ಭಾರತೀಯ ರಿಸರ್ವ್ ಬ್ಯಾಂಕ್ (RBI) ಗೋಲ್ಡ್ ಲೋನ್ ನೀಡುವ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (NBFC) ಹೊಸ ನಿಯಮ ರೂಪಿಸಿದೆ. ಏನಿದು ಹೊಸ ನಿಯಮ? ಇದರಿಂದ ಗ್ರಾಹಕರಿಗೆ ಆಗುವ ಲಾಭಗಳೇನು? ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ…
ಚಿನ್ನದ ಮೇಲಿನ ಸಾಲ (Gold Loan) ವಿತರಣೆಯಲ್ಲಿ ಪಾರದರ್ಶಕತೆ ಮತ್ತು ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸಲು ಉದ್ದೇಶಿಸಿ ಆರ್‌ಬಿಐ ನೂತನ ಕರಡು ನಿಯಮಾವಳಿಗಳನ್ನು ಪ್ರಕಟಿಸಿದೆ. ಈ ನಿಯಮಗಳು ದೇಶದಾದ್ಯಂತ ಎಲ್ಲಾ ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳಲ್ಲಿ ಸಮಾನವಾಗಿ ಜಾರಿಯಾಗಲಿದೆ.
ಹೆಚ್ಚಲಿದೆ ಗೋಲ್ಡ್ ಲೋನ್ ಬೇಡಿಕೆ
ಆರ್‌ಬಿಐನ ಹಣಕಾಸು ನೀತಿ ಸಮಿತಿಯು ಇತ್ತೀಚೆಗಷ್ಟೇ ರೆಪೊ ದರವನ್ನು ಇಳಿಸಿದ್ದು, ಇದರ ಪರಿಣಾಮವಾಗಿ ಸಾಲದ ಲಭ್ಯತೆ ಸುಲಭವಾಗಲಿದೆ. ಇದರ ಜೊತೆಗೆ, ಚಿನ್ನದ ಬೆಲೆಗಳು ಇತ್ತೀಚೆಗೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿರುವುದರಿಂದ ಚಿನ್ನದ ಮೇಲೆ ಸಾಲ ಪಡೆಯುವವರ ಸಂಖ್ಯೆಯೂ ಹೆಚ್ಚಾಗಲಿದೆ.
ಅಸಲಿಗೆ ಚಿನ್ನ ಕೇವಲ ಒಡವೆ, ಆಭರಣ ಮಾತ್ರವಲ್ಲ ಅದು ಆರ್ಥಿಕ ಭದ್ರತೆ ಕೂಡ ಹೌದು. ಅನೇಕರು ಆಪತ್ಕಾಲದಲ್ಲಿ ಚಿನ್ನ ಅಡವಿಟ್ಟು ತಾತ್ಕಾಲಿಕ ಸಾಲ ಪಡೆಯುತ್ತಾರೆ. ಆದರೆ, ಈ ಪ್ರಕ್ರಿಯೆಯಲ್ಲಿ ಆಗುವ ಶೋಷಣೆ ಮತ್ತು ವಂಚನೆಯಿಂದ ಗ್ರಾಹಕರು ಸಾಕಷ್ಟು ನಷ್ಟ ಅನುಭವಿಸುವುದುಂಟು. ಹೀಗಾಗಿ, ಈ ರೀತಿಯ ಸಮಸ್ಯೆಗಳನ್ನು ತಡೆಗಟ್ಟುವ ಉದ್ದೇಶದಿಂದ ಆರ್‌ಬಿಐ ಸ್ಪಷ್ಟವಾದ ಮಾರ್ಗಸೂಚಿಗಳನ್ನು ರೂಪಿಸಲು ಮುಂದಾಗಿದೆ.

SSLC 2025 Results- SSLC ಫಲಿತಾಂಶ | ಮೌಲ್ಯಮಾಪನ, ರಿಸೆಲ್ಟ್ ಕುರಿತ KSEAB ಪ್ರಮುಖ ಮಾಹಿತಿ ಇಲ್ಲಿದೆ…
ಹೊಸ ಕರಡು ನಿಯಮಗಳಲ್ಲಿ ಏನೇನಿದೆ?
- ಚಿನ್ನದ ಮೌಲ್ಯಮಾಪನಕ್ಕೆ ಏಕರೂಪದ ವಿಧಾನ: ಎಲ್ಲಾ ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳು ಚಿನ್ನದ ತೂಕ ಮತ್ತು ಶುದ್ಧತೆಯನ್ನು ಪ್ರಮಾಣೀಕೃತ ಕಾರ್ಯ ವಿಧಾನ ಅನುಸರಿಸಬೇಕು. ಈ ಪರೀಕ್ಷೆಯು ಯಾವುದೇ ಶಂಕೆಗೆ ಅವಕಾಶವಿಲ್ಲದಂತೆ ಗ್ರಾಹಕರ ಸಮ್ಮುಖದಲ್ಲಿಯೇ ನಡೆಯಬೇಕು.
- ಚಿನ್ನದ ಶುದ್ಧತೆ, ತೂಕದ ಬಗ್ಗೆ ಸ್ಪಷ್ಟ ಮಾಹಿತಿ: ಗ್ರಾಹಕರಿಗೆ ಚಿನ್ನದ ನಿವ್ವಳ ತೂಕ ಮತ್ತು ಶುದ್ಧತೆ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ಆ ಆಧಾರದ ಮೇಲೆ ನೀಡಲಾಗುವ ಸಾಲದ ಪ್ರಮಾಣ, ಬಡ್ಡಿದರಗಳು ಹಾಗೂ ಅವಧಿ ಮುಂತಾದ ವಿವರಗಳು ಕರಾರು ಪತ್ರದಲ್ಲಿ ಉಲ್ಲೇಖವಾಗಿರಬೇಕು.
- ಒಪ್ಪಂದ ಪತ್ರ ಸ್ಥಳೀಯ ಭಾಷೆಯಲ್ಲಿರಬೇಕು: ಗ್ರಾಹಕರಿಗೆ ಒಪ್ಪಂದ ಪತ್ರವನ್ನು ಅವರಿಗೆ ಅರ್ಥವಾಗುವ ಸ್ಥಳೀಯ ಭಾಷೆಯಲ್ಲೇ ನೀಡಬೇಕು. ಈ ಪತ್ರದಲ್ಲಿ ಸಾಲ ಮರುಪಾವತಿಗೆ ನಿಗದಿಪಡಿಸಲಾದ ಅವಧಿ, ಮರುಪಾವತಿಯಾಗದ ಪರಿಸ್ಥಿತಿಯಲ್ಲಿ ಚಿನ್ನ ಹರಾಜು ಮಾಡುವ ಪ್ರಕ್ರಿಯೆ, ಅದಕ್ಕೂ ಮುನ್ನ ನೀಡುವ ನೋಟಿಸ್ ಅವಧಿ ಮುಂತಾದವುಗಳನ್ನು ಸ್ಪಷ್ಟವಾಗಿ ಸೂಚಿಸಬೇಕು.
- ಅನಕ್ಷರಸ್ಥರಿಗಾಗಿ ಸಾಕ್ಷಿಗಳ ಸಮ್ಮುಖದಲ್ಲಿ ವಿವರ: ಓದಲು ಬರೆಯಲು ಬಾರದ ಅನಕ್ಷರಸ್ತ ಗ್ರಾಹಕರಿಗೆ ಸಾಲದ ಷರತ್ತುಗಳನ್ನು ಬರೆದ ಪತ್ರದಿಂದ ಅಲ್ಲದೆ ವಾಕ್ಯಬದ್ಧವಾಗಿ ವಿವರಿಸಬೇಕಿದೆ. ಈ ಪ್ರಕ್ರಿಯೆಯು ಸಾಕ್ಷಿಗಳ ಸಮ್ಮುಖದಲ್ಲಿಯೇ ನಡೆಯಬೇಕು.
- ಬ್ಯಾಂಕ್‌ಗಳಿಗೂ ಎನ್‌ಬಿಎಫ್‌ಸಿ ನಿಯಮಗಳು ಅನ್ವಯ: ಇಲ್ಲಿಯ ವರೆಗೆ ಈ ನಿಯಮಗಳು ಮುಖ್ಯವಾಗಿ ಎನ್‌ಬಿಎಫ್‌ಸಿಗಳಿಗೆ ಮಾತ್ರ ಅನ್ವಯವಾಗುತ್ತಿದ್ದವು. ಆದರೆ ಇದೀಗ, ಸಾಲ ವಹಿವಾಟುಗಳಲ್ಲಿ ಸಮಾನತೆ ಮತ್ತು ನ್ಯಾಯ ಸ್ಥಾಪಿಸುವ ಉದ್ದೇಶದಿಂದ ಈ ನಿಯಮಗಳನ್ನು ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುವಂತೆ ಆರ್‌ಬಿಐ ನಿರ್ಧರಿಸಿದೆ.
Gold Price Hike- 10 ಗ್ರಾಂ ಚಿನ್ನ ಈಗ ಲಕ್ಷ ರೂ. ಸನಿಹ | ಒಂದೇ ದಿನ ₹6,250 ರೆಕಾರ್ಡ್ ಏರಿಕೆ!
ಇದರಿಂದ ಗ್ರಾಹಕರಿಗೆ ಆಗುವ ಅನುಕೂಲಗಳೇನು?
ಈ ಕರಡು ನಿಯಮಗಳು ಜಾರಿಯಾದರೆ, ಗ್ರಾಹಕರಿಗೆ ಪಾರದರ್ಶಕ ಮತ್ತು ನ್ಯಾಯಯುತ ಸೇವೆಗಳು ಸಿಗುತ್ತದೆ.. ಹಣಕಾಸು ವ್ಯವಹಾರದಲ್ಲಿ ಅಲ್ಪ ಜ್ಞಾನ ಹೊಂದಿರುವ ಗ್ರಾಹಕರಿಗೂ ಸಮಾನ ಹಕ್ಕುಗಳು ಸಿಗುತ್ತವೆ. ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳು ತಮ್ಮ ವ್ಯವಹಾರದಲ್ಲಿ ಜವಾಬ್ದಾರಿ ಮತ್ತು ಶಿಸ್ತು ಪಾಲಿಸಬೇಕಾದ ಅನಿವಾರ್ಯತೆ ಮೂಡುತ್ತದೆ.
ಆರ್‌ಬಿಐ ಈಗಾಗಲೇ ಈ ಕರಡು ನಿಯಮಗಳ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಕೇಳುತ್ತಿದೆ. ಆರ್‌ಬಿಐ ಗವರ್ನರ್ ಸಂಜಯ್ ಮಲ್ಲೋತ್ರ ನೀಡಿದ ಮಾಹಿತಿಯಂತೆ ಈ ಕರಡು ನಿಯಮಗಳ ಬಗ್ಗೆ ಸಾರ್ವಜನಿಕರಿಂದ ಮೇ 12ರ ವರೆಗೆ ಅಭಿಪ್ರಾಯ ಆಹ್ವಾನಿಸಲಾಗಿದೆ. ಅಂತಿಮ ಮಾರ್ಗಸೂಚಿಗಳು ಆ ನಂತರ ಪ್ರಕಟವಾಗಲಿವೆ.
Gold Silver Price- ಚಿನ್ನದ ಬೆಲೆ ಭಾರೀ ಇಳಿಕೆ | 10 ಗ್ರಾಂಗೆ ಕೇವಲ ₹55,000 ಇಳಿಯಲಿದೆಯೇ?