ರಾಜ್ಯ ಸರ್ಕಾರ (Government of Karnataka) ಅನಧಿಕೃತ ಆಸ್ತಿಗಳಿಗೆ ಡಿಜಿಟಲ್ ಹಕ್ಕುಪತ್ರ (Digital Hakkupatra Scheme) ವಿತರಿಸಲು ಸಿದ್ಧವಾಗಿದೆ. ಯಾರಿಗೆಲ್ಲ ಸಿಗಲಿದೆ ಪಟ್ಟಾಖಾತೆ? ಸಂಪೂರ್ಣ ಮಾಹಿತಿ ಇಲ್ಲಿದೆ…
ತಮ್ಮ ಮನೆಗಳಿಗೆ ದಾಖಲೆ ಇಲ್ಲದೆ, ಊರಿಗೆ ಹೆಸರೇ ಇಲ್ಲದೇ ಅನಾಮದೇಯವಾಗಿ ಬದುಕುತ್ತಿದ್ದ ಲಕ್ಷಾಂತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಇದೀಗ ಹೊಸ ಬೆಳಕಿನ ದಾರಿ ತೋರುತ್ತಿದೆ. ಕಂದಾಯ ಇಲಾಖೆ ಮೂಲಕ ಒಂದೇ ಬಾರಿಗೆ 1 ಲಕ್ಷ ಡಿಜಿಟಲ್ ಹಕ್ಕುಪತ್ರಗಳನ್ನು ವಿತರಿಸಲು ಸರ್ಕಾರ ಯೋಜನೆ ರೂಪಿಸಿದೆ. ಇದು ರಾಜ್ಯದ ಇತಿಹಾಸದಲ್ಲೇ ಅತ್ಯಂತ ವಿಶಾಲ ಹಕ್ಕುಪತ್ರ ವಿತರಣೆ ಎನ್ನಲಾಗುತ್ತಿದೆ.
ಇದೇ ಮೇ 20ಕ್ಕೆ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಲಿದ್ದು; ಈ ಹಿನ್ನಲೆಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಸದರಿ ಸಮಾವೇಶದಲ್ಲಿ ರಾಜ್ಯದ 1 ಲಕ್ಷ ಜನರಿಗೆ ಸಾಂಕೇತಿಕವಾಗಿ ಪಟ್ಟಾಖಾತೆ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಯಾರಿಗೆಲ್ಲ ಸಿಗಲಿದೆ ಹಕ್ಕುಪತ್ರ?
ನಕ್ಷೆಗೇ ಸೇರದ ಜನವಸತಿಗಳ ನಿವಾಸಿಗಳು, ಹಕ್ಕುಪತ್ರವಿಲ್ಲದ ಭೂಮಿಯ ಮೇಲೆ ಮನೆ ನಿರ್ಮಾಣ ಮಾಡಿಕೊಂಡಿರುವವರು ಹಾಗೂ ವಿವಿಧ ಸರ್ಕಾರಿ ಯೋಜನೆಗಳಿಂದ ದೂರವಿರುವವರಿಗೆ ಹಕ್ಕು ಪತ್ರ ಸಿಗಲಿದೆ.
ಕರ್ನಾಟಕದ ಹಲವಾರು ಹಟ್ಟಿ, ತಾಂಡಾ, ಹ್ಯಾಬಿಟೇಟ್ (ಜನವಸತಿ) ಪ್ರದೇಶಗಳು ನಕ್ಷೆಗೇ ಬರದಂತಾಗಿದ್ದವು. ಈ ಭಾಗಗಳಲ್ಲಿ ನೆಲೆಸಿರುವ ಜನರಿಗೆ ನೆಲೆಸಿರುವ ಭೂಮಿಗೆ ದಾಖಲೆಗಳಿರಲಿಲ್ಲ.
ಆಸ್ತಿ ಹಕ್ಕು ಇಲ್ಲದ ಕಾರಣ ಸರ್ಕಾರಿ ಸೌಲಭ್ಯಗಳು ಸಿಗದಂತಾಗಿತ್ತು. ಬ್ಯಾಂಕ್ ಸಾಲ, ಪಿಂಚಣಿ, ಮನೆ ನಿರ್ಮಾಣ ಸಹಾಯ ಮುಂತಾದ ಲಾಭಗಳಿಗೆ ತೊಂದರೆ ಉಂಟಾಗುತ್ತಿತ್ತು.
ಈ ಸಮಸ್ಯೆಗೆ ಪರಿಹಾರವಾಗಿ ಸರ್ಕಾರವು ಈಗ ಹಕ್ಕುಪತ್ರ ಯೋಜನೆಯನ್ನು ರೂಪಿಸಿದ್ದು, ಸುಮಾರು 30,000 ಜನವಸತಿ ಪ್ರದೇಶಗಳಲ್ಲಿ ಮಾಲೀಕತ್ವದ ದಾಖಲೆ ಸೃಷ್ಟಿಯ ಕಾರ್ಯ ಆರಂಭವಾಗಿದೆ.

e-Pouthi- ಮನೆ ಬಾಗಿಲಿಗೆ ಇ-ಪೌತಿ | ರೈತರ ಖಾತೆ ಸಮಸ್ಯೆ ಪರಿಹಾರಕ್ಕೆ ಕಂದಾಯ ಇಲಾಖೆ ಆಂದೋಲನ
ಡಿಜಿಟಲ್ ಹಕ್ಕುಪತ್ರಕ್ಕೆ ಆದ್ಯತೆ
ಹಿಂದಿನ ಕಾಲದಲ್ಲಿ ಹಕ್ಕುಪತ್ರಗಳನ್ನು ಕಾಗದದ ಆಧಾರದಲ್ಲಿ ನೀಡಲಾಗುತ್ತಿತ್ತು. ಆದರೆ, ಮೂಲ ದಾಖಲೆ ಇಲ್ಲದ ಹಕ್ಕುಪತ್ರಗಳು ವಿಳಂಬ, ವಿವಾದ, ವ್ಯಾಜ್ಯಗಳಿಗೆ ಕಾರಣವಾಗುತ್ತಿದ್ದವು. ಹಕ್ಕುಪತ್ರ ತಿದ್ದುಪಡಿ ಮೂಲಕ ಅಕ್ರಮಗಳು ನಡೆದ ಉದಾಹರಣೆಗಳೂ ಇವೆ.
ಈ ತಪ್ಪುಗಳನ್ನು ತಿದ್ದುವ ಉದ್ದೇಶದಿಂದ ಇನ್ನು ಮುಂದೆ ಪೂರ್ಣವಾಗಿ ಡಿಜಿಟಲ್ ಹಕ್ಕುಪತ್ರಗಳನ್ನು ನೀಡಲಾಗುತ್ತಿದೆ. ಇದರಿಂದಾಗಿ ದಾಖಲೆ ಕಳೆದು ಹೋಗುವ ಸಾಧ್ಯತೆ ಇಲ್ಲ. ಆನ್‌ಲೈನ್ ಮೂಲಕ ದಾಖಲೆ ಪರಿಶೀಲನೆ ಮಾಡಬಹುದು. ನಕಲಿ ದಾಖಲೆ ಸೃಷ್ಟಿಗೆ ಅವಕಾಶವಿಲ್ಲ.
ಹೇಗೆ ನಡೆಯಲಿದೆ ಹಕ್ಕುಪತ್ರ ವಿತರಣೆ ಪ್ರಕ್ರಿಯೆ
ಈ ಹಕ್ಕುಪತ್ರ ವಿತರಣೆ ಕ್ರಮವು ಬಹಳ ಸೂಕ್ಷ್ಮ ಹಾಗೂ ಕಾನೂನಾತ್ಮಕವಾಗಿದ್ದು; ಈಗಾಗಲೇ 3,221 ಜನವಸತಿ ಪ್ರದೇಶಗಳಿಗೆ ಪ್ರಾಥಮಿಕ ಅಧಿಸೂಚನೆ ನೀಡಲಾಗಿದೆ.
ಮನೆಯ ಸ್ಥಳೀಯ ಸರ್ವೇ ನಡೆಯಲಿದೆ. ಪ್ರತಿ ಮನೆಗೆ ಯೂನಿಕ್ ಐಡಿ ನೀಡಲಾಗುತ್ತದೆ. ಫಲಾನುಭವಿಯ ಹೆಸರು ತಹಸೀಲ್ದಾರ್ ಮೂಲಕ ಅಧಿಕೃತ ದಾಖಲೆಗಳಲ್ಲಿ ಸೇರ್ಪಡೆ ಮಾಡಲಾಗುತ್ತದೆ.
15 ದಿನಗಳಲ್ಲಿ ಕಾವೇರಿ ಸಾಫ್ಟ್‌ವೇರ್ ಮೂಲಕ ಸೆಲ್ ಡೀಡ್ ಸಿದ್ಧಗೊಳ್ಳುತ್ತದೆ. ಪಂಚಾಯಿತಿಗೆ ದಾಖಲೆ ರವಾನೆ, ಖಾತೆ ನಿರ್ಮಾಣ ಮತ್ತು ಆಧಾರ್ ಲಿಂಕ್ ಕಾರ್ಯ ನಡೆಯಲಿದೆ.
ಫಲಾನುಭವಿಗಳಿಗೆ ಏನೆಲ್ಲ ಪ್ರಯೋಜನವಾಗಲಿದೆ?
- ಆಸ್ತಿ ಮೇಲಿನ ನಿರ್ಧಿಷ್ಟವಾದ ಮಾಲೀಕತ್ವ ಸಿಗಲಿದ್ದು; ಬ್ಯಾಂಕ್‌ಗಳಿಂದ ಸಾಲ ಪಡೆಯಲು ಸುಲಭವಾಗಲಿದೆ.
- ಮನೆ ನವೀಕರಣ, ಪಿಂಚಣಿ, ಬಿಪಿಎಲ್ ಕಾರ್ಡ್ ಮುಂತಾದ ಹಕ್ಕುಗಳು ದೊರೆಯುತ್ತವೆ.
- ನಕ್ಷೆ, ಸರ್ವೇ ದಾಖಲೆಗಳು ಸರ್ಕಾರದ ದಾಖಲೆಗಳಲ್ಲಿ ಸೇರ್ಪಡೆಯಾಗಲಿವೆ.
- ಆಸ್ತಿ ವಿವಾದಗಳಿಗೆ ಕಡಿವಾಣ ಬೀಳಲಿದೆ. ಅಕ್ರಮ ಭೂ ವ್ಯಾಜ್ಯಗಳು ನಿಲ್ಲಲಿವೆ.
- ಪಂಚಾಯಿತಿಗಳಿಗೆ ತೆರಿಗೆ ಸಂಗ್ರಹದ ವ್ಯಾಪ್ತಿ ವಿಸ್ತರಣೆಯಾಗಲಿದ್ದು; ಸರ್ಕಾರಿ ಯೋಜನೆಗಳ ಅನುಷ್ಠಾನ ಸರಳವಾಗಲಿದೆ.
ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಹೇಳುವಂತೆ ಈ ಪ್ರಕ್ರಿಯೆ ಸಂಪೂರ್ಣವಾಗಿ ಆಟೋಮೇಟೆಡ್ ಆಗಿದ್ದು, ದಾಖಲೆ ತಯಾರಾಗಿ ಫಲಾನುಭವಿಯ ಹೆಸರು ದಾಖಲಾಗುತ್ತಿದ್ದಂತೆ 15 ದಿನಗಳಲ್ಲಿ ಸ್ಕ್ರಿಪ್ಟ್ ಸಿದ್ಧಗೊಳ್ಳುತ್ತದೆ. ತಹಸೀಲ್ದಾರ್ ಸಹಿ ಮಾಡಿದ ನಂತರ ಸೆಲ್ ಡೀಡ್ ನೊಂದಣಿ, ನಂತರ ಜನರಿಗೆ 94ಡಿ ಅಡಿಯಲ್ಲಿ ಹಕ್ಕುಪತ್ರ ವಿತರಣೆ ಆಗಲಿದೆ.
ಇದು ಕೇವಲ ಕಾನೂನಾತ್ಮಕ ಕ್ರಮವಲ್ಲ. ಗ್ರಾಮೀಣ ಸಮಾಜವನ್ನು ಸಬಲಗೊಳಿಸುವ, ಕಾನೂನಿನ ಅಧೀನದಲ್ಲಿರುವ ಸಂಪೂರ್ಣ ಸಮಾಜ ನಿರ್ಮಾಣದ ಮೊದಲ ಹೆಜ್ಜೆಯಾಗಿದೆ. ಇದೇ ಮೇ 20ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ಸಿಗಲಿದೆ ಎನ್ನಲಾಗುತ್ತಿದೆ.