ಸರ್ಕಾರದ ಮೂಲಗಳ ಪ್ರಕಾರ ಗೃಹಲಕ್ಷ್ಮಿ ಯೋಜನೆಯ (GruhaLakshmi Scheme) ಬಾಕಿ ಹಣ (Due money) ಇದೇ ಮೇ 20ಕ್ಕೆ ಹಂತ ಹಂತವಾಗಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಈ ಕುರಿತ ಹೊಸ ಅಪ್ಡೇಟ್ ಇಲ್ಲಿದೆ…
ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಆಗದೆ ಇರುವುದರಿಂದ ರಾಜ್ಯದ ಹಲವೆಡೆ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗದಗ, ಧಾರವಾಡ, ಬೆಳಗಾವಿ, ತುಮಕೂರು, ಮಂಡ್ಯ, ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮಹಿಳೆಯರು ಅಸಮಾಧಾನ ಹೊರಹಾಕುತ್ತಿದ್ದಾರೆ.
ಇದು ಹೊಸ ಸಮಸ್ಯೆಯಲ್ಲ, ಕಳೆದ ಆರು ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ತಡವಾಗಿ ಅಥವಾ ತಿಂಗಳಿಗೆ ಸರಿಯಾಗಿ ಜಮಾ ಆಗುತ್ತಿಲ್ಲ. ತಾಂತ್ರಿಕ ಸಮಸ್ಯೆಯ ನೆಪದಲ್ಲಿ ದಿನ ದೂಡುತ್ತ ಬರಲಾಗುತ್ತಿದೆ. ಇದೀಗ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಇನ್ನೂ ಖಾತೆಗೆ ಬಾರದೇ ಉಳಿದಿದೆ. ಇದರಿಂದಾಗಿ ಅನೇಕ ಕಡೆಗಳಲ್ಲಿ ಮಹಿಳೆಯರು ರೊಚ್ಚಿಗೆದ್ದಿದ್ದಾರೆ.
ಮೂರು ತಿಂಗಳ ಬಾಕಿ ಹಣ ಒಟ್ಟಿಗೇ ಜಮಾ
ಗೃಹಲಕ್ಷ್ಮಿ ಯೋಜನೆ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿದ್ದು, ಇದರ ಅಡಿಯಲ್ಲಿ ರಾಜ್ಯದ ಪಡಿತರ ಚೀಟಿ ಹೊಂದಿರುವ ಕುಟುಂಬದ ಮಹಿಳೆಯರಿಗೆ ಪ್ರತಿ ತಿಂಗಳು ನಗದು ಸಹಾಯ ನೀಡಲಾಗುತ್ತದೆ.
ಈ ಯೋಜನೆಯನ್ನು 2023ರ ಆಗಸ್ಟ್’ನಲ್ಲಿ ಆರಂಭಿಸಲಾಗಿದ್ದು, ಇದೇ 2025ರ ಮೇ ತಿಂಗಳಿಗೆ ಈ ಯೋಜನೆ ಎರಡು ವರ್ಷವನ್ನು ಪೂರೈಸಲಿದೆ. ಈ ಹಿನ್ನಲೆಯಲ್ಲಿ ಬಾಕಿ ಉಳಿದಿರುವ ಎಲ್ಲಾ ಕಂತುಗಳ ಹಣವನ್ನು ಫಲಾನುಭವಿ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿತ್ತು.

ಅರ್ಧ ತಿಂಗಳು ಕಳೆದರೂ ಹಣದ ಸುಳಿವಿಲ್ಲ…
ಈ ಸಂಬಂಧ ಕೆಲವು ದಿನಗಳ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ‘ಮುಖ್ಯಮಂತ್ರಿಗಳ ಸಮ್ಮತಿ ದೊರೆತಿದೆ. ಮೂರು ತಿಂಗಳ ಹಣ ಒಂದೇ ತಿಂಗಳಲ್ಲಿ ಜಮಾ ಮಾಡಲಾಗುವುದು’ ಎಂದು ಅಧಿಕೃತ ಮಾಹಿತಿ ನೀಡಿದ್ದರು.
ತೀರಾ ಇತ್ತೀಚೆಗೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ರೈತ ಸಂಪರ್ಕ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ‘ಈ ತಿಂಗಳಲ್ಲಿ (ಮೇ) ಮೂರು ಕಂತುಗಳ ಹಣ ಜಮಾ ಮಾಡಲಾಗುವುದು’ ಎಂದು ಮತ್ತೆ ಭರವಸೆ ನೀಡಿದ್ದರು. ಆದರೆ, ಈ ಹೇಳಿಕೆಯಿಂದ ಈಗಾಗಲೇ ಅರ್ಧ ತಿಂಗಳು ಕಳೆದರೂ ಹಣದ ಪತ್ತೆಯಿಲ್ಲ.
Karnataka Weather Alert- ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ | ನಾಲ್ಕು ದಿನ ಯೆಲ್ಲೋ ಅಲರ್ಟ್ ಘೋಷಣೆ
ಗ್ಯಾರಂಟಿ ಸಮಿತಿಗಳ ನಿಷ್ಕ್ರಿಯತೆ
ಪಂಚ ಗ್ಯಾರಂಟಿಗಳ ಅನುಷ್ಠಾನ ಮೇಲ್ವಿಚಾರಣೆಗೆ ರಚಿಸಲಾಗಿರುವ ಜಿಲ್ಲಾ ಮಟ್ಟದ ಸಮಿತಿಗಳು ಕೇವಲ ಹೆಸರಿಗೆ ಮಾತ್ರ ಸೀಮಿತವಾಗಿವೆ ಎಂಬುದು ಇದೀಗ ಬಹಿರಂಗವಾಗುತ್ತಿದೆ. ಸಮಿತಿಯ ಸದಸ್ಯರು ಅಥವಾ ಅಧ್ಯಕ್ಷರು ಸ್ಥಳೀಯ ಮಟ್ಟದಲ್ಲಿ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರನ್ನು ಭೇಟಿ ಮಾಡದಿರುವುದು, ಈ ಬಗ್ಗೆ ಚರ್ಚೆ ಮಾಡದೆ ಬರೀ ಸಭೆಗಳಿಗೆ ಮಾತ್ರ ಸೀಮಿತವಾಗಿರುವುದರ ವಿರುದ್ಧವೂ ಅಸಮಾಧಾನ ವ್ಯಕ್ತವಾಗುತ್ತಿದೆ.
ಹಲವು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ದಿನಬಳಕೆಯ ಖರ್ಚು, ಮಕ್ಕಳ ಶಾಲಾ ಶುಲ್ಕ, ಬಾಡಿಗೆ, ಔಷಧಿ ಖರ್ಚು ಮೊದಲಾದ ಅನೇಕ ಅಗತ್ಯಗಳಿಗೆ ಬಳಸುತ್ತಿದ್ದಾರೆ. ಹಣ ಬಿಡುಗಡೆ ತಡವಾಗಿದ್ದರಿಂದ ಇದನ್ನೇ ಅವಲಂಬಿಸಿರುವ ಮಹಿಳೆಯರು ಗಂಭೀರ ತೊಂದರೆ ಅನುಭವಿಸುತ್ತಿದ್ದಾರೆ.
ಮೇ 20ರ ನಂತರವೇ ಹಣ?
ರಾಜ್ಯ ಸರ್ಕಾರದ ಆಡಳಿತಕ್ಕೆ ಎರಡು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಮೇ 20 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ‘ಎರಡು ವರ್ಷದ ಗ್ಯಾರಂಟಿ ಬದುಕು’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಮುಖ ಗ್ಯಾರಂಟಿ ಯೋಜನೆಗಳ ಪ್ರಗತಿಯನ್ನು ಜನತೆಯ ಮುಂದಿಡಲು ಸರ್ಕಾರ ಯೋಜಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ ಹಣವನ್ನು ಇದೇ ಕಾರ್ಯಕ್ರಮದ ವೇಳೆ ಅಥವಾ ಆನಂತರ ಹಂತ ಹಂತವಾಗಿ ಜಮಾ ಮಾಡುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ವ್ಯಕ್ತವಾಗುತ್ತಿದೆ. ಆದರೆ ಸರ್ಕಾರದಿಂದ ಇನ್ನೂ ಯಾವುದೇ ಅಧಿಕೃತ ತೀರ್ಮಾನ ಅಥವಾ ಪ್ರಕಟಣೆ ಬಂದಿಲ್ಲ. ಮೇ 20ರ ನಂತರವೂ ಹಣ ಜಮಾ ಆಗದಿದ್ದರೆ, ಮಹಿಳೆಯರ ಆಕ್ರೋಶ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ!
E-Swattu Circular 2025- ಗ್ರಾಮ ಪಂಚಾಯತಿಯಿಂದ ಇ-ಸ್ವತ್ತು ಇನ್ನಷ್ಟು ಸುಲಭ | ಸರ್ಕಾರದಿಂದ ಹೊಸ ಸುತ್ತೋಲೆ ಪ್ರಕಟ