ಕೆಸಿಇಟಿ ಆಪ್ಷನ್ ಎಂಟ್ರಿ ಪ್ರಕ್ರಿಯೆಯಲ್ಲಿ ಭಾರೀ ಗೊಂದಲ (KCET Option Entry Mistake) ಉಂಟಾಗಿದ್ದು; ಸಾವಿರಾರು ವಿದ್ಯಾರ್ಥಿಗಳಿಗೆ ಸೀಟು ಇಲ್ಲದಾಗಿದೆ. ಕೆಇಎ ಗಂಭೀರ ಎಚ್ಚರಿಕೆ ನೀಡಿದ್ದು; ಈ ಕುರಿತ ಮಾಹಿತಿ ಇಲ್ಲಿದೆ…
ವೃತ್ತಿಪರ ಕೋರ್ಸ್’ಗಳ ಪ್ರವೇಶಕ್ಕಾಗಿ ವಿದ್ಯಾರ್ಥಿಗಳು ಸಲ್ಲಿಸಿರುವ ಆಯ್ಕೆ (Option Entry) ಪ್ರಕ್ರಿಯೆಯಲ್ಲಿ ಭಾರೀ ಗೊಂದಲ ಉಂಟಾಗಿದ್ದು, ಇದರಿಂದ ಬರೋಬ್ಬರಿ 51,935 ವಿದ್ಯಾರ್ಥಿಗಳಿಗೆ ಯಾವುದೇ ಕಾಲೇಜಿನಲ್ಲಿ ಸೀಟು ಹಂಚಿಕೆಯಾಗಿಲ್ಲ!
51,935 ವಿದ್ಯಾರ್ಥಿಗಳಿಗೆ ಸೀಟು ಸಿಕ್ಕಿಲ್ಲ!
ಹೌದು, 2025ನೇ ಸಾಲಿನ KEA (ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ) ಆಧಾರದ ಮೇಲೆ ಜುಲೈ 25ರಂದು ಪ್ರಕಟವಾದ ಅಣಕು ಸೀಟು ಹಂಚಿಕೆ ಫಲಿತಾಂಶವು ಆತಂಕವನ್ನು ಉಂಟುಮಾಡಿದೆ.
ಒಟ್ಟು 1.58 ಲಕ್ಷ ವಿದ್ಯಾರ್ಥಿಗಳು ತಮ್ಮ ಆಯ್ಕೆಯನ್ನು ದಾಖಲಿಸಿದರೆ, ಅವರ ಪೈಕಿ ಕೇವಲ 1.07 ಲಕ್ಷ ವಿದ್ಯಾರ್ಥಿಗಳಿಗೆ ಮಾತ್ರ ಆಯ್ಕೆ ಮಾಡಿದ ಕಾಲೇಜುಗಳಲ್ಲಿ ಸೀಟು ಹಂಚಿಕೆಯಾಗಿರುತ್ತದೆ. ಇನ್ನುಳಿದ 51,935 ವಿದ್ಯಾರ್ಥಿಗಳು ಯಾವುದೇ ಕಾಲೇಜಿನಲ್ಲಿ ಸೀಟು ಸಿಕ್ಕಿಲ್ಲ.
ವಿದ್ಯಾರ್ಥಿಗಳಿಂದಾದ ತಪ್ಪೇನು?
ಬಹುತೇಕ ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ರ‍್ಯಾಂಕ್ ಹಾಗೂ ಕಳೆದ ವರ್ಷದ ಕಟ್ ಆಫ್ ಮಾಹಿತಿ ಬಗ್ಗೆ ಸಮರ್ಪಕ ಅಧ್ಯಯನ ಮಾಡದೆ, ಪ್ರತಿಷ್ಠಿತ ಕಾಲೇಜುಗಳನ್ನು ಮಾತ್ರ ಆಯ್ಕೆ ಮಾಡುತ್ತಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ಉದಾಹರಣೆಗೆ, ತಮಗೆ ಸೀಟು ಸಿಗುವ ಸಾಧ್ಯತೆಯೇ ಇಲ್ಲದ ಟಾಪ್ ಕಾಲೇಜುಗಳನ್ನು ಮೊದಲ ಆಯ್ಕೆಯಾಗಿ ನೀಡಲಾಗುತ್ತದೆ. ಇದರಿಂದಾಗಿ ಆಯ್ಕೆಯಾದ ಯಾವುದೇ ಕಾಲೇಜಿನಲ್ಲಿ ಸೀಟು ಲಭ್ಯವಾಗದ ಸ್ಥಿತಿ ಉಂಟಾಗುತ್ತದೆ.
ನಾವು ವಿದ್ಯಾರ್ಥಿಗಳಿಗೆ ಹೆಚ್ಚು ಆಯ್ಕೆಗಳನ್ನು ದಾಖಲಿಸುವಂತೆ ಆರಂಭದಿಂದಲೂ ಹೇಳುತ್ತಿದ್ದೆವು. ಆದರೆ ಬಹುತೇಕರು ಇದನ್ನು ಗಮನಿಸಿಲ್ಲ. ಇದೀಗ ನೀಡಿರುವ ಅವಕಾಶವನ್ನು ಬಿಟ್ಟರೆ, ಮುಂದಿನ ಹಂತದಲ್ಲಿಯೂ ಸೀಟು ಸಿಗುವುದು ಬಹಳ ಕಷ್ಟ. ಈ ತಪ್ಪುಗಳನ್ನು ತಕ್ಷಣ ತಿದ್ದಿಕೊಳ್ಳಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ಹೇಳಿದ್ದಾರೆ.
ಕೆಇಎ ತಕ್ಷಣದ ಕ್ರಮದ ಸೂಚನೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಗೊಂದಲವನ್ನು ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದು, ಜುಲೈ 29ರ ಸಂಜೆ 5 ಗಂಟೆಯ ವರೆಗೆ ಆಪ್ಷನ್‌ಗಳಲ್ಲಿ ಬದಲಾವಣೆ ಮಾಡುವ ಅವಕಾಶವನ್ನು ನೀಡಿದೆ.
ಈ ಒಂದು ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವುದು ಅತಿ ಅವಶ್ಯಕವಾಗಿದೆ. ಇಲ್ಲವಾದರೆ, ನೈಜ ಸೀಟು ಹಂಚಿಕೆಯಲ್ಲಿಯೂ ಸೀಟು ಬಾರದೇ ಹೋಗಬಹುದು ಎಂದು ಕೆಇಎ ಎಚ್ಚರಿಸಿದೆ.

ವಿದ್ಯಾರ್ಥಿಗಳು ಕೈಗೊಳ್ಳಬೇಕಾದ ಕ್ರಮಗಳು
- ನಿಮ್ಮ ಹತ್ತಿರದ ವಿದ್ಯಾರ್ಥಿಗಳು, ಗೈಡ್‌ಗಳು ಅಥವಾ ಇತ್ತೀಚಿನ ದಾಖಲೆಗಳ ಆಧಾರದ ಮೇಲೆ ನಿಮ್ಮ ರ್ಯಾಂಕ್ ಎಷ್ಟು ಸಮರ್ಥವಾಗಿದೆ ಎಂಬುದನ್ನು ತಿಳಿದುಕೊಳ್ಳಿ.
- ಕಳೆದ ಎರಡು ವರ್ಷಗಳ ಕಾಲೇಜುಗಳ ವಿಭಾಗವಾರು ಕಟ್ ಆಫ್ ಡೇಟಾವನ್ನು ಪರಿಶೀಲಿಸಿ.
- ಕನಿಷ್ಟ 150 ರಿಂದ 200 ಕಾಲೇಜು ಆಯ್ಕೆಗಳನ್ನು ನೀಡಬೇಕು. ಈ ಮೂಲಕ ಸೀಟು ಪಡೆಯುವ ಸಾಧ್ಯತೆ ಹೆಚ್ಚಾಗುತ್ತದೆ.
- ಹಲವಾರು ಮಧ್ಯಮ ಹಾಗೂ ಸಣ್ಣ ಕಾಲೇಜುಗಳನ್ನು ಆಯ್ಕೆ ಮಾಡಿ ನೀಡುವುದು ಹೆಚ್ಚು ಲಾಭದಾಯಕ.
ಮುಂದಿನ ಹಂತದ ಪ್ರಮುಖ ದಿನಾಂಕಗಳು
- ಆಪ್ಷನ್ ಎಂಟ್ರಿ ಬದಲಾವಣೆ ಕೊನೆ ದಿನ : ಜುಲೈ 29, ಸಂಜೆ 5 ಗಂಟೆ
- ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ: ಆಗಸ್ಟ್ 1
- ಅಂತಿಮ ಸೀಟು ಹಂಚಿಕೆ ಫಲಿತಾಂಶ: ಆಗಸ್ಟ್ 2
- ಚಾಯ್ಸ್ ಆಯ್ಕೆ (ಫೀಸ್ ಪಾವತಿ/ಪ್ರವೇಶ): ಆಗಸ್ಟ್ 4 ರಿಂದ ಆಗಸ್ಟ್ 7
ವಿದ್ಯಾರ್ಥಿಗಳು ಮತ್ತು ಪೋಷಕರು ಜವಾಬ್ದಾರಿಯಿಂದ ನಡೆಯುವುದು ಅಗತ್ಯ. ಸರಿಯಾದ ಮಾಹಿತಿಯೊಂದಿಗೆ, ಯೋಜಿತ ರೀತಿಯಲ್ಲಿ ಆಪ್ಷನ್ ಎಂಟ್ರಿ ಮಾಡುವುದು ನಿಮ್ಮ ಭವಿಷ್ಯವನ್ನು ರೂಪಿಸಬಲ್ಲದು. ಈ ಒಂದು ಅವಕಾಶವನ್ನು ಸದುಪಯೋಗ ಪಡೆದು, ತಪ್ಪನ್ನು ತಿದ್ದುಕೊಳ್ಳಿ ಮತ್ತು ನಿಮ್ಮ ಪ್ರವೇಶ ಖಚಿತಗೊಳಿಸಿ.