ರಾಜ್ಯ ಸರ್ಕಾರ ಅಕ್ಟೋಬರ್’ನಿಂದ ರಾಜ್ಯಾದ್ಯಂತ ಅಂಗನವಾಡಿಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು (Anganwadi LKG UKG Classes) ಆರಂಭಿಸಲು ತೀರ್ಮಾನಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಹತ್ವಾಕಾಂಕ್ಷಿ ಯೋಜನೆಯಂತೆ, ಈ ವರ್ಷ ಅಕ್ಟೋಬರ್ ತಿಂಗಳಿಂದ ರಾಜ್ಯದ ಅಂಗನವಾಡಿಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಅಧಿಕೃತವಾಗಿ ಆರಂಭಿಸಲು ತೀರ್ಮಾನಿಸಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪ್ರತ್ಯೇಕ ಇಲಾಖೆಯಾಗಿ ರೂಪುಗೊಂಡು ಈ ಅಕ್ಟೋಬರ್ 2ರಂದು 50ನೇ ವಾರ್ಷಿಕೋತ್ಸವ ಆಚರಿಸಲಿದೆ. ಈ ಸಂದರ್ಭದಲ್ಲಿ, ರಾಜ್ಯದ ಕೆಲವು ಆಯ್ದ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸುವ ಮೂಲಕ ಬದಲಾವಣೆಯ ಆರಂಭಕ್ಕೆ ರಾಜ್ಯ ಸರ್ಕರ ಮುಂದಾಗಿದೆ.
ಈ ಯೋಜನೆಯು 2023ರ ಜುಲೈನಲ್ಲಿ ಬೆಂಗಳೂರು ನಗರದ ರಾಜಾಜಿನಗರದ ಅಂಗನವಾಡಿಯಲ್ಲಿ ಪ್ರಾಯೋಗಿಕವಾಗಿ ಆರಂಭಗೊಂಡಿತು. ಆಗ ಬೆಂಗಳೂರಿನಲ್ಲಿ ಮೊದಲ ಹಂತದಲ್ಲಿ 250 ಕೇಂದ್ರಗಳಲ್ಲಿ ತರಗತಿಗಳು ನಡೆಯಬೇಕೆಂದು ತೀರ್ಮಾನವಾಗಿದ್ದರೂ ಅನುದಾನದ ಕೊರತೆಯಿಂದ ವಿಳಂಬವಾಯಿತು. ಇದೀಗ ಈ ಯೋಜನೆಗೆ ಹೊಸ ಬಲ ನೀಡಲಾಗುತ್ತಿದೆ.
ಸ್ಮಾರ್ಟ್ ಕ್ಲಾಸ್ ಹಾಗೂ ಕನ್ನಡ-ಇಂಗ್ಲಿಷ್ ಮಾಧ್ಯಮ
ನೂತನ ಯೋಜನೆಯಡಿಯಲ್ಲಿ ಮಕ್ಕಳಿಗೆ ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳಲ್ಲಿ ಶಿಕ್ಷಣ ನೀಡಲಾಗುತ್ತದೆ. ಪಠ್ಯಕ್ರಮವು ಮಕ್ಕಳ ಮನಸ್ಸಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದ್ದು, ಆಟದ ಮೂಲಕ ಕಲಿಕೆ, ದೃಶ್ಯ-ಶ್ರವ್ಯ ಸಾಧನಗಳ ಬಳಕೆ, ಸೃಜನಶೀಲ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಬೋಧನೆಗೆ ಆಸಕ್ತಿ ಬೆಳೆಸಲಾಗುತ್ತದೆ.
ಇದಕ್ಕಾಗಿ ರಾಜ್ಯ ಸರ್ಕಾರ ಅಂಗನವಾಡಿಗಳಿಗೆ ಸ್ಮಾರ್ಟ್ ಟಿವಿ, ಕಲಿಕಾ ಸಾಮಗ್ರಿಗಳು, ಪಠ್ಯ ಪುಸ್ತಕ, ಬ್ಯಾಗ್, ಸಮವಸ್ತ್ರಗಳ ಒದಗಿಸಲಿದೆ. ಪ್ರತಿ ಅಂಗನವಾಡಿಗೆ ಸರಾಸರಿ 5 ಲಕ್ಷ ರೂಪಾಯಿ ಅನುದಾನ ಬೇಕಾಗುತ್ತಿದ್ದು, ಹಂತ ಹಂತವಾಗಿ ಈ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ.
ಟೀಚರ್ ನೇಮಕಾತಿ ಹೇಗೆ?
ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಾಗಿ ಸರ್ಕಾರ ಸದ್ಯಕ್ಕೆ ಹೊಸ ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ನೇಮಕಾತಿಗೆ ಬದಲಾಗಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರೇ ಪಾಠ ಮಾಡಲಿದ್ದಾರೆ.
ರಾಜ್ಯದ 69,000 ಅಂಗನವಾಡಿಗಳಲ್ಲಿ ಸುಮಾರು 17,000ಕ್ಕೂ ಹೆಚ್ಚು ಪದವೀಧರ ಕಾರ್ಯಕರ್ತೆಯರು ಇದ್ದಾರೆ. ಇವರಿಗೆ ವಿಶೇಷ ತರಬೇತಿ ನೀಡಲಾಗುತ್ತಿದ್ದು, ಪಠ್ಯ ಬೋಧನೆ, ಮಕ್ಕಳ ಆರೈಕೆ, ಮನೋರಂಜನೆ ಹಾಗೂ ಕೌಶಲ್ಯಾಭಿವೃದ್ಧಿಯ ನಿಟ್ಟಿನಲ್ಲಿ ತಯಾರಾಗುತ್ತಿದ್ದಾರೆ.
ಯಾವೆಲ್ಲ ಮಕ್ಕಳಿಗೆ ಎಲ್‌ಕೆಜಿ, ಯುಕೆಜಿ ಶಿಕ್ಷಣ?
ಈ ಯೋಜನೆಯ ಅಡಿಯಲ್ಲಿ ಪ್ರತಿ ಅಂಗನವಾಡಿ ಕೇಂದ್ರದಲ್ಲಿ 25 ಮಕ್ಕಳಿಗೆ ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಣ ಒದಗಿಸಲಾಗುತ್ತದೆ. 3-6 ವರ್ಷದೊಳಗಿನ ಮಕ್ಕಳು ಅಂಗನವಾಡಿಗಳಿಗೆ ಹಾಜರಾಗಲಿದ್ದು, 4-5 ವರ್ಷದ ಮಕ್ಕಳಿಗೆ ಎಲ್‌ಕೆಜಿ ತರಗತಿ ಹಾಗೂ 5-6 ವರ್ಷದ ಮಕ್ಕಳಿಗೆ ಯುಕೆಜಿ ತರಗತಿ ಬೋಧನೆ ನೀಡಲಾಗುತ್ತದೆ.
ಪಠ್ಯ ಕ್ರಮವನ್ನು NCERT ಶೈಲಿಯಲ್ಲಿ ಅಥವಾ ಮೌಲ್ಯಾಧಾರಿತ ಶಿಕ್ಷಣ ಮಾದರಿಯಲ್ಲಿ ರೂಪಿಸಲಾಗುವುದು. ಮಕ್ಕಳ ಶಾರೀರಿಕ, ಮಾನಸಿಕ, ಭಾವನಾತ್ಮಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಪೂರಕವಾಗಿ ಪಾಠಗಳನ್ನು ರೂಪಿಸಲಾಗುತ್ತದೆ.
ಅಂಗನವಾಡಿಗಳ ಅಭಿವೃದ್ಧಿಯ ಹಾದಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 1975ರಲ್ಲಿ ಸಮಾಜ ಕಲ್ಯಾಣದಿಂದ ವಿಭಜನೆಗೊಂಡು ಪ್ರತ್ಯೇಕ ಇಲಾಖೆಯಾಗಿ ರೂಪುಗೊಂಡಿದೆ. ಇದೇ 1975ರ ಅಕ್ಟೋಬರ್ 2ರಂದು ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನಲ್ಲಿ ಪ್ರಾಯೋಗಿಕವಾಗಿ 100 ಅಂಗನವಾಡಿಗಳೊಂದಿಗೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ICDS) ಆರಂಭಿಸಲಾಯಿತು. ಇಂದು ರಾಜ್ಯದ ಎಲ್ಲ ತಾಲೂಕುಗಳಿಗೂ ಈ ಯೋಜನೆಯ ವ್ಯಾಪ್ತಿ ವಿಸ್ತರಿಸಿದೆ.
ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರು ಹಾಗೂ 6 ವರ್ಷಕ್ಕೆ ಒಳಗಿನ ಮಕ್ಕಳ ಆರೈಕೆ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ಈಗ ಈ ಯೋಜನೆ ಶಿಕ್ಷಣದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಡುತ್ತಿದೆ.
ಈ ಯೋಜನೆಯು ಕೇವಲ ಶಿಶು ಶಿಕ್ಷಣಕ್ಕೆ ಮಾತ್ರವಲ್ಲ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೌಲ್ಯವನ್ನೂ ಏರಿಸಲು ಸಹಾಯಕವಾಗಲಿದೆ. ಅಂಗನವಾಡಿಗಳನ್ನು ನೂತನ ರೀತಿಯಲ್ಲಿ ಶಿಕ್ಷಣದ ಕೇಂದ್ರಗಳಾಗಿ ರೂಪಿಸುವ ಈ ಹೆಜ್ಜೆಯು ಗ್ರಾಮೀಣ, ನಗರ ಪ್ರದೇಶಗಳಲ್ಲಿ ಮಕ್ಕಳ ಭವಿಷ್ಯವನ್ನೇ ರೂಪಿಸಬಲ್ಲದು.