Aadhaar RTC Linking : ರಾಜ್ಯ ಸರಕಾರ ‘ನನ್ನ ಆಧಾರ್‌ನೊಂದಿಗೆ ನನ್ನ ಆಸ್ತಿ ಸುಭದ್ರ’ ಯೋಜನೆ ಆರಂಭಿಸಿದ್ದು, ಇದೇ ಜೂನ್ ಅಥವಾ ಜುಲೈ ವೇಳೆಗೆ ರಾಜ್ಯಾದ್ಯಂತ ರೈತರ ಪಹಣಿ (ಉತಾರ-RTC) ಮತ್ತು ಆಧಾರ್ ಜೋಡಣೆ ಕಾರ್ಯ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಹೀಗಾಗಿ ಗ್ರಾಮ ಆಡಳಿತಾಧಿಕಾರಿಗಳಿಗೆ (Village Administrator) ಪಹಣಿ ಮತ್ತು ಆಧಾರ್ ಲಿಂಕ್ ಮಾಡಿಸಲು ಟಾರ್ಗೆಟ್ ನೀಡಲಾಗಿದ್ದು; ಪ್ರತಿ ಗ್ರಾಮ ಆಡಳಿತಾಧಿಕಾರಿಗೆ ವಾರಕ್ಕೆ 250 ರೈತರ ನೋಂದಣಿ ಗುರಿ ನಿಗದಿಪಡಿಸಲಾಗಿದೆ.
ರೈತರ ಮನೆ ಮನೆಗಳಿಗೆ ಭೇಟಿ ನೀಡುತ್ತಿರುವ ಗ್ರಾಮ ಆಡಳಿತಾಧಿಕಾರಿಗಳು ಪಹಣಿ-ಆಧಾರ್ ಜೋಡಣೆ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ರೈತರ ಆಧಾರ್ ಮತ್ತು ಭಾವಚಿತ್ರವನ್ನು ಮೊಬೈಲ್‌ನಲ್ಲೇ ತೆಗೆದುಕೊಳ್ಳುತ್ತಾರೆ. ಗ್ರಾಮ ಆಡಳಿತಾಧಿಕಾರಿಗಳ ಕೈಗೆ ಸಿಗದ ರೈತರು ಮನೆಯವರ ಮೂಲಕ ಮಾಹಿತಿ ಪಡೆದು ಗ್ರಾಮ ಪಂಚಾಯಿತಿಗೆ ಬಂದು ಮಾಹಿತಿ ಕೊಡುತ್ತಿದ್ದಾರೆ. ಬೇರೆ ಊರುಗಳಲ್ಲಿ ವಾಸ ಇರುವವರಿಗೆ ಗ್ರಾಮ ಆಡಳಿತಾಧಿಕಾರಿಗಳೇ ಫೋನ್ ಮಾಡಿ ತಿಳಿಸುತ್ತಿದ್ದಾರೆ.
ಪಹಣಿ – ಆಧಾರ್ ಜೋಡಣೆಯಿಂದ ಉಪಯೋಗವೇನು?
ಜಮೀನು ಪಹಣಿ ಮತ್ತು ಆಧಾರ್ ಜೋಡಣೆಯಿಂದ ರಾಜ್ಯದಲ್ಲಿ ರೈತರ ನಿಖರವಾದ ಮಾಹಿತಿ ದಾಖಲಾಗುತ್ತದೆ. ಎರಡು ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿರುವ ಸಣ್ಣ ಮತ್ತು ಅತೀ ಸಣ್ಣ ರೈತರು ಎಷ್ಟು ಮಂದಿಯಿದ್ದಾರೆ? ಅದರಲ್ಲಿ ಸರಕಾರದ ಸೌಲಭ್ಯ ಪಡೆಯಲು ಅರ್ಹತೆಯುಳ್ಳವರೆಷ್ಟು? ಎಂಬ ಪಕ್ಕಾ ಮಾಹಿತಿಯನ್ನು ಸಂಗ್ರಹಿಸಲು ಇದು ನೆರವಾಗುತ್ತದೆ.
ಜತೆಗೆ ಒಬ್ಬ ರೈತ ಬೇರೆ ಬೇರೆ ಸರ್ವೆ ನಂಬರ್‌ಗಳಲ್ಲಿ ಭೂಮಿ ಹೊಂದಿದ್ದರೆ ಆಧಾರ್ ಜೋಡಣೆಯಿಂದ ಎಲ್ಲ ಮಾಹಿತಿಯೂ ಒಂದೇ ಗುಂಪಿನಲ್ಲಿ ಸಿಗಲಿದೆ. ರೈತರ ಆಧಾರ್ ಸಂಖ್ಯೆ ಹಾಗೂ ರೈತರ ಲೈವ್ ಫೋಟೋ ಜೋಡಣೆ ಆಗುವುದರಿಂದ ಜಮೀನು ಸುರಕ್ಷಿತವಾಗಿರುತ್ತದೆ. ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಸುವುದು ತಪ್ಪುತ್ತದೆ. ಇದರಿಂದ ಅಮಾಯಕ ರೈತರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ.
ಆಧಾರ್-ಪಹಣಿ ಜೋಡಣೆ ಹೇಗೆ?
ರೈತರ ಆಧಾರ್ ಹಾಗೂ ಜಮೀನು ಪಹಣಿ ಜೋಡಣೆ ಸಮಯದಲ್ಲಿ ರೈತರ ಖುದ್ದು (ಲೈವ್) ಫೋಟೋ ಬೇಕಾಗುತ್ತದೆ. ಅಂದರೆ ಸ್ಥಳದಲ್ಲಿಯೇ ರೈತರ ಫೋಟೋ ಸಂಗ್ರಹಿಸಲಾಗುತ್ತದೆ. ಒಂದು ವೇಳೆ ಸಂಬ೦ಧಿಸಿದ ರೈತ ನಿಧನರಾಗಿದ್ದರೆ ಆ ಮಾಹಿತಿ ಸಂಗ್ರಹಿಸುವುದಿಲ್ಲ. ಅಂತಹ ಪಹಣಿ-ಆಧಾರ್ ಜೋಡಣೆ ಸಾಧ್ಯವಾಗುವುದಿಲ್ಲ.
ಇನ್ನು ಪಹಣಿಯಲ್ಲಿ ನಮೂದಾಗಿರುವ ಭೂಮಿ ಅಪ್ಪಟ ಕೃಷಿ ಉದ್ದೇಶಕ್ಕೆ ಮಾತ್ರ ಬಳಕೆಯಾಗುತ್ತಿರಬೇಕು. ಕೃಷಿಯೇತರ ಉದ್ದೇಶಕ್ಕೆ ಬಳಕೆಯಾಗುತ್ತಿದ್ದರೆ ಅದನ್ನು ಪರಿಗಣಿಸುವುದಿಲ್ಲ. ಒಂದೇ ಸರ್ವೆ ನಂಬರ್‌ನ ಜಮೀನು ಅಣ್ಣ-ತಮ್ಮಂದಿಯರಿಗೆ ಹಂಚಿಕೆಯಾಗಿದ್ದು; ಜಂಟಿ ಖಾತೆ ಹೊಂದಿದ್ದರೆ ಎಷ್ಟು ಜನರು ವಾರಸುದಾರರಿರುವರೋ ಅಷ್ಟೂ ಜನ ಖುದ್ದು ಬಂದು ಲೈವ್ ಫೋಟೋ ಹಾಗೂ ಆಧಾರ್ ನೀಡುವುದು ಕಡ್ಡಾಯವಾಗಿದೆ.
ತಪ್ಪದೇ ಈ ಕೆಲಸ ಮಾಡಿ
ಆಧಾರ್-ಪಹಣಿ ಜೋಡಣೆ ಸಂದರ್ಭದಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಬಹಳಷ್ಟು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ‘ಫ್ರೂಟ್’ ವಿಭಾಗದಲ್ಲಿ ಇ-ಕೆವೈಸಿ ಮಾಡಿದ್ದೇವೆ, ಈಗ ಮತ್ತೆ ಜಮೀನು ಪಹಣಿಗೆ ಇ-ಕೆವೈಸಿ (ekyc) ಏಕೆ ಎಂದು ಕೆಲವು ರೈತರು ಪ್ರಶ್ನಿಸುತ್ತಿದ್ದಾರೆ.
ಏನೇ ಇರಲಿ, ಜಮೀನು ಪಹಣಿ ಹಾಗೂ ಆಧಾರ್ ಜೋಡಣೆಯಿಂದ ರೈತರಿಗೆ ಸಾಕಷ್ಟು ಅನುಕೂಲಗಳಿವೆ. ತಾಂತ್ರಿಕ ಸಮಸ್ಯೆಯಿಂದ ಈ ಕಾರ್ಯ ವಿಳಂಬವಾಗುತ್ತಿದೆ. ಇನ್ನಾದರೂ ರೈತರು ತಮ್ಮ ಗ್ರಾಮಕ್ಕೆ ಸಂಬ೦ಧಿಸಿದ ಗ್ರಾಮ ಆಡಳಿತಾಧಿಕಾರಿ ಅವರನ್ನು ಖುದ್ದು ಭೇಟಿ ಮಾಡಿ ಪಹಣಿಗೆ ಆಧಾರ್ ಲಿಂಕ್ ಮಾಡಿಸುವುದು ಉತ್ತಮ.
ಕುರಿ-ಮೇಕೆ ಸಾಕಾಣಿಕೆಗೆ ಕುರಿ ನಿಗಮದಿಂದ ಸಿಗುವ ಸಬ್ಸಿಡಿ ಸೌಲಭ್ಯಗಳು Karnataka Sheep and Goat Board facilities
1 thought on “ರೈತರ ಮನೆ ಬಾಗಿಲಲ್ಲೇ ಪಹಣಿ-ಆಧಾರ್ ಲಿಂಕ್ | ಗ್ರಾಮ ಆಡಳಿತಾಧಿಕಾರಿಗಳಿಗೆ ಟಾರ್ಗೆಟ್ Aadhaar RTC Linking”