ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ 2025ರ ಅಣಕು ಸೀಟು ಹಂಚಿಕೆ (CET Mock Seat Allotment) ಪ್ರಾರಂಭಕ್ಕೆ ಸಿದ್ಧತೆ ನಡೆಸಿದೆ. ಈ ಕುರಿತು ಕೆಇಎ ನೀಡಿದ ಲಭ್ಯ ಸೀಟುಗಳ ವಿವರ ಸೇರಿದಂತೆ ಇತ್ಯಾದಿ ಮಾಹಿತಿ ಇಲ್ಲಿದೆ…
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) 2025-26ನೇ ಶೈಕ್ಷಣಿಕ ಸಾಲಿನ ಇಂಜಿನಿಯರಿಂಗ್ ಸೇರಿ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಅಣಕು ಸೀಟು ಹಂಚಿಕೆ (Mock Allotment) ಪ್ರಕ್ರಿಯೆ ಆರಂಭಿಸಿದೆ. ಈ ಹಂತವು ವಿದ್ಯಾರ್ಥಿಗಳಿಗೆ ತಮ್ಮ ಆಯ್ಕೆ ಪಟ್ಟಿಗಳನ್ನು ಪರಿಶೀಲಿಸಿ ತಿದ್ದುಪಡಿ ಮಾಡುವ ಅವಕಾಶವನ್ನು ಒದಗಿಸುತ್ತದೆ.
2025-26ನೇ ಶೈಕ್ಷಣಿಕ ಸಾಲಿನ ಪ್ರವೇಶಕ್ಕಾಗಿ ಕೆಇಎ ನಿನ್ನೆ ಜುಲೈ 5ರಂದು ಅಂತಿಮ ಸೀಟು ಹಂಚಿಕೆ ಪಟ್ಟಿಯನ್ನು (Seat Matrix) ಪ್ರಕಟಿಸಿದೆ. ಕೆಇಎ ಪ್ರಕಟಿಸಿದ ಮಾಹಿತಿಯಂತೆ ಈ ವರ್ಷದ ಎಂಜಿನಿಯರಿಂಗ್ ಪ್ರವೇಶ ಸೀಟುಗಳ ಸಂಖ್ಯೆ ಕಳೆದ ವರ್ಷ 2024-25ರ ಸಾಲಿನಂತೆ ಈ ವರ್ಷವೂ ಸುಮಾರು 1.41 ಲಕ್ಷ ಸೀಟುಗಳು ಲಭ್ಯವಾಗಿವೆ.
ಈ ಬಾರಿಯ ಎಂಜಿನಿಯರಿಂಗ್ ಸೀಟುಗಳ ವಿವರ
ಕೆಇಎ ಬಿಡುಗಡೆ ಮಾಡಿದ ಅಂತಿಮ ಸೀಟ್ ಮ್ಯಾಟ್ರಿಕ್ಸ್’ನಲ್ಲಿ ಪ್ರಮುಖ ಕೋರ್ಸ್’ಗಳ ಸೀಟು ಲಭ್ಯತೆ ಹೀಗಿದೆ:
- ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್: 30,573 ಸೀಟುಗಳು
- ಕೃತಕ ಬುದ್ಧಿಮತ್ತೆ (AI): 7,209 ಸೀಟುಗಳು
- ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್: 19,407 ಸೀಟುಗಳು
- ಮಾಹಿತಿ ವಿಜ್ಞಾನ: 10,473 ಸೀಟುಗಳು
- ಮೆಕ್ಯಾನಿಕಲ್: 8,930 ಸೀಟುಗಳು
- ಸಿವಿಲ್: 8,280 ಸೀಟುಗಳು
ಅಣಕು ಸೀಟು ಹಂಚಿಕೆ ಪ್ರಕ್ರಿಯೆ ಆರಂಭ?
ಎಂಜಿನಿಯರಿಂಗ್ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಮೊದಲ ಹಂತವೇ ಅಣಕು (Mock) ಸೀಟು ಹಂಚಿಕೆ. ಇದು ವಿದ್ಯಾರ್ಥಿಗಳಿಗೆ ಅಂತಿಮ ಆಯ್ಕೆಗಳು ಹೇಗೆ ನಡೆಯಬಹುದು ಎಂಬ ಒಂದು ಮಾದರಿ ಅನುಭವವನ್ನು ನೀಡುತ್ತದೆ.
- ಅಣಕು ಹಂಚಿಕೆ ಫಲಿತಾಂಶದ ನಂತರ ವಿದ್ಯಾರ್ಥಿಗಳು ತಮ್ಮ ಕಾಲೇಜು-ಕೋರ್ಸ್ ಆದ್ಯತೆಗಳಲ್ಲಿ ತಿದ್ದುಪಡಿ ಮಾಡಬಹುದು.
- ಅಂತಿಮ ಹಂಚಿಕೆಗೂ ಮುನ್ನ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಇದು ಅವಕಾಶ ನೀಡುತ್ತದೆ.
- ಈ ಹಂತದಲ್ಲಿ ಮಾಡಲಾದ ಸೀಟು ಹಂಚಿಕೆ ಮೂಲ ಹಂಚಿಕೆ ಅಲ್ಲ; ತರಬೇತಿ ಅಥವಾ ಮಾರ್ಗದರ್ಶಕ ಹಂತ ಮಾತ್ರ.

ಈ ಕಾಲೇಜುಗಳ ಹೆಚ್ಚುವರಿ ಸೀಟು ಹೊರಗೆ
ಸೀಟ್ ಬ್ಲಾಕಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಬಿಎಂಎಸ್ ಎಂಜಿನಿಯರಿAಗ್ ಕಾಲೇಜು ಹಾಗೂ ನ್ಯೂ ಹೊರೈಜಾನ್ ಎಂಜಿನಿಯರಿಂಗ್ ಕಾಲೇಜು ಕಾಲೇಜುಗಳ ಹೆಚ್ಚುವರಿ ಸೀಟುಗಳನ್ನು ಈ ಬಾರಿ ಪಟ್ಟಿಯಿಂದ ಹೊರಗಿಡಲಾಗಿದೆ.
ಇವುಗಳಲ್ಲಿ ನಡೆದ ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ಪ್ರಕರಣದ ಹಿನ್ನೆಲೆಯಲ್ಲಿ ಈ ಹೆಚ್ಚುವರಿ ಸೀಟುಗಳನ್ನು ಅಂತಿಮ ಪಟ್ಟಿಯಿಂದ ತಾತ್ಕಾಲಿಕವಾಗಿ ಹೊರಗಿಡಲಾಗಿದೆ. ಉಳಿದ ಎಲ್ಲಾ ಕಾಲೇಜುಗಳ ಸೀಟುಗಳನ್ನು ಅಣಕು ಹಂಚಿಕೆಗಾಗಿ ಪರಿಗಣಿಸಲಾಗಿದೆ.
ಅಂತಿಮ ದಿನಾಂಕ ಶೀಘ್ರದಲ್ಲೇ ಪ್ರಕಟ
ಕೆಇಎ ಅಧಿಕೃತವಾಗಿ ತಿಳಿಸಿರುವಂತೆ, ಈಗ ಮೊದಲು ನೀಟ್ ಅಂಕಗಳ ಆಧಾರದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸ್’ಗಳ ಪ್ರವೇಶ ಸೀಟು ಹಂಚಿಕೆ ನಡೆಯಲಿದೆ.
ಅದರ ಮೊದಲ ಸುತ್ತಿನ ಹಂಚಿಕೆ ಪ್ರಕ್ರಿಯೆ ಮುಗಿದ ಮೇಲೆ ಎಂಜಿನಿಯರಿಂಗ್ ಮತ್ತು ಇತರೆ ವೃತ್ತಿ ಶಿಕ್ಷಣ ಕೋರ್ಸ್ಗಳ ಹಂಚಿಕೆ ನಡೆಯಲಿದೆ.ಅಂತಿಮ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಉಪಯುಕ್ತ ಸಲಹೆಗಳು
- ಅಣಕು ಹಂಚಿಕೆ ಫಲಿತಾಂಶವನ್ನು ಗಮನದಿಂದ ನೋಡಿ.
- ನೀವು ಕೊಟ್ಟಿರುವ ಆಯ್ಕೆಪಟ್ಟಿಯನ್ನು ಪರಿಶೀಲಿಸಿ, ಬೇಕಾದರೆ ಬದಲಾವಣೆ ಮಾಡಿ.
- ಕೊನೆ ಹಂಚಿಕೆಗೂ ಮುನ್ನ ನಿಮ್ಮ ಆದ್ಯತೆಗಳು ಸರಿಯಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ನಿಮ್ಮ ವೃತ್ತಿ ಆಸಕ್ತಿಯಂತೆ ಕೋರ್ಸ್ ಆಯ್ಕೆ ಮಾಡಿ. ಸ್ನೇಹಿತರು ಅಥವಾ ರ್ಯಾಂಕ್ ನೋಡಿ ಮಾತ್ರ ಆಯ್ಕೆ ಮಾಡಬೇಡಿ.
- ಸರ್ಕಾರಿ/ಎಜಿಎಂ ಕೋಟಾ ಸೀಟುಗಳು ಕಡಿಮೆ ವೆಚ್ಚದ ಉಪಯುಕ್ತ ಆಯ್ಕೆಯಾಗುತ್ತವೆ.
ಈ ಬಾರಿ ಕರ್ನಾಟಕ ಸರ್ಕಾರ ಮತ್ತು ಕೆಇಎ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕವಾಗಿ, ಆನ್ಲೈನ್ ಮೂಲಕ ಸರಳವಾಗಿ ನಡೆಸಲು ಮುಂದಾಗಿದೆ. ಅಣಕು ಹಂಚಿಕೆ ಹಂತದ ಸದುಪಯೋಗ ಪಡೆದು ತಮ್ಮ ಅಭಿಲಾಷೆಯ ಕೋರ್ಸ್ ಮತ್ತು ಕಾಲೇಜು ಆಯ್ಕೆ ಮಾಡಲು ವಿದ್ಯಾರ್ಥಿಗಳು ಸಿದ್ಧರಾಗಬೇಕು. ಉತ್ತಮ ಯೋಜನೆ ಮತ್ತು ಆಲೋಚನೆಯೊಂದಿಗೆ ಆಯ್ಕೆ ಮಾಡಿದರೆ ಭವಿಷ್ಯದ ವೃತ್ತಿಜೀವನಕ್ಕೆ ಅದು ಬಲವಾದ ಅಡಿಪಾಯವಾಗುತ್ತದೆ.