BPL Ration Card- 2.86 ಲಕ್ಷ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ | ಆಹಾರ ಇಲಾಖೆಯ ಮಹತ್ವದ ಮಾಹಿತಿ ಇಲ್ಲಿದೆ…

ರಾಜ್ಯದಲ್ಲಿ ಲಕ್ಷಾಂತರ ಜನ ಹೊಸ ಬಿಪಿಎಲ್ ರೇಷನ್ ಕಾರ್ಡ್’ಗಾಗಿ (BPL Ration Card) ಕಾತುರದಿಂದ ಕಾಯುತ್ತಿದ್ದಾರೆ. ಈ ಬಗ್ಗೆ ಆಹಾರ ಇಲಾಖೆ (Food Department) ನೀಡಿದ ಮಾಹಿತಿ ಇಲ್ಲಿದೆ…
ರಾಜ್ಯಾದ್ಯಂತ ಹೊಸ ಬಿಪಿಎಲ್ ರೇಷನ್ ಕಾರ್ಡ್’ಗಾಗಿ ಲಕ್ಷಾಂತರ ಜನ ಕಾತುರದಿಂದ ಕಾಯುತ್ತಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮಾಹಿತಿ ಪ್ರಕಾರ ಈತನಕ ಸಲ್ಲಿಕೆಯಾದ ಅರ್ಜಿಗಳೆಷ್ಟು? ಅದರಲ್ಲಿ ತೀರಸ್ಕೃತವಾದ ಅರ್ಜಿಗಳೆಷ್ಟು? ಅರ್ಹ ಅರ್ಜಿಗಳೆಷ್ಟು? ಅರ್ಹರಿಗೆ ಬಿಪಿಎಲ್ ಕಾರ್ಡ್ ವಿತರಣೆ ಯಾವಾಗ? ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಆಹಾರ ಇಲಾಖೆ ನೀಡಿದ ಅರ್ಜಿಗಳ ಮಾಹಿತಿ
ಆಹಾರ ಇಲಾಖೆಯ ಮಾಹಿತಿ ಪ್ರಕಾರ, 2025ರ ಏಪ್ರಿಲ್ 3ರ ತನಕ ರಾಜ್ಯದಾದ್ಯಂತ 11.36 ಲಕ್ಷ ಹೊಸ ಬಿಪಿಎಲ್ ಕಾರ್ಡ್ ಅರ್ಜಿಗಳು ಇಲಾಖೆಗೆ ಸಲ್ಲಿಕೆಯಾಗಿವೆ. ಈ ಭಾರೀ ಸಂಖ್ಯೆಯ ಅರ್ಜಿಗಳ ಪೈಕಿ, 9.18 ಲಕ್ಷ ಅರ್ಜಿ ಸ್ವೀಕೃತಗೊಂಡಿವೆ, ಅಂದರೆ ಇವು ಪ್ರಾಥಮಿಕ ಹಂತದಲ್ಲಿ ಅಂಗೀಕಾರವಾಗಿವೆ.
5.76 ಲಕ್ಷ ಅರ್ಜಿಗಳು ಇನ್ನೂ ಪರಿಶೀಲನಾ ಹಂತದಲ್ಲಿವೆ. ಇವುಗಳ ಫಲಿತಾಂಶ ಹೊರಬರುವುದಕ್ಕೆ ಇನ್ನೂ ಸಮಯ ಬೇಕಾಗಿರಬಹುದು. ಅಸಂಪೂರ್ಣ ಮಾಹಿತಿ, ದಾಖಲೆಗಳ ಅಭಾವ ಅಥವಾ ಅರ್ಹತಾ ಕೊರತೆ ಇತ್ಯಾದಿ ಕಾರಣಗಳಿಂದ 2.24 ಲಕ್ಷ ಅರ್ಜಿಗಳು ತಿರಸ್ಕೃತಗೊಂಡಿವೆ.
ಬಿಪಿಎಲ್ ಕಾರ್ಡ್ ಪಡೆಯುವ ಅರ್ಹತೆ ಇಲ್ಲದ ಕಾರಣದಿಂದಲೋ ಅಥವಾ ವೈಯಕ್ತಿಕ ಕಾರಣಗಳಿಂದಲೋ 47,000 ಅರ್ಜಿದಾರರು ತಮ್ಮ ಅರ್ಜಿಗಳನ್ನು ಸ್ವಯಂ ಹಿಂಪಡೆದಿದ್ದಾರೆ. 2.86 ಲಕ್ಷ ಅರ್ಜಿಗಳು ಸಂಪೂರ್ಣವಾಗಿ ಅರ್ಹ ಎಂದು ಗುರುತಿಸಲಾಗಿದೆ. ಇವರಿಗೆ ತ್ವರಿತವಾಗಿ ಬಿಪಿಎಲ್ ಕಾರ್ಡ್ ವಿತರಣೆ ಮಾಡುವ ಕಾರ್ಯ ಆರಂಭವಾಗಲಿದೆ.

ಅತೀ ಹೆಚ್ಚು ಅರ್ಜಿ ಸಲ್ಲಿಕೆಯಾದ ಜಿಲ್ಲೆಗಳು
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ನಂತರ ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡ್’ಗೆ ಭಾರೀ ಬೇಡಿಕೆ ಬಂದಿದೆ. ರಾಜ್ಯಾದ್ಯಂತ ಲಕ್ಷಾಂತರ ಜನ ಹೊಸ ರೇಷನ್ ಕಾರ್ಡ್’ಗಾಗಿ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಈ ಪೈಕಿ ಬೆಳಗಾವಿ (35,823), ಕಲಬುರ್ಗಿ (32,178), ವಿಜಯಪುರ (21,237), ಬೆಂಗಳೂರು ಗ್ರಾಮಾಂತರ (17,186) ಹಾಗೂ ರಾಯಚೂರು (16,225) ಜಿಲ್ಲೆಗಳಲ್ಲಿ ಅತೀ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.
ಹೊಸ ಬಿಪಿಎಲ್ ಕಾರ್ಡ್ ವಿತರಣೆ ಯಾವಾಗ?
ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್. ಮುನಿಯಪ್ಪ ಅವರು ‘ಹೊಸ ಬಿಪಿಎಲ್ ಅರ್ಜಿ ಸ್ವೀಕಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ಪೂರ್ಣಗೊಂಡ ನಂತರ ಮುಂದಿನ ಹಂತದ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳಲಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರಸ್ತುತ ಹೊಸ ಅರ್ಜಿಗಳನ್ನು ಆಹ್ವಾನಿಸುವ ಪ್ರಕ್ರಿಯೆ ಸ್ಥಗಿತವಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿರುವ ಅರ್ಜಿದಾರರಲ್ಲಿ ಅರ್ಹತೆ ಪಡೆದವರಿಗೆ ಮೊದಲಿಗೆ ಕಾರ್ಡ್ ವಿತರಣೆ ಮಾಡಲಾಗುವುದು. ಪರಿಶೀಲನೆ ಹಂತದಲ್ಲಿರುವ ಅರ್ಜಿಗಳಿಗೆ ಕ್ರಮ ಕ್ರಮವಾಗಿ ತೀರ್ಮಾನವಾಗಲಿದೆ. ಸರ್ಕಾರದಿಂದ ಮುಂದಿನ ತೀರ್ಮಾನ ಬಂದ ನಂತರ ಮತ್ತೆ ಹೊಸ ಅರ್ಜಿ ಆಹ್ವಾನ ಆರಂಭವಾಗುವ ಸಾಧ್ಯತೆ ಇದೆ.
ಈ ಫಲಾನುಭವಿಗಳಿಗೆ ಮೊದಲಿಗೆ ಕಾರ್ಡ್ ವಿತರಣೆ
ಸದ್ಯಕ್ಕೆ ಈಗಾಗಲೇ ಸಲ್ಲಿಕೆಯಾಗಿರುವ 11.36 ಅರ್ಜಿಗಳ ಪೈಕಿ 2.86 ಲಕ್ಷ ಅರ್ಜಿಗಳು ಅರ್ಹವಾಗಿವೆ. ಮೊದಲಿಗೆ ಈ ಅರ್ಹ ಫಲಾನುಭವಿಗಳಿಗೆ ಕಾರ್ಡ್ ವಿತರಣೆ ಮಾಡಲಿದ್ದು; ನಂತರ ಹೊಸ ಅರ್ಜಿ ಪ್ರಕ್ರಿಯೆ ಆರಂಭಿಸುವುದಾಗಿ ಆಹಾರ ಇಲಾಖೆಯ ಮೂಲಗಳು ತಿಳಿಸಿವೆ.
ಬಿಪಿಎಲ್ ಕಾರ್ಡ್’ಗಳು ಸಮಾಜದ ದುರ್ಬಲ ವರ್ಗದವರು ಸರ್ಕಾರದ ಸಹಾಯಧನವನ್ನು ಪಡೆಯಲು ಪ್ರಾಥಮಿಕ ಹಂತವಾಗಿವೆ. ಈ ಹಿನ್ನೆಲೆಯಲ್ಲಿ 11.36 ಲಕ್ಷ ಅರ್ಜಿಗಳ ಸಂಖ್ಯೆ ಸ್ವತಃ ಎಷ್ಟು ಜನರು ಆರ್ಥಿಕವಾಗಿ ಸಂಕಷ್ಟದಲ್ಲಿರುವುದನ್ನು ತೋರಿಸುತ್ತದೆ. ಅರ್ಹ ಬಿಪಿಎಲ್ ಫಲಾನುಭವಿಗಳಿಗೆ ಸೂಕ್ತ ಸಮಯದಲ್ಲಿ ಕಾರ್ಡ್’ಗಳ ವಿತರಣೆಯಾಗುವ ನಿರೀಕ್ಷೆಯಿದೆ.
BPL Ration Card Update- ಹೊಸ ರೇಷನ್ ಕಾರ್ಡ್ ಅರ್ಜಿ | ಆಹಾರ ಇಲಾಖೆಯ ಮಹತ್ವದ ಮಾಹಿತಿ ಇಲ್ಲಿದೆ…