ಪಿಎಂ ಕಿಸಾನ್ 20ನೇ ಕಂತಿನ ₹2,000 ಹಣ(PM-Kisan 20th Installment) ಸದ್ಯದಲ್ಲೇ ರೈತರ ಖಾತೆಗೆ ಜಮಾ ಆಗಲಿದೆ. ಅದಕ್ಕೂ ಮುನ್ನ ಪ್ರಮುಖ ಐದು ಕಾರ್ಯಗಳು ಕಡ್ಡಾಯವಾಗಿವೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಡಿ 20ನೇ ಕಂತಿನ ಹಣದ ಬಗ್ಗೆ ರೈತರ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಫೆಬ್ರವರಿ 2025ರಲ್ಲಿಯೇ 19ನೇ ಕಂತಿನ ಹಣ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಈ ಲೆಕ್ಕಾಚಾರದ ಪ್ರಕಾರ 20ನೇ ಕಂತು ಜೂನ್ 2025ರ ಅಂತ್ಯದೊಳಗೆ ಬರಬೇಕಿತ್ತು. ಆದರೆ ಜೂನ್ ತಿಂಗಳು ಮುಗಿದರೂ ಹಣ ಇನ್ನೂ ರೈತರ ಖಾತೆಗೆ ಬಂದಿಲ್ಲ.
ಇದರಿಂದ ಸಾವಿರಾರು ರೈತರು ಕಾತುರದಿಂದ 20ನೇ ಕಂತಿನ ಹಣದ ಬಗ್ಗೆ ಆಲೋಚಿಸುತ್ತಿದ್ದಾರೆ. ಈ ಲೇಖನದಲ್ಲಿ 20ನೇ ಕಂತು ಯಾವಾಗ ಬರುತ್ತದೆ, ಏಕೆ ತಡವಾಗಿದೆ ಮತ್ತು ನೀವು ಈಗಲೇ ಮಾಡಬೇಕಾದ ಮುಖ್ಯ ಕೆಲಸಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.
20ನೇ ಕಂತು ಯಾವಾಗ ಬರಬಹುದು?
ಸರ್ಕಾರದ ಅಧಿಕೃತ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಕೆಲವು ಸುದ್ದಿ ಮಾಧ್ಯಮ ವರದಿಗಳ ಪ್ರಕಾರ ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ಹಣ ರೈತರ ಖಾತೆಗೆ ಬರುವ ಸಾಧ್ಯತೆ ಹೆಚ್ಚು. ಯೋಜನೆಯ ನಿಯಮ ಪ್ರಕಾರ ನಾಲ್ಕು ತಿಂಗಳಿಗೆ ಒಮ್ಮೆ ಕಂತು ಬರುತ್ತದೆ. ಆದರೆ ಈ ಬಾರಿ ವಿಳಂಬವಾಗಿದೆ. ಕೆಲ ರಾಜ್ಯಗಳಲ್ಲಿ ಇ-ಕೆವೈಸಿ ಸಮಸ್ಯೆಗಳು ಮತ್ತು ರೈತರ ಡೇಟಾ ಪರಿಶೀಲನೆ ಸರಿಯಾಗಿ ಆಗಿಲ್ಲ.
ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಂದ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸಿಕೊಳ್ಳುತ್ತಿದೆ. ಬ್ಯಾಂಕ್ ಡೀಟೈಲ್, ಆಧಾರ್ ಪ್ರಮಾಣೀಕರಣದಲ್ಲಿ ದೋಷ ಸರಿಪಡಿಸಬೇಕಿದೆ. ಹೀಗಾಗಿ ಕೇಂದ್ರ ಸರ್ಕಾರ ಎಲ್ಲಾ ಡೇಟಾ ಪರಿಶೀಲನೆ ಮುಗಿಸಿದ ಮೇಲೆ ಮಾತ್ರ ಹಣ ಬಿಡುಗಡೆ ಮಾಡುತ್ತದೆ.

ಹಣ ಪಡೆಯಲು ಕೂಡಲೇ ಈ 5 ಕೆಲಸ ಮಾಡಿ
ನೀವು 20ನೇ ಕಂತಿನ ಹಣ ಪಡೆಯಲು ಈಗಲೇ ಈ ಕೆಳಗಿ ಐದು ಕೆಲಸಗಳನ್ನು ಮಾಡಬೇಕಿದೆ. ಯೋಜನೆಯ ಹಣ ನೇರವಾಗಿ ಖಾತೆಗೆ ಬರಲು ಈ ಕೆಲಸಗಳು ತುಂಬಾ ಮುಖ್ಯ. ಇಲ್ಲದಿದ್ದರೆ ಹಣ ತಡೆಯಲಾಗುತ್ತದೆ.
1. ಇ-ಕೆವೈಸಿ (e-KYC) ಕಡ್ಡಾಯ
ಪಿಎಂ ಕಿಸಾನ್ ಯೋಜನೆಯ ಎಲ್ಲ ಫಲಾನುಭವಿಗಳಿಗೆ ಇ-ಕೆವೈಸಿ ಮಾಡುವುದು ಕಡ್ಡಾಯ. ಕಳೆದ ಬಾರಿ ಲಕ್ಷಾಂತರ ರೈತರಿಗೆ ಇ-ಕೆವೈಸಿ ಆಗದ ಕಾರಣ ಹಣ ಸಿಕ್ಕಿರಲಿಲ್ಲ. ಇ-ಕೆವೈಸಿ ಇಲ್ಲದೆ ಹಣವನ್ನು ಬಿಡುಗಡೆ ಮಾಡುವುದಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಇ-ಕೆವೈಸಿ ಮಾಡುವ ವಿಧಾನಗಳು ಹೀಗಿವೆ:
- OTP ಆಧಾರಿತ ಇ-ಕೆವೈಸಿ: ಪಿಎಂ-ಕಿಸಾನ್ ವೆಬ್‌ಸೈಟ್‌ನಲ್ಲಿ OTP ಆಧಾರಿತ ಇ-ಕೆವೈಸಿ ಮಾಡಬಹುದು. ಆಧಾರ್ ಲಿಂಕ್ ಮತ್ತು ರಿಜಿಸ್ಟರ್ ಮಾಡಿರುವ ಮೊಬೈಲ್‌ಗೆ OTP ಬರುತ್ತದೆ. pmkisan.gov.in ನಲ್ಲಿ e-KYC ಆಯ್ಕೆ ಮಾಡಿ, ಆಧಾರ್ ಸಂಖ್ಯೆ ಹಾಕಿ, OTP ನೀಡಿ.
- ಬಯೋಮೆಟ್ರಿಕ್ ಇ-ಕೆವೈಸಿ: OTP ಬರದಿದ್ದರೆ ಹತ್ತಿರದ CSC ಕೇಂದ್ರಕ್ಕೆ ಹೋಗಿ, ಬೆರಳಚ್ಚು ನೀಡಿ ಏಙಅ ಮಾಡಿಸಬಹುದು.
- ಮುಖ ದೃಢೀಕರಣ (Face Authentication): ವೃದ್ಧ ಅಥವಾ ಅಂಗವಿಕಲ ರೈತರಿಗೆ CSC ಕೇಂದ್ರಗಳಲ್ಲಿ ಈ ಸೌಲಭ್ಯ ಇದೆ.
2. ಆಧಾರ್ ಕಾರ್ಡಿನಲ್ಲಿರುವಂತೆ ಹೆಸರು ಸರಿಪಡಿಸಿ
ಹೆಚ್ಚಿನ ರೈತರಿಗೆ ಪಿಎಂ-ಕಿಸಾನ್ ಹಣ ಸಿಗದೇ ಇರುವುದಕ್ಕೆ ಕಾರಣ ಅವರ ಹೆಸರು ಆಧಾರ್‌ನಲ್ಲಿ ಸರಿಯಾಗಿ ಹೊಂದಿಕೆಯಾಗಿಲ್ಲದಿರುವುದು. ಉದಾಹರಣೆಗೆ, ಬ್ಯಾಂಕ್‌ನಲ್ಲಿ ಹೆಸರು ಒಂದೇ ರೀತಿಯಲ್ಲಿರಬಹುದು, ಆಧಾರ್‌ನಲ್ಲಿ ಬೇರೆ ರೀತಿಯಲ್ಲಿರಬಹುದು.
ಇದನ್ನು ಸರಿಪಡಿಸಲು pmkisan.gov.in ವೆಬ್‌ಸೈಟ್’ಗೆ ಹೋಗಿ Farmer Corner > Self Registered Farmer Update ವಿಭಾಗದಲ್ಲಿ ಆಧಾರ್ ಸಂಖ್ಯೆ, ಕ್ಯಾಪ್ಚಾ ನೀಡಿ ಸರಿಯಾದ ಹೆಸರನ್ನು ನಮೂದಿಸಿ, ಸಲ್ಲಿಸಿ. ಅಥವಾ ಹತ್ತಿರದ CSC ಅಥವಾ ಕೃಷಿ ಇಲಾಖೆಯ ಕಚೇರಿಗೆ ಹೋಗಿ ಸಹಾಯ ಪಡೆಯಿರಿ.
3. ಬ್ಯಾಂಕ್ ಖಾತೆ ವಿವರ ಪರಿಶೀಲಿಸಿ
ಬಹಳ ಸಲ ಸರ್ಕಾರ ಹಣ ಬಿಡುಗಡೆ ಮಾಡಿರುತ್ತದೆ. ಆದರೆ ರೈತರ ಖಾತೆಗೆ ತಲುಪಿರುವುದಿಲ್ಲ. IFSC ಕೋಡ್ ತಪ್ಪು, ಮುಚ್ಚಿದ ಬ್ಯಾಂಕ್ ಖಾತೆ, ಆಧಾರ್ ಲಿಂಕ್ ಆಗಿಲ್ಲದ ಖಾತೆ ಸಮಸ್ಯೆಗಳು ಇದಕ್ಕೆ ಕಾರಣವಾಗಿರುತ್ತವೆ.
ಈ ಸಮಸ್ಯೆ ಪರಿಹಾರಕ್ಕೆ ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ. IFSC ಕೋಡ್ ಸರಿಯಾಗಿದೆ ಎಂದು ದೃಢಪಡಿಸಿ. ಖಾತೆ ಆಧಾರ್‌ಗೆ ಲಿಂಕ್ ಆಗಿದೆಯೇ ಚೆಕ್ ಮಾಡಿ. ಮುಚ್ಚಿದ ಖಾತೆ ಅಲ್ಲವೋ ನೋಡಿ.
4. ರೈತರ ನೋಂದಣಿ ಅಗತ್ಯ
ಪ್ರತಿ ರಾಜ್ಯ ಸರ್ಕಾರ ರೈತರ ನೋಂದಣಿಯನ್ನು ಕಡ್ಡಾಯ ಮಾಡುತ್ತಿದೆ. ನೀವು ಮೊದಲೇ ಪಿಎಂ ಕಿಸಾನ್‌ಗೆ ನೋಂದಾಯಿಸಿದ್ದರೂ ಸಹ ರಾಜ್ಯದ ಕೃಷಿ ಇಲಾಖೆ ನೋಂದಣಿ ಅಗತ್ಯವಾಗಬಹುದು. ನೋಂದಣಿಗಾಗಿ, ಪಿಎಂ ಕಿಸಾನ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಬಳಸಿ ಅಥವಾ ಹತ್ತಿರದ CSC ಕೇಂದ್ರದಲ್ಲಿ ಸಹಾಯ ಪಡೆಯಿರಿ.
5. ಮೊಬೈಲ್ ಸಂಖ್ಯೆಯನ್ನು ನವೀಕರಿಸಿ
ಹೊಸ ಮೊಬೈಲ್ ತೆಗೆದುಕೊಂಡರೆ ಅಥವಾ ಹಳೆಯ ಸಂಖ್ಯೆ ಮುಚ್ಚಿದರೆ ಸರ್ಕಾರದ ಎಚ್ಚರಿಕೆ ಸಂದೇಶಗಳು (SMS) ಬರುವುದಿಲ್ಲ. ನೀವು ಈ ಎಚ್ಚರಿಕೆಗಳನ್ನು ತಪ್ಪಿಸಿಕೊಳ್ಳಬಾರದು.
ಮೊಬೈಲ್ ನಂಬರ್ ನವೀಕರಿಸಲು ಪಿಎಂ-ಕಿಸಾನ್ ವೆಬ್‌ಸೈಟ್’ಗೆ ಹೋಗಿ ‘Update Mobile Number’ ಆಯ್ಕೆಯಲ್ಲಿ ನೋಂದಣಿ ಸಂಖ್ಯೆ ಅಥವಾ ಆಧಾರ್ ಸಂಖ್ಯೆ ನಮೂದಿಸಿ. ಹೊಸ ಸಂಖ್ಯೆಯನ್ನು ಒಟಿಪಿ ಮೂಲಕ ದೃಢೀಕರಿಸಿ. ಸಮಸ್ಯೆ ಇದ್ದರೆ CSC ಕೇಂದ್ರದಲ್ಲಿ ಸಹಾಯ ಪಡೆಯಿರಿ.
ಪ್ರಮುಖ ಸೂಚನೆಗಳು
ಇ-ಕೆವೈಸಿ ಇಲ್ಲದೆ, ಆಧಾರ್ ಹೆಸರು ತಪ್ಪಾದರೆ, ಬ್ಯಾಂಕ್ ಮಾಹಿತಿ ತಪ್ಪಾದರೆ ಅಥವಾ ನೋಂದಣಿ ಆಗದಿದ್ದರೆ… 20ನೇ ಕಂತಿನ ₹2,000 ಹಣ ನಿಮ್ಮ ಖಾತೆಗೆ ಬರುವುದಿಲ್ಲ. ಇಂದೇ ಈ ಎಲ್ಲ ಕೆಲಸಗಳನ್ನು ಮುಗಿಸಿ. ಸರ್ಕಾರ ಹಣ ಬಿಡುಗಡೆ ಮಾಡಿದ ಕೂಡಲೆ ನೇರವಾಗಿ ಖಾತೆಗೆ ತಲುಪುತ್ತದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ದೇಶದ ಲಕ್ಷಾಂತರ ರೈತರಿಗೆ ಆರ್ಥಿಕ ಸಹಾಯ ನೀಡುತ್ತಿದೆ. ಸರ್ಕಾರವು ರೈತರಿಗೆ ಸರಿಯಾದ ಮಾಹಿತಿಯನ್ನು ಪಡೆದು ನೇರವಾಗಿ ಹಣ ಪಾವತಿಸಲು ಕಠಿಣ ನಿಯಮಗಳನ್ನು ತಂದಿದೆ.
ನೀವು ಕೂಡ ಈ ಸೌಲಭ್ಯವನ್ನು ಪಡೆಯಲು ಈ ಕೆಲಸಗಳನ್ನು ತಕ್ಷಣ ಮಾಡಿ. ನಿಮ್ಮ ಹಕ್ಕಿನ ಹಣ ನಿಮಗೆ ನೇರವಾಗಿ ತಲುಪಲಿ. ಯಾವುದೇ ಸಹಾಯಕ್ಕೆ ಹತ್ತಿರದ CSC ಕೇಂದ್ರ ಅಥವಾ ಕೃಷಿ ಇಲಾಖೆಯ ಕಚೇರಿಗೆ ಭೇಟಿ ನೀಡಿ.
ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್: pmkisan.gov.in