Farmers Loan Waiver : ದೇಶಾದ್ಯಂತ ನಿರಂತರವಾಗಿ ಕೇಳಿ ಬರುತ್ತಿರುವ ‘ರೈತರ ಸಾಲ ಮನ್ನಾ’ (Farmers Loan Waiver) ಕೂಗು ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ‘ಇಂಡಿಯಾ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಸಾಲವನ್ನು ಮನ್ನಾ ಮಾಡುತ್ತೇವೆ’ ಎಂದು ಭರವಸೆ ನೀಡಿತ್ತು. ಆದರೆ ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ.
ಇದೇ ರೀತಿಯ ‘ಸಾಲಮನ್ನಾ’ (Loan Waiver) ಘೋಷಣೆಯನ್ನು ವಿವಿಧ ರಾಜ್ಯ ವಿಧಾನಸಭಾ ಚುನಾವಣೆ ಸಮಯದಲ್ಲೂ ಮಾಡಲಾಗಿತ್ತು. ಈ ಪೈಕಿ ನೆರೆಯ ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ವರಂಗಲ್‌ನಲ್ಲಿ ಪ್ರಕಟಿಸಿದ ‘ರೈತ ಘೋಷಣೆ’ಯಡಿ ಕೃಷಿ ಸಾಲ ಮನ್ನಾ ಘೋಷಣೆ ಮಾಡಲಾಗಿತ್ತು. ಅದರಂತೆ ತೆಲಂಗಾಣದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದ್ದು; ಇದೀಗ ತೆಲಂಗಾಣ ಸಚಿವ ಸಂಪುಟವು (Telangana Govt) ಕೃಷಿ ಸಾಲ ಮನ್ನಾ ಯೋಜನೆಗೆ ಅನುಮೋದನೆ ನೀಡಿದೆ.
‘ರೈತು ಭರೋಸಾ’ ಯೋಜನೆ ಅನುಷ್ಠಾನ
ನಿನ್ನೆ (ಜೂನ್ 21) ತೆಲಂಗಾಣ ಸಚಿವ ಸಂಪುಟವು ಕೃಷಿ ಸಾಲ ಮನ್ನಾ ಯೋಜನೆಗೆ ಅನುಮೋದನೆ ನೀಡಿ, ‘ರೈತು ಭರೋಸಾ’ (Rythu Bharosa) ಯೋಜನೆ ಅನುಷ್ಠಾನದಲ್ಲಿ ಪಾರದರ್ಶಕತೆ ಖಾತ್ರಿಪಡಿಸುವ ಸಲುವಾಗಿ ಸಂಪುಟ ಉಪಸಮಿತಿ ನೇಮಕ ಮಾಡಲು ನಿರ್ಧರಿಸಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಹೇಳಿದ್ದಾರೆ.
ತೆಲಂಗಾಣ ಹಣಕಾಸು ಮಂತ್ರಿಯೂ ಆಗಿರುವ ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಅವರ ನೇತೃತ್ವದಲ್ಲಿ ‘ರೈತು ಭರೋಸಾ’ ಯೋಜನೆ ಅನುಷ್ಠಾನದಲ್ಲಿ ಪಾರದರ್ಶಕತೆ ಕಾಪಾಡುವುದಕ್ಕಾಗಿ ರಚಿಸಿರುವ ಸಂಪುಟ ಉಪಸಮಿತಿಯು ಇದೇ ಜುಲೈ 15ರ ಒಳಗಾಗಿ ತನ್ನ ವರದಿ ಸಲ್ಲಿಸಲಿದೆ.
2018ರ ಡಿಸೆಂಬರ್ 12ರಿಂದ 2023ರ ಡಿಸೆಂಬರ್ 9ರ ವರೆಗಿನ ಅವಧಿಯಲ್ಲಿ ರೈತರು ತೆಗೆದುಕೊಂಡಿರುವ ಕೃಷಿ ಸಾಲವನ್ನು ಮನ್ನಾ ಮಾಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ 31,000 ಕೋಟಿ ಅಗತ್ಯವಿದ್ದು; ಫಲಾನುಭವಿ ರೈತರ ತಲಾ 2 ಲಕ್ಷ ರೂಪಾಯಿ ಸಾಲ ಮನ್ನಾ ಆಗಲಿದೆ ಎಂದು ಸಿಎಂ ಎ.ರೇವಂತ ರೆಡ್ಡಿ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಸ್ಥಿತಿ ಹೇಗೆ?
ಅತ್ತ ತೆಲಂಗಾಣ ಸಚಿವ ಸಂಪುಟ ರೈತರ ಬೆಳೆ ಸಾಲ ಮನ್ನಾ ಯೋಜನೆಗೆ ಅನುಮೋದನೆ ನೀಡುತ್ತಿದ್ದಂತೆಯೇ ಇತ್ತ ಕರ್ನಾಟಕದಲ್ಲೂ ಬಹು ದಿನಗಳಿಂದ ಕೇಳಿ ಬರುತ್ತಿದ್ದ ಸಾಲ ಮನ್ನಾ ಆಗ್ರಹ ಮತ್ತೆ ಕೇಳಿ ಬಂದಿದೆ. ಕರ್ನಾಟಕದಲ್ಲಿ 2018 ಆಗಸ್ಟ್ 14ರಂದು ಸಾಲಮನ್ನಾ ಯೋಜನೆ ಘೋಷಣೆ ಮಾಡಲಾಗಿತ್ತು. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ರಾಜ್ಯ ಸರಕಾರ ರೈತರ ಗರಿಷ್ಠ ಒಂದು ಲಕ್ಷ ರೂಪಾಯಿ ಬೆಳೆಸಾಲ ಮನ್ನಾ ಮಾಡಿತ್ತು.
2018 ಜುಲೈ 10ರ ವರೆಗೆ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಿAದ ಬೆಳೆ ಸಾಲ ಪಡೆದಿದ್ದ ರೈತ ಸದಸ್ಯರ ಹೊರ ಬಾಕಿ ಸಾಲಗಳಿಗೆ ಗರಿಷ್ಟ ಒಂದು ಲಕ್ಷ ರೂಪಾಯಿ ವರೆಗೆ ಸಾಲ ಮನ್ನಾ ಭಾಗ್ಯ ನೀಡಲಾಗಿತ್ತು. ಹಲವಾರು ತೊಡಕುಗಳ ಬಳಿಕ ಹೆಚ್ಚಿನ ರೈತರ ಸಾಲ ಮನ್ನಾ ಆಗಿದ್ದು, ಈ ಅನುದಾನ ಸಹಕಾರ ಸಂಘಗಳಿಗೆ ಹಲವು ಕಂತುಗಳ ಮೂಲಕ ಪಾವತಿಯಾಗಿತ್ತು.
ಇದೀಗ ತೆಲಂಗಾಣ ಸರಕಾರದ ರೈತರ ಸಾಲ ಮನ್ನಾ ಯೋಜನೆ ಅನುಷ್ಠಾನದ ಬಳಿಕ ರೈತ ಸಂಘಟನೆ, ರೈತಪರ ಹೋರಾಟಗಾರರು ರಾಜ್ಯದಲ್ಲಿ ರೈತರ ಸಾಲ ಮನ್ನಾ ಕುರಿತು ಧ್ವನಿ ಎತ್ತಿರುವುದು ವಿಶೇಷವಾಗಿದೆ. ನಿನ್ನೆ ಕರ್ನಾಟಕದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ ಅವರು ಸರಕಾರದ ಖಜಾನೆ ಭದ್ರವಾಗಿದ್ದರೆ ರೈತರ ಸಾಲ ಮನ್ನಾ ಮಾಡಲಿ ಎಂದು ಆಗ್ರಹಿಸಿದ್ದಾರೆ.
4 thoughts on “ರೈತರ 2 ಲಕ್ಷ ರೂಪಾಯಿ ಸಾಲಮನ್ನಾ | ₹31 ಸಾವಿರ ಕೋಟಿ ಅನುದಾನ Farmers Loan Waiver”