕಾಯುತ್ತಿರುವವರಿಗೆ ಆ ಸೀಟು ವಿವರ ಲಭ್ಯವಾದ ತಕ್ಷಣ ಪ್ರತ್ಯೇಕ ಪ್ರವೇಶ ಪ್ರಕ್ರಿಯೆ ನಡೆಯಲಿದೆ ಎಂಬ ಭರವಸೆ ಇದೆ.