ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಸುಲಭಗೊಳಿಸುವ (SSLC Exam New Rules) ನಿಟ್ಟಿನಲ್ಲಿ KSEAB ಸಿದ್ಧತೆ ನಡೆಸಿದ್ದು; ಇದರಿಂದ SSLC ಬೋರ್ಡ್ ಪರೀಕ್ಷೆ ತೇರ್ಗಡೆ ಭಾರೀ ಸುಲಭವಾಗಲಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಸುಲಭಗೊಳಿಸಲು ಮತ್ತು ಹೆಚ್ಚು ವಿದ್ಯಾರ್ಥಿಗಳ ತೇರ್ಗಡೆಯ ಪ್ರಮಾಣ ಹೆಚ್ಚಿಸಲು ಹೊಸ ಪದ್ಧತಿ ಪರಿಚಯಿಸಲು ಯೋಜನೆ ರೂಪಿಸಿದೆ. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, 2026ರ ಮಾರ್ಚ್/ಏಪ್ರಿಲ್ ಪರೀಕ್ಷೆಗಳಿಂದಲೇ ಈ ನಿಯಮ ಜಾರಿಯಾಗುವ ಸಾಧ್ಯತೆ ಇದೆ.
ಕೇವಲ 33% ಅಂಕ ಪಡೆದರೆ ಪಾಸ್
ಇನ್ನು ಮುಂದೆ ಕರ್ನಾಟಕದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಿಬಿಎಸ್‌ಇ ಮಾದರಿಯಲ್ಲಿ ನಡೆಯಲಿದೆ. ಪ್ರಸ್ತುತ ಸಿಬಿಎಸ್‌ಇನಲ್ಲಿ ಪ್ರತಿ ವಿಷಯಕ್ಕೆ ತಲಾ 100 ಅಂಕವಿದ್ದು; ಇದರಲ್ಲಿ ಲಿಖಿತ ಪರೀಕ್ಷೆಗೆ 80 ಅಂಕಗಳು ಹಾಗೂ ಆಂತರಿಕ ಮೌಲ್ಯಮಾಪನಕ್ಕೆ 20 ಅಂಕಗಳನ್ನು ನಿಗದಿಪಡಿಸಲಾಗಿದೆ. ಆ ಪ್ರಕಾರ ಕೇವಲ 33% ಅಂಕ ಪಡೆದರೆ ತೇರ್ಗಡೆ ಆಗಬಹುದು.
ಇದೇ ಮಾದರಿಯನ್ನು ಕರ್ನಾಟಕವೂ ಅಳವಡಿಸಲಿದೆ. ಇದರಿಂದ ವಿದ್ಯಾರ್ಥಿಗಳಿಗೆ ಒಟ್ಟು ಅಂಕಗಳಲ್ಲಿ ಶೇಕಡಾ 33 ಅಂಕ ಬಂದರೆ ಸಾಕು ತೇರ್ಗಡೆಯಾಗಲಿದ್ದಾರೆ. ಉದಾಹರಣೆಗೆ, 20 ಆಂತರಿಕ ಅಂಕ ಪಡೆದ ವಿದ್ಯಾರ್ಥಿಗೆ ಲಿಖಿತ ಪರೀಕ್ಷೆಯಲ್ಲಿ ಕೇವಲ 13 ಅಂಕ ಪಡೆದರೂ ಕೂಡ ಆತ ಪಾಸ್ ಆಗಲಿದ್ದಾರೆ.
PMFME Scheme- ಊರಲ್ಲೇ ಉದ್ಯಮ ಸ್ಥಾಪಿಸಲು 15 ಲಕ್ಷ ರೂ. ಸಹಾಯಧನ | ರೈತರು, ಮಹಿಳೆಯರು, ಯುವಕರಿಂದ ಅರ್ಜಿ ಆಹ್ವಾನ
ಪ್ರಥಮ ಭಾಷೆ 125ರಿಂದ 100 ಅಂಕಕ್ಕೆ ಇಳಿಕೆ
ಇಲ್ಲಿವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಅಥವಾ ಪ್ರಥಮ ಭಾಷೆಗೆ 125 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಇನ್ನು ಮುಂದೆ ಪ್ರಥಮ ಭಾಷೆಯೂ ಇತರ ವಿಷಯಗಳಂತೆ 100 ಅಂಕಗಳಿಗೆ ಮಿತಿಗೊಳ್ಳಲಿದೆ. ಹಿಂದೆ ಇದ್ದ ಒಟ್ಟು 625 ಅಂಕಗಳ ಬದಲಾಗಿ, ಹೊಸ ಪದ್ಧತಿಯಲ್ಲಿ ಒಟ್ಟು 600 ಅಂಕಗಳು ಇರಲಿವೆ.
ಪ್ರತಿ ವಿಷಯಕ್ಕೂ 80 ಅಂಕ ಲಿಖಿತ ಪರೀಕ್ಷೆ ಮತ್ತು 20 ಅಂಕ ಆಂತರಿಕ ಮೌಲ್ಯಮಾಪನನ ಅಂಕವಾಗಿರುತ್ತದೆ. ಅಟೆಂಡನ್ಸ್, ಶ್ರದ್ಧೆ, ಪ್ರವೃತ್ತಿ, ಪ್ರಾಜೆಕ್ಟ್, ಹಾಜರಿ ಮುಂತಾದ ಆಧಾರದಲ್ಲಿ ಈ ಆಂತರಿಕ ಅಂಕಗಳನ್ನು ಶಾಲೆಗಳಲ್ಲೇ ನೀಡಲಾಗುತ್ತದೆ.

ಪರೀಕ್ಷಾ ಪ್ರಶ್ನೆಪತ್ರಿಕೆ ವಿನ್ಯಾಸ ಕೂಡ ಬದಲು
ಗಣೇಶ್ ಭಟ್ ಅಧ್ಯಕ್ಷತೆಯಲ್ಲಿ ರೂಪಿಸಲಾದ ಪರೀಕ್ಷೆ ಸುಧಾರಣಾ ಸಮಿತಿಯು ಪ್ರಶ್ನೆಪತ್ರಿಕೆ ವಿನ್ಯಾಸವನ್ನು ಕೂಡ ಹೆಚ್ಚು ವಿದ್ಯಾರ್ಥಿ ಸ್ನೇಹಿಯಾಗಿ ಮಾಡಲು ಶಿಫಾರಸು ಮಾಡಿದೆ.
ಒಂದು ಅಂಕದ ಬಹು ಆಯ್ಕೆ (MCQ) ಪ್ರಶ್ನೆಗಳ ಸಂಖ್ಯೆ ಹೆಚ್ಚಳವಾಗಲಿದ್ದು; ಎರಡು, ಮೂರು ಅಥವಾ ನಾಲ್ಕು ಪ್ರಶ್ನೆಗಳಿದ್ದು ಯಾವುದಾದರೂ ಒಂದಕ್ಕೆ ಉತ್ತರ ಬರೆಯಲು ಅವಕಾಶವಿರುತ್ತದೆ.
ಕೃಪಾಂಕ ಪದ್ಧತಿ ಸಂಪೂರ್ಣ ಸ್ಥಗಿತ
ಇನ್ನು ಕೋವಿಡ್ ಕಾಲದಲ್ಲಿ ಕಲಿಕಾ ನಷ್ಟ ಸರಿಪಡಿಸಲು ಕೃಪಾಂಕ (Grace Marks) ಪದ್ಧತಿ ಜಾರಿಗೆ ತರಲಾಗಿತ್ತು. 2021-22ರಲ್ಲಿ 3 ವಿಷಯ ಪಾಸಾಗಿದ್ದರೆ ಉಳಿದ 3 ವಿಷಯಗಳಿಗೆ 10 ಅಂಕದ ಕೃಪಾಂಕ ನೀಡಲಾಗುತ್ತಿತ್ತು. 2024ರಲ್ಲಿ ವೆಬ್‌ಕಾಸ್ಟಿಂಗ್ ಪ್ರಾರಂಭದ ನಂತರ ಅರ್ಹ ಅಂಕಗಳನ್ನು ಶೇಕಡಾ 25ಕ್ಕೆ ಇಳಿಸಿ, ಗರಿಷ್ಠ 20 ಕೃಪಾಂಕ ನೀಡಲಾಯಿತು.
2024ರ ಪರೀಕ್ಷೆಯಲ್ಲಿ ಪರೀಕ್ಷೆ ಬರೆಯುತ್ತಿದ್ದ 8.59 ಲಕ್ಷ ವಿದ್ಯಾರ್ಥಿಗಳಲ್ಲಿ ಸುಮಾರು 1.69 ಲಕ್ಷ ವಿದ್ಯಾರ್ಥಿಗಳು ಕೃಪಾಂಕದ ಆಧಾರದಲ್ಲಿ ಪಾಸಾಗಿದ್ದರು. ಈ ಬಗ್ಗೆ ಕ್ರಮೇಣ ಟೀಕೆಗಳು ವ್ಯಕ್ತವಾಗಿದ್ದರಿಂದ ಮತ್ತೆ ಗರಿಷ್ಠ 10 ಕೃಪಾಂಕಕ್ಕೆ ಮಿತಿಗೊಳಿಸಲಾಯಿತು.
ಈ ಬಾರಿ ಹೊಸ ಸಿಬಿಎಸ್‌ಇ ಮಾದರಿಯ ಅಳವಡಿಕೆಯ ಬಳಿಕ ಕೃಪಾಂಕ ಪದ್ಧತಿಯನ್ನು ಸಂಪೂರ್ಣವಾಗಿ ನಿಲ್ಲಿಸಲು ನಿರ್ಧರಿಸಲಾಗಿದೆ.
ಸರ್ಕಾರದ ಒಪ್ಪಿಗೆ ನಂತರ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಈ ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ನೀಡಿದ್ದು, ಸರ್ಕಾರ ಅನುಮೋದಿಸಿದ ಬಳಿಕ ಅಧಿಕೃತ ಆದೇಶ ಹೊರಡಿಸಲಾಗುತ್ತದೆ. ಯೋಜನೆಯಂತೆ 2026ರ ಮಾರ್ಚ್/ಏಪ್ರಿಲ್ ಪರೀಕ್ಷೆಗಳಿಂದಲೇ ಈ ಹೊಸ ವಿಧಾನ ಜಾರಿಗೆ ಬರಲಿದೆ.
ಈ ವಿಧಾನವನ್ನು ಸರ್ಕಾರ ಅಧಿಕೃತವಾಗಿ ಅನುಮೋದಿಸಿದ ಬಳಿಕ, ಶಾಲೆಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೊಸ ಮಾದರಿಯನ್ನು ಅರ್ಥ ಮಾಡಿಕೊಂಡು ತಯಾರಿ ನಡೆಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.