Osmanabadi Goat Farming : ಇದು ಮಹಾರಾಷ್ಟ್ರ ರಾಜ್ಯದ ಉಸ್ಮಾನಾಬಾದ್ ಮೂಲದ Osmanabadi Goat ವಿಶಿಷ್ಟ ತಳಿ ಆಡು. ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ‘ಕರಿ ಕುರಿ’ ಎಂದೇ ಸುಪ್ರಸಿದ್ಧವಾಗಿದೆ. ಈ ಭಾಗದಲ್ಲಿ ‘ಬಡವರ ಬಂಧು’ ಎಂಬ ವಿಶೇಷಣ ಬೇರೆ ಈ ಆಡಿಗಿದೆ. ಕರ್ನಾಟಕ, ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲಿ ಉಸ್ಮನಾಬಾದಿ ತಳಿ ಆಡು ರೈತರ ನಿಜವಾದ ತಳಿ ಎಂಬ ಗರಿಮೆಗೆ ಪಾತ್ರವಾಗಿದೆ.
ಮಹಾರಾರಾಷ್ಟ್ರ ರಾಜ್ಯದ ಉಸ್ಮಾನಾಬಾದ ಜಿಲ್ಲೆಯ ಮೂಲ ಸ್ಥಳವಾಗಿದ್ದು; ಸೋಲಾಪುರ, ತುಳಜಾಪುರ, ಲಾತೂರು, ಅಹಮದನಗರ ಹಾಗೂ ಪರಭಣಿ ಜಿಲ್ಲೆಗಳಲ್ಲಿ ಈ ಆಡು ಹೆಚ್ಚು ಕಾಣಸಿಗುತ್ತದೆ. ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಮತ್ತು ಮೇಡಕ್ ಜಿಲ್ಲೆಗಳಲ್ಲಿ ಅತೀ ಹೆಚ್ಚು ಸಾಕಲಾಗುತ್ತವೆ. ನಮ್ಮ ದೇಶದ ಎಲ್ಲಾ ರೀತಿಯ ಹವಾಮಾನಕ್ಕೂ ಹೊಂದಿಕೊಳ್ಳುವ ಗುಣ ಉಸ್ಮಾನಾಬಾದಿ ಆಡಿನದು.
ಉಸ್ಮಾನಾಬಾದಿ ಆಡಿನ ಗುಣಲಕ್ಷಣಗಳು
ಮಧ್ಯಮ ಗಾತ್ರದ ದೇಹ, ಮಧ್ಯಮ ಗಾತ್ರದ ಉದ್ದನೆಯ ಕಿವಿಗಳು, ಉದ್ದವಾದ ಕಾಲುಗಳು, ಕಪ್ಪು ಬಣ್ಣದ ಚರ್ಮ ಹೊಂದಿದ್ದು, ಬಿಳಿಯ ಹಾಗೂ ಕಂದು ಬಣ್ಣದ ಪಟ್ಟಿಗಳು ದೇಹದ ಮೇಲೆ ಇರುತ್ತವೆ.
ಗಂಡು ಆಡುಗಳು ಹಿಮ್ಮುಖವಾದ ಕೊಂಬನ್ನು ಹೊಂದಿರುತ್ತವೆ. ಕೆಲವು ಹೆಣ್ಣು ಆಡುಗಳು ಕೊಂಬನ್ನು ಹೊಂದಿದ್ದರೆ, ಮತ್ತೆ ಕೆಲವು ಹೆಣ್ಣು ಆಡುಗಳು ಕೊಂಬನ್ನು ಹೊಂದಿರುವುದಿಲ್ಲ. ಪ್ರೌಢಾವಸ್ಥೆಯ ಗಂಡು 36ರಿಂದ 40 ಕಿ.ಗ್ರಾಂ ಹಾಗೂ ಹೆಣ್ಣು 30ರಿಂದ 32 ಕಿ.ಗ್ರಾಂ ತೂಕ ಹೊಂದಿರುತ್ತವೆ.
ಈ ತಳಿಯ ಆಡುಗಳು ಅಧಿಕ ರೋಗ ನಿರೋಧಕ ಶಕ್ತಿ ಹೊಂದಿದ್ದು; ಅತಿವೃಷ್ಟಿ-ಅನಾವೃಷ್ಟಿ ಪರಿಸ್ಥಿತಿಯನ್ನು ತಡೆದುಕೊಳ್ಳುವ ಶಕ್ತಿ ಹೊಂದಿವೆ. ಈ ಆಡುಗಳ ಪಾಲನೆ ಹಾಗೂ ಪೋಷಣೆಗೆ ಹೆಚ್ಚಿನ ಕಾಳಜಿ ಬೇಕಿಲ್ಲ. ಬರಪೀಡಿತ, ಕಡಿಮೆ ನೀರು ಹೊಂದಿರುವ ಮತ್ತು ಕನಿಷ್ಟ ಗುಣಮಟ್ಟದ ಮೇವು ಹೊಂದಿರುವ ಪ್ರದೇಶಗಳಲ್ಲಿ, ಸುಡು-ಬಿಸಿಲು ಇರುವ ಪ್ರದೇಶಗಳಲ್ಲಿ ಇವು ಸಲೀಸಾಗಿ ಹೊಂದಿಕೊಳ್ಳುತ್ತವೆ.
Honge Krushi : ರೈತರ ಕೈ ಹಿಡಿಯುವ ಹೊಂಗೆ ಕೃಷಿ | ಹೊಂಗೆ ಬೆಳೆಯಲು ಸಿಗಲಿದೆ ನರೇಗಾ ನೆರವು
ವಿಶೇಷ ಆಹಾರದ ಅವಶ್ಯಕತೆ ಬೇಕಾಗುವುದಿಲ್ಲ, ಹಗಲು ಹೊತ್ತಿನಲ್ಲಿ ಮೇಯಿಸಿದರೆ ಸಾಕಾಗುತ್ತದೆ. ಬೆಳವಣಿಗೆ ಹಾಗೂ ಸಂತಾನೊತ್ಪತ್ತಿಯು ಈ ತಳಿಯಲ್ಲಿ ಅಧಿಕವಾಗಿದ್ದು, ಹೆಣ್ಣು ಮರಿ 15 ತಿಂಗಳಲ್ಲಿ ಪ್ರೌಢಾವಸ್ಥೆಗೆ ಬರುತ್ತವೆ.
ವರ್ಷಕ್ಕೆ ಎರಡು ಸಲ ಮರಿ ಹಾಕುತ್ತವೆ, ಅವಳಿ ಮತ್ತು ತ್ರಿವಳಿ ಮರಿಗಳೇ ಹೆಚ್ಚು. ಹೆಣ್ಣು ಆಡುಗಳು ಒಂದರಿ೦ದ ಒಂದೂವರೆ ಲೀಟರ್ ಅತ್ಯಂತ ಪೌಷ್ಟಿಕವಾದ ಹಾಲು ಕೊಡುತ್ತವೆ. ಈ ಹಾಲು ಮಕ್ಕಳಿಗೆ ಹಾಗೂ ಅಶಕ್ತರಿಗೆ ಪೌಷ್ಠಿದಾಯ. ಮಾಂಸವು ರುಚಿಕರವಾಗಿದ್ದು ಗ್ರಾಮೀಣ ಭಾಗದ ಮಾಂಸ ಪ್ರಿಯರಿಗೆ ನೆಚ್ಚಿನ ತಳಿಯಾಗಿದೆ. ಚರ್ಮಕ್ಕೂ ಹೆಚ್ಚು ಬೇಡಿಕೆ ಇದೆ.
ಉಸ್ಮಾನಾಬಾದಿ ಆಡಿನ ಸಾಕಾಣಿಕೆಯ ವಿಧಾನ
ಈ ಆಡುಗಳು ಸುಲಭವಾಗಿ ಎಲ್ಲಾ ರೀತಿಯ ವಾತಾರವಣಕ್ಕೆ ಹೊಂದಿಕೊಳ್ಳುವುದರಿ೦ದ ಕಮರ್ಷಿಯಲ್ ದೃಷ್ಠಿಯಿಂದ ಈ ತಳಿಯು ಸಾಕಾಣಿಕೆಗೆ ಸೂಕ್ತವಾಗಿದೆ. ಹೊರಗಡೆ ಮೇಯಿಸಿದರೆ ಮೇವು ಬೇಕಿಲ್ಲ. ಒಂದು ವೇಳೆ ಕೊಟ್ಟಿಗೆ ಪದ್ದತಿಯಲ್ಲಿ ಸಾಕಿದರೆ ಪ್ರತಿ ದಿನ 3ರಿಂದ 4 ಕಿ.ಗ್ರಾಂ ಒಣ ಮೇವು, 1 ಕಿ.ಗ್ರಾಂ ಹಸಿ ಮೇವು ಮತ್ತು 250 ಗ್ರಾಂ ಹಿಂಡಿ ಮಿಶ್ರಣ ನೀಡಬೇಕು.
ಮರುಕಟ್ಟೆ ವಿಚಾರಕ್ಕೆ ಬಂದರೆ ಉಸ್ಮಾನಾಬಾದಿ ಆಡಿನ ಮಾಂಸಕ್ಕೆ ಪ್ರತಿ 1 ಕಿ.ಗ್ರಾಂಗೆ 450 ರಿಂದ 600 ರೂಪಾಯಿಗಳಿಗೆ ಮಾರಾಟವಾಗುತ್ತದೆ. ಗಂಡು ಆಡುಗಳ ಮಾಂಸಕ್ಕೆ ಹೆಚ್ಚು ಬೇಡಿಕೆ ಇದೆ. ಗಂಡು ಆಡುಗಳ ಮೌಲ್ಯ 15 ಸಾವಿರ ರೂಪಾಯಿಗಿಂತ ಜಾಸ್ತಿ ಇದ್ದರೆ, ಗರ್ಭ ಧರಿಸಿದ ಹೆಣ್ಣು ಆಡುಗಳು 6000 ದಿಂದ 8000ದ ವರೆಗೆ ಮಾರಾಟವಾಗುತ್ತವೆ. ಈ ಮೇಕೆಯ ಹಾಲಿಗೆ ಭಾರಿ ಬೆಲೆ ಇದ್ದು; ಮಹಾನಗರಗಳಲ್ಲಿ ಒಂದು ಲೀಟರ್ ಹಾಲು ಸುಮಾರು 200-300 ರೂಪಾಯಿ ವರೆಗೂ ಮಾರಾಟವಾಗುತ್ತದೆ.
ಸಾಕಾಣಿಕೆಯ ಮುನ್ನೆಚ್ಚರಿಕೆ ಕ್ರಮಗಳು
ಶುದ್ಧವಾದ ನೀರು ಕುಡಿಸಬೇಕು. ಮೂರು ತಿಂಗಳಿಗೊಮ್ಮೆ ಜಂತುನಾಶಕ ಔಷಧಿ ಕುಡಿಸಬೇಕು. ಕರುಳು ಬೇನೆ ಹಾಗೂ ಹಿರೇ ಬೇನೆ ಲಸಿಕೆಗಳನ್ನು ವರ್ಷದಲ್ಲಿ ಎರಡು ಬಾರಿ ಹಾಕಿಸಬೇಕು. ಬೇಸಿಗೆಯಲ್ಲಿ ಆದಷ್ಟು ಮುಳ್ಳು ಕಡಿಮೆ ಇರುವ ಪ್ರದೇಶದಲ್ಲಿ ಮೇಯಿಸುವುದರಿಂದ ಮಳೆಗಾಲದಲ್ಲಿ ಗೊರಸಿನ ಹುಣ್ಣಿನ ತೊಂದರೆ ಕಡಿಮೆ ಮಾಡಬಹುದು. ಅದೇ ರೀತಿ 15 ದಿನಗಳಿಗೊಮ್ಮೆ ಸುಣ್ಣದ ಪುಡಿಯನ್ನು ಕೊಟ್ಟಿಗೆ ಶುದ್ದ ಮಾಡಿ ಸಿಂಪಡಿಸುವುದರಿ೦ದ ರೋಗಗಳನ್ನು ನಿಯಂತ್ರಿಸಬಹುದು.
ಉಸ್ಮಾನಾಬಾದಿ ತಳಿಯ ಆಡುಗಳ ಸಾಕಾಣಿಕೆ ಅತ್ಯಂತ ಸರಳವಾಗಿದ್ದು; ಮನೆಯಲ್ಲಿರುವ ಹೆಣ್ಣು ಮಕ್ಕಳೇ ಸುಲಭವಾಗಿ ನಿರ್ವಹಣೆ ಮಾಡಬಹುದಾಗಿದೆ. ಅಡ್ಡಾಡಿ ಮೇಯುವ ಗುಣವುಳ್ಳ ಈ ಆಡುಗಳಿಗೆ ಕೊಟ್ಟಿಗೆ ಪದ್ದತಿಯಲ್ಲಿ ಪಾಲನೆ ಮಾಡಿಸುವುದು ಬೇಡ. ಕಾಲಕಾಲಕ್ಕೆ ಜಂತುನಾಶಕ ಕುಡಿಸಬೇಕು. ಗಂಡು ಆಡುಗಳಗೆ ಉತ್ತಮ ಬೆಲೆ ಬಂದರೆ ಮಾರುವುದು ಲೇಸು.
ದಲ್ಲಾಳಿಗಳ ಬದಲು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದು ಉತ್ತಮ ಹಾಗೂ ಹೆಚ್ಚಿನ ಲಾಭವನ್ನು ಗಳಿಸಬಹುದು. ಈ ತಳಿಯ ಹೆಣ್ಣು ಆಡುಗಳಿಗೆ ಇದೇ ತಳಿಯ ಹೋತಗಳೊಂದಿಗೆ ಸಂಕರಣ ಮಾಡಿಸುವುದು ಒಳ್ಳೆಯದು.ಆಡಿನ ಮರಿಗಳ ಮೇಲೆ ಹೆಚ್ಚಿನ ನಿಗಾವಹಿಸಬೇಕು. ಉಸ್ಮಾನಾಬಾದಿ ಆಡು (Osmanabadi Goat ) ಸಾಕುವ ಮುನ್ನ ಅದೇ ತಳಿಯ ಆಡುಗಳನ್ನು ಸಾಕಿದ ಅನುಭವಿ ರೈತರೊಂದಿಗೆ ಸಲಹೆ ಅಥವಾ ಕೆಲಕಾಲ ಅವರ ಆಡುಗಳ ಪಾಲನೆ ಮಾಡಿ ನಂತರ ಸಾಕಾಣಿಕೆ ಪ್ರಾರಂಭಿಸುವುದು ಸೂಕ್ತ.
ಲೇಖಕರು : ಡಾ. ಅಣ್ಣಾರಾವ ಪಾಟೀಲ್